More

    ಅಪರಿಚಿತ ಯುವಕನ ಮೃತದೇಹ ಪತ್ತೆ ಪ್ರಕರಣ: ಒಡಿಶಾ ಮೂಲದ ಇಬ್ಬರನ್ನು ಬಂಧಿಸಿದ ಪೊಲೀಸರು

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
    ಒಡಿಶಾ ಮೂಲದ ರಂಜಿತ್ ಪ್ರಧಾನ್(೩೦) ಮತ್ತು ರಮೇಶ್(೩೨) ಬಂಧಿತರು. ಆರೋಪಿಗಳು ಮೇ ೯ ರಂದು ಕೆ.ಎಸ್.ಗಾರ್ಡನ್ ನಿವಾಸಿ ಸತ್ಯ ಎಂಬಾತನ ಜತೆ ಜಗಳ ಮಾಡಿ, ತಳ್ಳಿದ್ದು, ಆತ ವಿದ್ಯುತ್ ತಂತಿ ಮೇಲೆ ಬಿದ್ದು ಮೃತಪಟ್ಟಿದ್ದ. ಆ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿಗಳು, ಸಂಪಂಗಿರಾಮನಗರದ ಮಿಷನ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸವಾಗಿದ್ದರು. ಮೇ ೯ರಂದು ರಾತ್ರಿ ತಡರಾತ್ರಿ ಸತ್ಯ ಮದ್ಯದ ಅಮಲಿನಲ್ಲಿ ಆರೋಪಿಗಳು ವಾಸ್ತವ್ಯ ಹೂಡಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದಾನೆ. ಅದನ್ನು ಕಂಡ ಆರೋಪಿಗಳು, ಯಾರು ನೀನು? ಇಲ್ಲಿಗೆ ಏಕೆ ಬಂದಿರುವೇ? ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಮತ್ತು ಸತ್ಯ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಸತ್ಯನನ್ನು ಆರೋಪಿಗಳು ಜೋರಾಗಿ ತಳ್ಳಿದ್ದಾರೆ. ಆತ ರಸ್ತೆ ಬದಿ ತುಂಟಾಗಿ ಬಿದ್ದಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದರಿಂದ ಗಾಬರಿಗೊಂಡ ಆರೋಪಿಗಳು, ಸತ್ಯನ ಮೃತದೇಹವನ್ನು ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಮತ್ತೊಂದು ಕಟ್ಟಡದ ಬಳಿ ಎಸೆದು ಪರಾರಿಯಾಗಿದ್ದರು. ಮೇ ೧೦ರಂದು ಬೆಳಗ್ಗೆ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅಕ್ಕ-ಪಕ್ಕದ ನಿವಾಸಿಗಳನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

    ಸಿಸಿ ಕ್ಯಾಮರಾದಿಂದ ಮೃತನ ಸುಳಿವು ಪತ್ತೆ:
    ಕೆಲ ದಿನಗಳ ಬಳಿಕ ಸ್ಥಳೀಯ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಮೃತ ವ್ಯಕ್ತಿಯ ಹೆಸರು ಸತ್ಯ ಎಂಬುದು ಗೊತ್ತಾಗಿದೆ. ಬಳಿಕ ಆತನ ಪಾಲಕರಿಗೆ ಮಾಹಿತಿ ನೀಡಿದಾಗ, ಅವರು, ತಮ್ಮ ಪುತ್ರ ಪ್ರೀತಿಸುತ್ತಿದ್ದ ಅಪ್ರಾಪ್ತೆಯ ಕುಟುಂಬ ಸದಸ್ಯರು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಅವರು ಕೂಡ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆ ನಂತರ ಅನುಮಾನದ ಮೇರೆಗೆ ಮೃತದೇಹ ಪತ್ತೆಯಾದ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ೩೦೪ (ಕೊಲೆಗೆ ಸಮನಾದ ನರಹತ್ಯೆ) ಅಡಿ ಕೇಸ್ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts