More

    ಅಡಕೆ ಮರಕ್ಕೆ ಮದ್ಯದ ಅಭಿಷೇಕ

    ಕಾರವಾರ: ಹೋಳಿ ಹಬ್ಬದ ಸಂದರ್ಭದಲ್ಲಿ ಅಡಕೆ ಮರಕ್ಕೆ ಮದ್ಯದ ಅಭಿಷೇಕ ಮಾಡಿ ಪೂಜೆ ಮಾಡುವ ವಿಶಿಷ್ಟ ಪದ್ಧತಿ ತಾಲೂಕಿನ ಹಣಕೋಣದಲ್ಲಿ ರೂಢಿಯಲ್ಲಿದೆ.

    ಹೋಳಿ ಸಾಮರಸ್ಯದ ಸಂಕೇತ. ವಿವಿಧ ಜಾತಿಯವರು ಒಟ್ಟಾಗಿ ಸೇರಿ ಬಣ್ಣದೋಕುಳಿ ಆಡುವ ಪದ್ಧತಿ ಹಲವೆಡೆ ಇದೆ. ಸುಗ್ಗಿ ಕುಣಿತ, ಹುಲಿ ವೇಷ, ಶಿಗ್ಮೋ ಹೀಗೆ… ವಿಭಿನ್ನ ಆಚರಣೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತದೆ. ಅದರಲ್ಲಿ ಕಾರವಾರದ ಹಣಕೋಣದಲ್ಲಿ ಅಂಬಿಗ, ವಾಜಂತ್ರಿ, ದೇವಳಿ ಹಾಗೂ ಪರಿಶಿಷ್ಟ ಜಾತಿಯ ಕುಟುಂಬದವರು ಸೇರಿ ಅಡಕೆ ಮರಕ್ಕೆ ಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ರೂಢಿಯಲ್ಲಿದೆ. ಹಣಕೋಣದಲ್ಲಿ ಭಾನುವಾರದಿಂದಲೇ ಪ್ರಾರಂಭವಾದ ಹೋಳಿಯ ಆಚರಣೆ ವಿಧಿ ವಿಧಾನಗಳು ಮಂಗಳವಾರ ಮುಕ್ತಾಯಗೊಂಡಿದೆ.

    ಹೋಳಿ ಹುಣ್ಣಿಮೆಯ ಮುಂಚಿನ ದಿನ ಅಂಬಿಗ ಸಮಾಜದವರು ಅಡಕೆ ಮರವೊಂದನ್ನು ಕಡಿದು ಸುರಕ್ಷಿತ ಸ್ಥಳದಲ್ಲಿಡುತ್ತಾರೆ. ಹೋಳಿ ದಿನದಂದು ಅದನ್ನು ಹೊತ್ತು ಗ್ರಾಮದ ವೈಲವಾಡ, ಅಂಬಿಗವಾಡ, ಬಾಬುನಾಯ್ಕವಾಡ, ಪಾಂಡುರಂಗನಾಯ್ಕವಾಡ, ಬಾಳಾ ನಾಯ್ಕವಾಡ, ಪಾಟ್ಲೋವಾಡ, ಹಬಲ್​ಬಾಗ ಮುಂತಾದೆಡೆ 100 ಕ್ಕೂ ಅಧಿಕ ಮನೆಗಳಿಗೆ ತೆರಳುತ್ತಾರೆ. ಅಲ್ಲದೆ ಗ್ರಾಮದ ರಾಮನಾಥ ದೇವಸ್ಥಾನ ಹಾಗೂ ಮಾರಂಗಣನಾಸ್ ದೇವಸ್ಥಾನದ ಎದುರು ತೆಗೆದುಕೊಂಡು ಹೋಗುತ್ತಾರೆ.

    ಮನೆಯ ಮುಂದೆ ಅಡಕೆ ಮರ ಹೊತ್ತು ಬಂದಾಗ ಆಯಾ ಮನೆಯವರು ಅದಕ್ಕೆ ಮಣೆ ಹಾಕಿ ದೀಪ ಹಚ್ಚಿ, ಕನಕಾಂಬರ ಮಾಲೆ ಏರಿಸಿ ಪೂಜೆ ಮಾಡುತ್ತಾರೆ. ಕೆಲ ಮನೆಯವರು ಅಡಕೆ ಮರಕ್ಕೆ ಮದ್ಯದ ಅಭಿಷೇಕವನ್ನೂ ಮಾಡುತ್ತಾರೆ.

    ಕೊನೆಯಲ್ಲಿ ಅಡಕೆ ಮರವನ್ನು ಗ್ರಾಮಪುರುಷ ದೇವಸ್ಥಾನದ ಸಮೀಪ ಕಡಿದು ಎಸೆಯಲಾಗುತ್ತದೆ. ಹೋಳಿ ದಿನ ರಾತ್ರಿ ಎಲ್ಲರ ಮನೆಯಲ್ಲಿ ಕೋಳಿ ಕಡಿದು ಕಜ್ಜಾಯ ಮಾಡಿ ಊಟ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts