More

    ಜಲಜೀವನ ಮಿಶನ್ ಕಾಮಗಾರಿ ಅವೈಜ್ಞಾನಿಕ

    ಕಾರವಾರ: ಜಲಜೀವನ ಮಿಶನ್ ಅಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿರುವ ಬಗ್ಗೆ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.

    ಮಿಶನ್ ಅಡಿ ಶೇ.10 ರಷ್ಟು ಪಾಲನ್ನು ಬಳಕೆದಾರರು ಭರಿಸಬೇಕು ಎಂದಿದೆ. ಆದರೆ, ಅದಕ್ಕಾಗಿ ಸಂಬಂಧಪಟ್ಟವರ ಸಭೆ ಮಾಡಿ ಜನರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತು ಯೋಜನೆ ಮಾಡಿದ್ದಾರೆ. ನಿಜವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಾಮಗಾರಿ ಹಾಕಿಲ್ಲ ಎಂದು ಪ್ರದೀಪ ನಾಯಕ, ಪುಷ್ಪಾ ನಾಯ್ಕ, ಶಿವಾನಂದ ಕಡತೋಕಾ, ಜಿ.ಎನ್.ಹೆಗಡೆ ಸೇರಿ ಹಲವರು ಆಕ್ಷೇಪಿಸಿದರು. ಸರ್ಕಾರದ ಮಾರ್ಗಸೂಚಿಯಂತೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ತಾಂತ್ರಿಕ ಸಮಸ್ಯೆಗಳಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಗತ್ಯವಿದ್ದಲ್ಲಿ ಮುಂದಿನ ವರ್ಷ ಯೋಜನೆ ರೂಪಿಸಲಾಗುವುದು ಎಂದು ಸಿಇಒ ಪ್ರಿಯಾಂಗಾ ಮಾಹಿತಿ ನೀಡಿದರು.

    ಜಯಶ್ರೀ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂತೋಷ ರೇಣಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೈತ್ರಾ ಕೊಠಾರಕರ್, ಉಷಾ ಉದಯ ನಾಯ್ಕ ವೇದಿಕೆಯಲ್ಲಿದ್ದರು.

    ಕಾಮಗಾರಿ ನಡೆಸದೇ ಬಿಲ್ ಪಾವತಿ: ಭಟ್ಕಳ ತಾಲೂಕಿನಲ್ಲಿ ನೆರೆ ಪರಿಹಾರ ಕಾಮಗಾರಿಗಳನ್ನು ಹಲವೆಡೆ ನಡೆಸದೇ ಸಣ್ಣ ನೀರಾವರಿ ಇಲಾಖೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದೆ. ಬೇಂಗ್ರೆ ಗ್ರಾಪಂ ವ್ಯಾಪ್ತಿಯ ಗೊಂಡನ ಮನೆಯ ಕೃಷಿ ಭೂಮಿ ಬಂಡ್ ನಿರ್ಮಾಣ ಕಾಮಗಾರಿಯ ಬಿಲ್ ಆಗಿರುವ ಬಗ್ಗೆ ದಾಖಲೆ ಇದೆ. ಇದಕ್ಕೆ ಜಿಪಂ ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅಲ್ಬರ್ಟ್ ಬರ್ನಲ್ ಡಿಕೋಸ್ಟಾ ಆಕ್ಷೇಪಿಸಿದರು. ತನಿಖೆ ನಡೆಸಿ, ಅಕ್ರಮ ನಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಪ್ರಿಯಾಂಗಾ ಭರವಸೆ ನೀಡಿದರು. ಆದರೂ ಅದರಿಂದ ಸಮಾಧಾನಗೊಳ್ಳದ ಡಿಕೋಸ್ಟಾ ಸಭೆ ಬಿಟ್ಟು ಹೊರ ನಡೆದರು.

    ಅಧ್ಯಕ್ಷರ ಟೇಬಲ್ ಎದುರು ಧರಣಿ: ಹೊನ್ನಾವರ ತಾಲೂಕಿನ ಪಾವಿನಕುರ್ವಾದಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ವ ಸಮರ್ಪಕ ಯೋಜನೆ ಮಾಡದೇ ಅನುಷ್ಠಾನ ಸಂದರ್ಭದಲ್ಲಿ ಕಾಮಗಾರಿ ತಡೆ ಹಿಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಕ್ರಮ ಖಂಡಿಸಿ ಶಿವಾನಂದ ಹೆಗಡೆ ಕಡತೋಕಾ ಜಿಪಂ ಅಧ್ಯಕ್ಷೆ ಎದುರು ಧರಣಿ ಕುಳಿತರು. 15 ದಿನದಲ್ಲಿ ಕಾಮಗಾರಿ ಮರು ಪ್ರಾರಂಭಿಸುವುದಾಗಿ ಕಳೆದ ಸಭೆಯಲ್ಲಿ ಸಿಕ್ಕ ಭರವಸೆ ಹುಸಿಯಾಗಿದೆ ಎಂದರು. ಶೀಘ್ರ ಕ್ರಮ ವಹಿಸುವ ಸಿಇಒ ಪ್ರಿಯಾಂಗಾ ಭರವಸೆಯ ಬಳಿಕ ಪ್ರತಿಭಟನೆ ಹಿಂಪಡೆದರು.

    ರ್ಚಚಿಸಿದ ವಿಚಾರ: ಜಿಪಂ ಸಭಾಭವನದ ಮೈಕ್​ಗಳು ಸರಿಯಾಗಿಲ್ಲ. ಜಿಪಂ ಸಭಾಭವನ ನವೀಕರಣ ಕಾಮಗಾರಿಯನ್ನು ಇಂಜಿನಿಯರಿಂಗ್ ವಿಭಾಗ ಬಿಟ್ಟು ನಿರ್ವಿುತಿ ಕೇಂದ್ರಕ್ಕೆ ವಹಿಸಿದ ಬಗ್ಗೆ ಉಷಾ ಹೆಗಡೆ, ಶಿವಾನಂದ ಕಡತೋಕಾ ಸೇರಿ ಹಲವರು ಆಕ್ಷೇಪ.

    ಪರಿಶಿಷ್ಟ ಪಂಗಡಕ್ಕೆ (ಎಸ್​ಟಿ)ಮೀಸಲಿಟ್ಟ ಅನುದಾನವನ್ನು ಕರ್ನಾಟಕ ನೀರಾವರಿ ನಿಗಮ ಶಿರಸಿಯಲ್ಲಿ ಎಸ್​ಟಿ ಸಮುದಾಯದವರಿಲ್ಲದ ಪ್ರದೇಶದಲ್ಲಿ ಬಳಸಿದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಆಕ್ಷೇಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts