More

    ಕರೊನಾ ನಿರ್ವಹಣೆಗೆ 3.87 ಕೋಟಿ ಖರ್ಚು

    ಹಾವೇರಿ: ಕರೊನಾ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲೆಗೆ 5.95 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಈವರೆಗೆ 3.87 ಕೋಟಿ ರೂ. ಖರ್ಚಾಗಿದೆ. 2 ಕೋಟಿ ರೂ.ಗಳನ್ನು ಹಾವೇರಿ ಜಿಲ್ಲಾಸ್ಪತ್ರೆ ಮತ್ತು ರಾಣೆಬೆನ್ನೂರಿನಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್​ಗಳಿಗಾಗಿ ವೆಚ್ಚ ಮಾಡಲಾಗಿದೆ ಎಂದು ಎಡಿಸಿ ಎಂ. ಯೋಗೇಶ್ವರ ತಿಳಿಸಿದರು.

    ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಈವರೆಗೆ ಸರ್ಕಾರದಿಂದ ಎಷ್ಟು ಹಣ ಬಂದಿದೆ. ಎಷ್ಟು ಖರ್ಚಾಗಿದೆ ಎಂದು ಗುರುವಾರ ಆಯೋಜಿಸಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

    ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಅಲ್ಲದೆ, 7 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್​ಗಳನ್ನು ಸ್ಥಾಪಿಸಿ 50 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಸೋಂಕಿತರಿಗೆ ಆಹಾರ ಪೂರೈಸಲಾಗುತ್ತಿದೆ. ಒಂದು ದಿನಕ್ಕೆ 250 ರೂ.ಗಳನ್ನು ಸೋಂಕಿತರ ಊಟಕ್ಕಾಗಿ ಖರ್ಚು ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 5 ಲಕ್ಷ ರೂ., ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ 2 ಲಕ್ಷ ರೂ., ಔಷಧಕ್ಕಾಗಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

    ಕರೊನಾದಿಂದ ಮೃತರಾದವರ ಶವ ಸಂಸ್ಕಾರಕ್ಕೆ ಅಲ್ಲಲ್ಲಿ ಗ್ರಾಮಸ್ಥರು ಅಡ್ಡಿಪಡಿಸುತ್ತಿರುವ ಕುರಿತು ಸದಸ್ಯರ ಪ್ರಶ್ನೆಗಳಿಗೆ ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ಉತ್ತರಿಸಿ, ‘ಮೃತ ವ್ಯಕ್ತಿಯ ದೇಹದಿಂದ ಬೇರೊಬ್ಬರಿಗೆ ಸೋಂಕು ಹರಡುವುದಿಲ್ಲ. ತಪ್ಪು ಕಲ್ಪನೆಯಿಂದ ಶವ ಸಂಸ್ಕಾರಕ್ಕೆ ಅಡ್ಡಿ ಮಾಡುವುದು ಬೇಡ. ಸೋಂಕಿನಿಂದ ಮೃತಪಟ್ಟವರ ಶವವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದರು.

    ಸಿಇಒ ರಮೇಶ ದೇಸಾಯಿ ಮಾತನಾಡಿ, ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ಜೀವಹೋದ ನಾಲ್ಕು ತಾಸಿನವರೆಗೆ ವೈರಸ್ ಜೀವಂತವಾಗಿರುತ್ತದೆ. ಈ ವೈರಸ್ ಪರಾವಲಂಬಿ ಜೀವಿಯಾಗಿರುವುದರಿಂದ ಸ್ವಂತವಾಗಿ ಬೆಳೆಯಲು ಅಥವಾ ಜೀವಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸೋಂಕಿನಿಂದ ಸತ್ತ ವ್ಯಕ್ತಿಯ ಶವವನ್ನು ನಾಲ್ಕೈದು ತಾಸು ಆಸ್ಪತ್ರೆಯಲ್ಲೇ ಇರಿಸಿ ಸೋಂಕು ನಿವಾರಕ ಔಷಧ ಸಿಂಪಡಿಸಿ ಪಿಪಿಇ ಕಿಟ್​ನಿಂದ ಪ್ಯಾಕ್ ಮಾಡಲಾಗುತ್ತದೆ. ನಿಯಮಾವಳಿ ಅನುಸಾರ ಸುರಕ್ಷತಾ ಸಾಧನ ಬಳಸಿ ಸರ್ಕಾರದ ವತಿಯಿಂದಲೇ ಸಂಸ್ಕಾರ ಮಾಡಲಾಗುತ್ತದೆ. ಆರು ಅಡಿ ಗುಂಡಿ ತೋಡಿ ವೈರಸ್ ನಾಶಕ ಔಷಧ ಸಿಂಪಡಣೆ ಮಾಡಿ ಆಳದ ಮಣ್ಣಿನಲ್ಲಿ ಹೂಳಲಾಗುತ್ತದೆ. ಈ ಎಲ್ಲ ಸುರಕ್ಷತಾ ಕಾರಣಗಳಿಂದ ಯಾವುದೇ ಕಾರಣಕ್ಕೂ ಮೃತದೇಹದಿಂದ ಕೋವಿಡ್ ವೈರಸ್ ಹರಡುತ್ತದೆ ಎಂಬುದು ಕೇವಲ ತಪ್ಪು ಕಲ್ಪನೆ ಎಂದರು.

    ಸಿಇಒ ರಮೇಶ ದೇಸಾಯಿ ಮಾತನಾಡಿ, ಪಂಚಾಯಿತಿವಾರು ಕೋವಿಡ್ ಕಾರ್ಯಪಡೆಗಳನ್ನು ರಚಿಸಿ ಸೋಂಕು ನಿವಾರಕ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ. ಎಲ್ಲಿ ಮಾಡಿಲ್ಲ ಅದನ್ನು ತಿಳಿಸಿದರೆ ಅಲ್ಲಿಯೂ ಕ್ರಮ ವಹಿಸುತ್ತೇವೆ ಎಂದರು.

    ಶಾಸಕ ನೆಹರು ಓಲೇಕಾರ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ಎಸ್.ಕೆ. ಕರಿಯಣ್ಣನವರ, ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

    ಗೌರವಯುತವಾಗಿ ಅಂತ್ಯಸಂಸ್ಕಾರ: ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಮೃತರ ಅಂತ್ಯ ಸಂಸ್ಕಾರವನ್ನು ಅವರ ಕುಟುಂಬದ ಸಾಂಪ್ರದಾಯಿಕ ವಿಧಿವಿಧಾನದ ಅನುಸಾರವೇ ನೆರವೇರಿಸಲು ನಾವು ಕುಟುಂಬದ ಸದಸ್ಯರೊಂದಿಗೆ ರ್ಚಚಿಸುತ್ತೇವೆ. ಆದರೆ, ಮೃತದೇಹಕ್ಕೆ ಪೂಜೆ, ಸ್ನಾನ ಮಾಡಿಸುವಂತಿಲ್ಲ. ಕುಟುಂಬದ ಐದು ಸದಸ್ಯರಿಗೆ ಪಿಪಿಇ ಕಿಟ್ ಹಾಕಿಸಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ಕೊಡುತ್ತೇವೆ. ಅವರು ಬರಲು ಒಪ್ಪದೇ ಇದ್ದರೆ ಅವರು ಲೈವ್ ವಿಡಿಯೋ ನೋಡಲು ಬಯಸಿದರೆ ಅದಕ್ಕೂ ಅವಕಾಶ ನೀಡುತ್ತೇವೆ. ಜಿಲ್ಲೆಯಲ್ಲಿ ಈವರೆಗೆ ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡಲಾಗಿದೆ ಎಂದರು.

    ಕಿಟ್ ವಿತರಣೆಯಲ್ಲಿ ತಾರತಮ್ಯ: ಲಾಕ್​ಡೌನ್ ಸಂದರ್ಭದಲ್ಲಿ ಕಾರ್ವಿುಕರಿಗೆ ಸಮರ್ಪಕವಾಗಿ ಆಹಾರ ಕಿಟ್ ವಿತರಿಸಿಲ್ಲ. ಕಾರ್ವಿುಕ ಇಲಾಖೆ ಬದಲು ಪಕ್ಷವೊಂದರ ಕಾರ್ಯಕರ್ತರಿಗೆ ಕಿಟ್ ವಿತರಿಸಲಾಗಿದೆ. ಹಾನಗಲ್ಲನಲ್ಲಿ ತಡರಾತ್ರಿ ಖಾಸಗಿ ವ್ಯಕ್ತಿಗಳು ಕಿಟ್ ವಿತರಿಸಿದ್ದಾರೆ. ಇದರ ಸಮಗ್ರ ತನಿಖೆಯಾಗಬೇಕು ಎಂದು ಸದಸ್ಯರಾದ ರಮೇಶ ದುಗ್ಗತ್ತಿ, ಟಾಕನಗೌಡ ಪಾಟೀಲ ಒತ್ತಾಯಿಸಿದರು. ಆಗ ಅಧ್ಯಕ್ಷ ಬಸನಗೌಡ ದೇಸಾಯಿ ಅವರು, ದುಂಡಸಿ ಕ್ಷೇತ್ರದಲ್ಲಿಯೂ ಹೀಗೆ ಆಗಿದೆ. ಈ ಕುರಿತು ಆಗಲೇ ತಿಳಿಸಿದರೂ ಶಿಗ್ಗಾಂವಿ ಇಒ ಕ್ರಮ ಕೈಗೊಂಡಿಲ್ಲ. ಶಿಗ್ಗಾಂವಿ ಇಒ ಹಾಗೂ ಕಾರ್ವಿುಕ ಇಲಾಖೆ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದರು. ಆಗ ಕಾರ್ವಿುಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಅವರು ಹಾನಗಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ತನಿಖೆ ನಡೆಯುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts