More

    ಟೇಕ್ ಆಫ್​ ಆಗದ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ

    ಆರ್​​.ತುಳಸಿಕುಮಾರ್​

    ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರಕ್ಕೆ ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸಿ ಇಲ್ಲಿನ ಜನರ ಜೀವನ ಮಟ್ಟ ಸುಧಾರಿಸುವ ಆಶಯದೊಂದಿಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರಕಟಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗೆ ಅಗತ್ಯ ಅನುದಾನ ಹಾಗೂ ನಿರಂತರ ಮೇಲ್ವಿಚಾರಣೆ ಕೊರತೆಯಿಂದ ಸೊರಗಿದಂತಾಗಿದೆ.

    ಬರೋಬರಿ 6 ತಿಂಗಳು ಹಿಂದೆ ರೂಪುಗೊಂಡ ಬ್ರ್ಯಾಂಡ್ ಬೆಂಗಳೂರು ‘ನಾಗರಿಕರ ಧ್ವನಿ ಸರ್ಕಾರದ ಧ್ವನಿ’ ಘೋಷವಾಕ್ಯದೊಂದಿಗೆ ಭಾರೀ ಸದ್ದು ಮಾಡಿತು. ಸರ್ಕಾರ ಹೊಸ ಹಾದಿ ಸಾಗಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಹುರುಪಿನಿಂದ ಕೆಲಸ ಮಾಡಿದರು. ಸರ್ಕಾರೇತರ ಸಂಸ್ಥೆಗಳು ಕೂಡ ಕೈಜೋಡಿಸಿ ಬೆಂಗಳೂರು ಅಭಿವೃದ್ಧಿಯ ಕನಸನ್ನು ಕಂಡವು. ಆದರೆ, ಸಮಯ ಉರುಳಿದಂತೆ ಬ್ರ್ಯಾಂಡ್ ಕಾರ್ಯಕ್ರಮಗಳು ಕೇವಲ ಕಾರ್ಯಕ್ರಮಗಳಾಗಿ ಆಚರಿಸಲ್ಪಟ್ಟವೇ ವಿನಾ ನಗರ ಹಾಗೂ ಜನರಿಗೆ ಸಿಗಬೇಕಿದ್ದ ಸೌಲಭ್ಯಗಳಲ್ಲಿ ಪ್ರತಿಲನಗೊಳ್ಳಲಿಲ್ಲ. ಇದರ ಪರಿಣಾಮ ಇತರ ಯೋಜನೆಗಳಂತೆ ‘ಬ್ರ್ಯಾಂಡ್ ಬೆಂಗಳೂರು’ ಕೂಡ ಪೂರ್ಣ ಪ್ರಮಾಣದಲ್ಲಿ ಟೇಕ್ ಆಫ್​ ಆಗದೆ ಸಾರ್ವಜನಿಕರನ್ನು ನಿರಾಸೆಗೊಳಿಸಿದೆ.

    ಕಳೆದ ವರ್ಷ ಹೊಸ ಸರ್ಕಾರ ಅಧಿಕಾರಕ್ಕೇರಿದ ಬಳಿಕ ರಾಜಧಾನಿ ಅಭಿವೃದ್ಧಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಸಲುವಾಗಿ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಜನರ ಮುಂದಿಟ್ಟಿತು. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳ ಮೂಲಕ ಸ್ಪಷ್ಟ ಚೌಕಟ್ಟು ನೀಡಲಾಯಿತು. ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆ ಹೇಗೆ ಇರಬೇಕು, ಇದರ ಅನುಷ್ಠಾನ ಹೇಗೆ, ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬಿತ್ಯಾದಿ ಅಂಶಗಳಿಗೆ ಒತ್ತು ನೀಡಲಾಯಿತು. ಆ ಬಳಿಕ ನಾಗರಿಕರಿಂದ ಸರಿಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಅವುಗಳಲ್ಲಿ ಸೂಕ್ತವಾದವುಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಲಾಯಿತು. ಕಾಲಮಿತಿಯೊಳಗೆ ‘ಬ್ರ್ಯಾಂಡ್ ಬೆಂಗಳೂರು’ ಕನಸನ್ನು ಕಾರ್ಯರೂಪಕ್ಕಿಳಿಸಲು ಸ್ವತ: ಡಿಸಿಎಂ ಅವರೇ ಉಸ್ತುವಾರಿ ವಹಿಸಿಕೊಂಡರು. ಇದರ ಜಾರಿಗಾಗಿ ಹತ್ತಾರು ಸಭೆ, ಸಂವಾದದಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನು ಹುರಿದುಂಬಿಸಿದ್ದರೂ, ನಂತರದಲ್ಲಿ ಅದೇ ಉತ್ಸಾಹ ಕಾಣಲಿಲ್ಲ. ಲೋಕಸಭಾ ಚುನಾವಣೆ ನೆಪ ಮಾಡಿ ‘ಬ್ರ್ಯಾಂಡ್ ಬೆಂಗಳೂರು’ ಕಾರ್ಯಕ್ರಮಗಳು ನೇಪಥ್ಯಕ್ಕೆ ಸರಿದು ಜನರಿಗೆ ಅನುಕೂಲ ಆಗಲಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

    ಘೋಷಿತ ಯೋಜನೆಗಳಿಗೆಲ್ಲ ಬ್ರ್ಯಾಂಡ್ ಲೇಬಲ್:

    ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸುವ ವೇಳೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿಯವರು ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸಲು ‘ಬ್ರ್ಯಾಂಡ್ ಬೆಂಗಳೂರು’ ರೂಪಿಸಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಸಂಪನ್ಮೂಲ ಹೆಚ್ಚಳ, ಸಂಚಾರ ದಟ್ಟಣೆ, ಗುಣಮಟ್ಟದ ರಸ್ತೆಗಳ ನಿರ್ಮಾಣ, ಉತ್ತಮ ಸಾರ್ವಜನಿಕ ಸಾರಿಗೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಚ – ಸುಂದರ ಬೆಂಗಳೂರು ನಿರ್ಮಿಸುವ ವಾಗ್ದಾನ ನೀಡಿದ್ದರು. ನಂತರದಲ್ಲೂ ‘ಬ್ರ್ಯಾಂಡ್ ಬೆಂಗಳೂರು’ ಜಾರಿಗೆ ಬದ್ಧ ಎಂಬುದಾಗಿ ಪ್ರತಿಪಾದಿಸಿದ್ದರು. ಆದರೆ, ರಾಜಧಾನಿ ಅಭಿವೃದ್ಧಿಗೆ ನೀಡಬೇಕಿದಷ್ಟು ಆರ್ಥಿಕ ನೆರವನ್ನು ಪ್ರಕಟಿಸಲಿಲ್ಲ. ಬದಲಾಗಿ ಕೆಲ ಕಾರ್ಯಕ್ರಮಗಳನ್ನು ಪಾಲಿಕೆ ಹೆಗಲೇರಿಸಿ ಕೈತೊಳೆದುಕೊಂಡಿತು. ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಭಾರದಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಸಿಗಬೇಕಿದ್ದ ಸಿಂಹಪಾಲು ಆಯವ್ಯಯ ಕೈತಪ್ಪಿತು. ನಗರ ಪ್ರತಿನಿಧಿಸುವ ಶಾಸಕರು ಸಮರ್ಥವಾಗಿ ದನಿಯೆತ್ತದ ಕಾರಣ ಸಕಾಲಕ್ಕೆ ಹಣ ಬಿಡುಗಡೆ ಕಾಣಲಿಲ್ಲ.

    ಇತ್ತ ಬಿಬಿಎಂಪಿ ಕೂಡ ತನ್ನ ಬಜೆಟ್‌ನಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಕೇಂದ್ರಿತವಾಗಿಯೇ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿ ಮೆಚ್ಚುಗೆ ಗಳಿಸಿತು. ಜತೆಗೆ 8 ಪ್ರಮುಖ ಅಂಶಗಳಡಿ ಕಾಯಕ್ರಮಗಳ ಜಾರಿಗೆ 1,580 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದು ದಾಖಲೆ ಎಂದು ಬಿಂಬಿಸಲಾಯಿತು. ಆದರೆ, ಬಜೆಟ್ ನಂತರ ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ಯಾವೊಂದು ಕಾರ್ಯಕ್ರಮವೂ ಜಾರಿಗೆ ಬಂದಿಲ್ಲ. ಲೋಕಸಭಾ ಚುನಾವಣೆ ಕಾಲದಲ್ಲಿ ನೀತಿ ಸಂಹಿತೆ ಅಡ್ಡಿಯಾಗಲಿದೆ ಎಂಬ ನೆಪ ಮಾಡಿ ದಿನದೂಡಲಾಗುತ್ತಿದೆ. ಲೋಕ ಸಮರದ ಫಲಿತಾಂಶ ಜೂ.4ರಂದು ಹೊರಬೀಳಲಿದ್ದು, ಅಲ್ಲಿಯವರೆಗೂ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸದ ಸ್ಥಿತಿ ನಿರ್ಮಾಣವಾಗಿದೆ.

    ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯ ವಿಭಾಗಗಳು:

    ಸುಗಮ ಸಂಚಾರ
    ಸ್ವಚ್ಚತೆ
    ಹಸಿರು, ಪರಿಸರ
    ಶಿಕ್ಷಣ
    ಆರೋಗ್ಯ
    ಟೆಕ್-ತಂತ್ರಜ್ಞಾನ
    ನೀರಿನ ಭದ್ರತೆ
    ವೈಬ್ರೆಂಟ್ ಬೆಂಗಳೂರು

    ಅಹವಾಲು ಆಲಿಸಿದ್ದೇ ಸಾಧನೆ:

    ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ನಗರದ ನಾಗರಿಕರಿಗೆ ವಿವಿಧ ಸೌಲಭ್ಯ ಒದಗಿಸುವುದು ಹಾಗೂ ಅವರ ಸಮಸ್ಯೆಗಳ ಆಲಿಕೆಗಾಗಿ ಡಿಸಿಎಂ ನೇತೃತ್ವದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮವನ್ನು ಆಯೋಜಿಸಿತು. ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ 2-3 ವಿಧಾನಸಭಾ ಕ್ಷೇತ್ರಗಳಿಗೆ ಪಾಲಿಕೆ ವಲಯವಾರು ಬೃಹತ್ ಸಭೆಗಳನ್ನು ನಡೆಸಿ ಅಹವಾಲು ಆಲಿಸಲಾಯಿತು. ಪ್ರತಿ ಸಭೆಯಲ್ಲಿ ಸಾವಿರಾರು ಜನರು ಸಮಸ್ಯೆಗಳನ್ನು ಹೇಳಿಕೊಂಡು ಕೆಲವೊಂದಕ್ಕೆ ಪರಿಹಾರ ಪಡೆದರು. ಆರ್ಥಿಕ ನೆರವು ಯಾಚಿಸುವ ಅರ್ಜಿಗಳನ್ನು ಆಯಾ ಇಲಾಖೆಗೆ ವರ್ಗಾಯಿಸಿ ಬಗೆಹರಿಸುವ ಸೂಚನೆ ನೀಡಲಾಯಿತು. ಈ ಒಂದು ಕಾರ್ಯಕ್ರಮ ಯಶಸ್ಸು ಪಡೆದರೂ, ಬಾಕಿ ಉಳಿದಿದ್ದ ಅರ್ಜಿಗಳ ವಿಲೇವಾರಿಯಲ್ಲಿ ಎಂದಿನಂತೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಂಡಿತು.

    ತುರ್ತು ಕೆಲಸಗಳಿಗೆ ಸಿಗಲಿ ಆದ್ಯತೆ:

    ನಗರದ ಅಭಿವೃಧ್ಧಿಗೆ ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದು ಅಗತ್ಯ ಇದ್ದರೂ, ಜನರು ನಿತ್ಯ ಅನುಭವಿಸುವ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಿರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆ, ನೈರ್ಮಲ್ಯ, ಚರಂಡಿಗಳ ಸ್ವಚ್ಚತೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರೆ ಸ್ಥಳೀಯ ಜನರಿಗೆ ಬಹಳಷ್ಟು ಅನುಕೂಲ ಆಗಲಿದೆ ಎಂಬ ಸಲಹೆ ಮಾಜಿ ಕಾರ್ಪೊರೇಟರ್‌ಗಳು ನೀಡಿದ್ದಾರೆ.

    ಜರೂರು ಆಗಬೇಕಿರುವುದು ಏನು?:

    * ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ಘೋಷಿಸಿರುವ ಪ್ರತಿಯೊಂದು ವಿಭಾಗಕ್ಕೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ ಜಾರಿಗೊಳಿಸುವುದು.
    * ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ, ಹೆಚ್ಚುವರಿ ಸಂಪನ್ಮೂಲ ಹೊಂದಿಸುವುದು.
    * ಎಲ್ಲ ಯೋಜನೆಗಳ ಜಾರಿಗೆ ನಗರ ಅಭಿವೃದ್ಧಿಯಲ್ಲಿ ಪಾಲುದಾರ ಸಂಸ್ಥೆಗಳ ಮುಖ್ಯಸ್ಥರ ಸಮನ್ವಯ ಸಭೆ ನಿಯಮಿತವಾಗಿ ನಡೆಸುವುದು.
    * ನಗರದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರನ್ನು ತಲುಪುವ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ ನೀಡುವುದು.
    * ಜನರ ಸಹಕಾರದಲ್ಲಿ ಅನುಷ್ಠಾಕ್ಕೆ ತರಬಹುದಾದ ‘ಕೆರೆ ಮಿತ್ರ’, ‘ಹಸಿರು ಮಿತ್ರ’ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವುದು.
    * ಪ್ರತೀ ವಾರ ಪಾಲಿಕೆ ಮುಖ್ಯಸ್ಥರು, 15 ದಿನಗಳಿಗೊಮ್ಮೆ ಡಿಸಿಎಂ ಪರಾಮರ್ಶನಾ ಸಭೆ ನಡೆಸಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಬೇಕು.
    * ಸಂಚಾರ ದಟ್ಟಣೆ, ಕುಡಿಯುವ ನೀರು, ಕೆರೆಗಳ ಪುನಶ್ಚೇತನ, ಮಳೆ ಅನಾಹುತ ಕಾಮಗಾರಿಗಳ ಪ್ರಗತಿಗೆ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸಿ ಜವಾಬ್ದಾರಿ ವಹಿಸುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts