More

    ಹೋರಾಟವೇ ಇಲ್ಲದೆ ಗ್ರಾಮ ಪಂಚಾಯಿತಿ ಗೆಲ್ಲುವ ತಂತ್ರ: ಬೆಂಬಲಿತ ಅಭ್ಯರ್ಥಿಗಳ ಪರ ಪಕ್ಷಗಳ ಪ್ರಚಾರ ಆರಂಭ 

    ರಾಮನಗರ: ಗ್ರಾಮೀಣ ಗದ್ದುಗೆ ಗುದ್ದಾಟಕ್ಕೆ ಮಹೂರ್ತ ನಿಗದಿಯಾಗಿದ್ದು, ಒಂದೆಡೆ ರಾಜಕೀಯ ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಭಿಸಿದ್ದರೆ, ಮತ್ತೊಂದೆಡೆ ಸದ್ದಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಹೋರಾಟವೇ ಇಲ್ಲದೆ ಯುದ್ಧ ಗೆಲ್ಲುವ ತಂತ್ರಗಾರಿಕೆ ಚುರುಕಾಗಿದೆ.

    ಇತ್ತೀಚಿನ ಚುನಾವಣೆಗಳು ದುಬಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಹೊಂದಾಣಿಕೆ ಮೂಲಕ ಸದಸ್ಯ ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡು ಅವಿರೋಧ ಆಯ್ಕೆ ಮಾಡಿಕೊಳ್ಳುವ ಕೆಲಸಗಳೂ ಆರಂಭವಾಗಿವೆ.

    ಲಕ್ಷ ಲಕ್ಷಕ್ಕೆ ಬಿಕರಿ: ಜಿಲ್ಲೆಯಲ್ಲಿ ಹಿಂದೆ ಎದುರಾಳಿಗಳಿಲ್ಲದ ಕಾರಣ ಅವಿರೋಧ ಆಯ್ಕೆ ನಡೆಯುತಿತ್ತು. ಆದರೆ, ಕಳೆದ ಅವಧಿಯಲ್ಲಿ ಜಿಲ್ಲೆಯ ಒಟ್ಟು 1,953 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 257 ಮಂದಿ ಅವಿರೋಧ ಆಯ್ಕೆಯಾಗಿದ್ದರು. ಈ ಪ್ರಮಾಣ ಕಡಿಮೆ ಎನಿಸಿದರೂ ಆಯ್ಕೆಗೊಂಡ ವಿಧಾನ ಮಾತ್ರ ಆತಂಕಕ್ಕೆ ಕಾರಣವಾಗಿತ್ತು. ಚುನಾವಣೆ ನಡೆಸದೇ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಕೆಲವು ಗ್ರಾಮಗಳಲ್ಲಿ ಸದಸ್ಯತ್ವ ಸ್ಥಾನ 2ರಿಂದ 5 ಲಕ್ಷ ರೂ.ವರೆಗೂ ಹರಾಜಿನಲ್ಲಿ ಬಿಕರಿಯಾಗಿದ್ದವು. ಚುನಾವಣೆ ನಡೆಸಲೂ ಹಣ ಖರ್ಚು ಮಾಡಬೇಕು, ಇದರ ಬದಲು ಗ್ರಾಮದ ದೇವಸ್ಥಾನ ಕಟ್ಟಿಸುತ್ತೇವೆ, ಸಮುದಾಯ ಭವನ ಕಟ್ಟಿಸೋಣ ಎಂದು ಹೇಳಿಕೊಂಡು ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡಿಕೊಳ್ಳಲಾಗಿತ್ತು.

    ಈಗಲೂ ನಡೆದಿದೆ ಸಿದ್ದತೆ: ಕಳೆದ ಬಾರಿಯಂತೆ ಈ ಬಾರಿಯೂ ಅವಿರೋಧ ಆಯ್ಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಹಣಬಲವುಳ್ಳವರು ಪ್ರಭಾವಿಗಳು ಸದಸ್ಯತ್ವ ಖರೀದಿಗೆ ಮುಂದಾಗಿದ್ದು, ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿ ಅವರನ್ನು ಖರೀದಿ ಮಾಡುವ ಪ್ರಯತ್ನಗಳನ್ನು ನಡೆಸಿದ್ದಾರೆ.

    ಆರಂಭಗೊಂಡ ವಾಕ್ಸಮರ: ಜಿಲ್ಲೆಯಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಡುವೆ ಚುನಾವಣೆ ಘೊಷಣೆ ಆಗುತ್ತಿದ್ದಂತೆ ವಾಕ್ಸಮರ ಆರಂಭಗೊಂಡಿದೆ. ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾರು ಏನೆಲ್ಲಾ ಕೊಡುಗೆ ನೀಡಿದ್ದೇವೆ ಎನ್ನುವ ಪಟ್ಟಿಯನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯುವ ಕಸರತ್ತು ಆರಂಭಿಸಿದ್ದಾರೆ.

    ತಲೆ ಬೇನೆ: ಗ್ರಾಮೀಣ ಭಾಗದಲ್ಲಿ ಸ್ಪರ್ಧೆಗೆ ಆಕಾಂಕ್ಷಿಗಳ ದಂಡೇ ಇರುವುದು ಪಕ್ಷದ ಮುಖಂಡರಿಗೆ ತಲೆಬೇನೆ ತಂದೊಡ್ಡಿದೆ. ಕೆಲವು ಕಡೆ ಎರಡಕ್ಕಿಂತ ಹೆಚ್ಚು ಮಂದಿ ತಮಗೇ ಟಿಕೆಟ್ ನೀಡುವಂತೆ, ಮತ್ತೆ ಕೆಲವರು ಪ್ರಭಾವ ಬಳಸಿ ಟಿಕೆಟ್ ಪಡೆಯಲು ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈಗ ಯಾರನ್ನೇ ಎದುರು ಹಾಕಿಕೊಂಡರೂ ಮುಂದೆ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಮುಖಂಡರು ಅಳೆದೂ ತೂಗಿ ಅಭ್ಯರ್ಥಿಗಳ ಅಂತಿಮ ಆಯ್ಕೆಯಲ್ಲಿ ನಿರತರಾಗಿದ್ದಾರೆ.

    ಕಳೆದ ಚುನಾವಣೆ ವಿವರ

    2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು 1,696 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕನಕಪುರ ತಾಲೂಕಿನ 40 ಗ್ರಾಪಂಗಳ 714 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 140 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, 537 ಸ್ಥಾನಗಳಿಗೆ ಮತದಾನ ನಡೆದಿತ್ತು. ಚನ್ನಪಟ್ಟಣದ 32 ಗ್ರಾಪಂಗಳ 482 ಸ್ಥಾನಗಳಲ್ಲಿ 70 ಅವಿರೋಧ ಆಯ್ಕೆಯಾಗಿದ್ದರೆ, 411 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ರಾಮನಗರ ತಾಲೂಕಿನ 20 ಗ್ರಾಪಂಗಳ 362 ಸ್ಥಾನಗಳಲ್ಲಿ 25 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, 337 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹಾಗೂ ಮಾಗಡಿಯ 28 ಗ್ರಾಪಂಗಳ 398 ಸ್ಥಾನಗಳಲ್ಲಿ 22 ಸ್ಥಾನಗಳು ಅವಿರೋಧ ಆಯ್ಕೆಯಾದರೆ, 375 ಸ್ಥಾನಗಳಿಗೆ ಮತದಾನ ನಡೆದಿತ್ತು. ಚುನಾವಣೆ ಕಣದಲ್ಲಿ ಒಟ್ಟು 4,312 ಮಂದಿ ಕಣದಲ್ಲಿ ಇದ್ದರು. ಇವರಲ್ಲಿ 2,058 ಮಹಿಳೆಯರು ಮತ್ತು 2,254 ಪುರುಷರು ಕಣದಲ್ಲಿದ್ದರು.

    2 ಹಂತದ ಚುನಾವಣೆ

    ಜಿಲ್ಲೆಯಲ್ಲಿ 2 ಹಂತದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಡಿ. 22ರಂದು ರಾಮನಗರ ತಾಲೂಕಿನ 20 ಗ್ರಾಪಂ ಹಾಗೂ ಕನಕಪುರ ತಾಲೂಕಿನ 36 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಡಿ.27ರಂದು ಚನ್ನಪಟ್ಟಣ ತಾಲೂಕಿನ 32 ಮತ್ತು ಮಾಗಡಿ ತಾಲೂಕಿನ 30 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

    ಎಚ್​ಡಿಕೆಗೆ ಬಾಲಕೃಷ್ಣ ಲೇವಡಿ

    ಕೂಟಗಲ್ ಹೋಬಳಿ ಮಟ್ಟದ ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳನ್ನು ತಮ್ಮ ಮನೆ ಬಾಗಿಲಿಗೆ ಕರೆಸಿಕೊಂಡು ಕೆಲಸ ಮಾಡಿಸಿಕೊಳ್ಳಬೇಕು. ಅದುಬಿಟ್ಟು ಪ್ರತಿಯೊಂದಕ್ಕೂ ಹಾಲಿ ಮುಖ್ಯಮಂತ್ರಿ ಹಾಗೂ ಸಚಿವರ ಮನೆ ಬಾಗಿಲಿಗೆ ಹೋಗಿ ಬರುತ್ತಿರುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಸಹವಾಸ ಮಾಡುವುದಿಲ್ಲ ಎಂದು ಈಗಾಗಲೇ ಎಚ್​ಡಿಕೆ ಹೇಳಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 124 ಸ್ಥಾನ ಗೆಲ್ಲುವುದು ಆಗದ ಮಾತು. ಹಾಗೊಂದು ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಇವರನ್ನೇನೂ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಲೇವಡಿ ಮಾಡಿದರು.

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts