More

    ನಟಿ ಮನೆಯಲ್ಲಿ ಕಳವು, ಕೆಲಸದಾಕೆ ಸೆರೆ

    ಬೆಂಗಳೂರು: ಬಹುಭಾಷಾ ನಟಿ ಛಾಯಾ ಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಎನ್‌ಜಿಒಎಸ್ ಕಾಲನಿ ನಿವಾಸಿ ಉಷಾ (43) ಬಂಧಿತೆ. ಈಕೆಯಿಂದ 4 ಲಕ್ಷ ರೂ. ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಎನ್‌ಎಚ್‌ಸಿಎಸ್ ಲೇಔಟ್‌ನಲ್ಲಿ ನೆಲೆಸಿದ್ದ ಛಾಯಾ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಚಿನ್ನಾಭರಣ ಕಳವು ನಡೆದಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

    ಉಷಾ 4 ತಿಂಗಳಿಂದ ಚಮನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಮನೆಯವರಿಗೆ ತಿಳಿಯದಂತೆ ಒಂದೊಂದಾಗಿ ಬೆಳ್ಳಿ ಮತ್ತು ಚಿನ್ನಾಭರಣ ಕದಿಯುತ್ತಿದ್ದಳು. ಏ. 13ರಂದು ರೂಮಿನಲ್ಲಿ ಬೀರುವಿನ ಲಾಕರ್ ಅನ್ನು ಉಷಾ ಮುಚ್ಚುವುದನ್ನು ಗಮನಿಸಿದ್ದ ಚಮನ್, ಅನುಮಾನಗೊಂಡು ಆ ಬಗ್ಗೆ ಪ್ರಶ್ನಿಸಿದ್ದರು. ಸರಿಯಾದ ಉತ್ತರ ಕೊಡದೆ ಸಬೂಬು ಹೇಳಿದ್ದಳು. ಕೊನೆಗೆ ಬೀರು ಪರಿಶೀಲನೆ ನಡೆಸಿದಾಗ ವಿವಿಧ ಆಭರಣ ಕಳವಾಗಿರುವುದು ಗೊತ್ತಾಗಿತ್ತು.

    ಈ ಬಗ್ಗೆ ಚಮನ್ ಕೊಟ್ಟ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಾಲ ತೀರಿಸುವ ಸಲುವಾಗಿ ಕೃತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಪ್ತಿ ಮಾಡಿದ್ದ ಆಭರಣವನ್ನು ನಟಿ ಛಾಯಾಗೆ ನಗರ ಪೊಲೀಸ್ ಆಯುಕ್ತರು ಮರಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts