More

    ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಥಾಯ್ಲೆಂಡ್ ಪೊಲೀಸರು

    ಬ್ಯಾಂಕಾಕ್: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದಿಢೀರ್ ಸಾವಿನ ಹಿಂದೆ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ. ಅವರದು ಸಹಜ ಸಾವು ಎಂಬುದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ ಅವರ ಸಾವಿನ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.

    ವಾರ್ನ್ ಮೃತದೇಹದ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಸ್ವಾಭಾವಿಕ ಕಾರಣಗಳಿಂದ ಉಂಟಾದ ಸಾವು ಎಂದು ಅವರ ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರಿಗೆ ವರದಿ ಸಲ್ಲಿಸಿದ್ದಾರೆ. ಇದರೊಂದಿಗೆ, ಥಾಯ್ಲೆಂಡ್‌ನ ವಿಲ್ಲಾಗೆ ರಜಾದಿನಗಳನ್ನು ಕಳೆಯಲು ಗೆಳೆಯರೊಂದಿಗೆ ತೆರಳಿದ್ದ 52 ವರ್ಷದ ವಾರ್ನ್ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂಬುದನ್ನು ಅವರ ಕುಟುಂಬ ಒಪ್ಪಿಕೊಂಡಿದೆ. ಈ ಮುನ್ನ ವಾರ್ನ್ ಅನುಮಾನಾಸ್ಪದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಪ್ರಕಟಣೆ ಹೊರಡಿಸುವ ಮೂಲಕ ಅಕಾಲಿಕ ಸಾವಿನ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿತ್ತು.

    ವಾರ್ನ್‌ಗೆ ಆಸ್ತಮಾವಿತ್ತು ಮತ್ತು ಇತ್ತೀಚೆಗೆ ಎದೆನೋವಿಗಾಗಿ ವೈದ್ಯರನ್ನೂ ಸಂಪರ್ಕಿಸಿದ್ದರು ಎಂದು ಈ ಮುನ್ನ ಥಾಯ್ಲೆಂಡ್ ಪೊಲೀಸರ ತನಿಖೆಯ ವೇಳೆ ತಿಳಿದುಬಂದಿತ್ತು.

    ಅಂತ್ಯ ಸಂಸ್ಕಾರಕ್ಕೆ 1 ಲಕ್ಷ ಜನ
    ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ಶೇನ್ ವಾರ್ನ್ ಅಂತ್ಯಸಂಸ್ಕಾರ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು, ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮುಂದಿನ 2-3 ವಾರಗಳಲ್ಲಿ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆಗಳಿವೆ. ಅಂತ್ಯಸಂಸ್ಕಾರಕ್ಕೆ ನಿಖರ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಇದಕ್ಕೆ ಮುನ್ನ ವಾರ್ನ್ ಕುಟುಂಬದ ಶೋಕ ಸಮಾರಂಭ ಖಾಸಗಿಯಾಗಿ ನಡೆಯಲಿದ್ದರೆ, ಬಳಿಕ ಎಂಸಿಜಿ ಮೈದಾನದಲ್ಲಿ ವಾರ್ನ್‌ಗೆ ಅಂತಿಮ ನಮನ ಸಲ್ಲಿಸಲು ಅಭಿಮಾನಿಗಳಿಗೆ ಅವಕಾಶ ದೊರೆಯಲಿದೆ. ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್, ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್ ಡೇನಿಯಲ್ ಆಂಡ್ರೋಸ್ ಕೂಡ ಪಾಲ್ಗೊಳ್ಳಲಿದ್ದಾರೆ. ಎಂಸಿಜಿ ವಾರ್ನ್ ಅವರ ನೆಚ್ಚಿನ ಮೈದಾನವಾಗಿತ್ತು. ಅಲ್ಲೇ ಅವರು ಆಶ್ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಮತ್ತು 700ನೇ ವಿಕೆಟ್ ಸಾಧನೆ ಮಾಡಿದ್ದರು. ಕ್ರೀಡಾಂಗಣದ ಸ್ಟಾೃಂಡ್ ಒಂದಕ್ಕೆ ವಾರ್ನ್ ಹೆಸರಿಡಲು ಈಗಾಗಲೆ ನಿರ್ಧರಿಸಲಾಗಿದೆ.

    ಆಘಾತದಲ್ಲಿ ವಾರ್ನ್ ಮಕ್ಕಳು
    ಅಪ್ಪ ಶೇನ್ ವಾರ್ನ್ ಸಾವಿನಿಂದ ಅವರ ಮೂವರು ಮಕ್ಕಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅವರ ಪುತ್ರ ಜಾಕ್ಸನ್ ವಾರ್ನ್ (21 ವರ್ಷ) ಮತ್ತು ಪುತ್ರಿಯರಾದ ಬ್ರೂಕ್ ವಾರ್ನ್ (24 ವರ್ಷ), ಸಮ್ಮರ್ ವಾರ್ನ್ (20 ವರ್ಷ) ತೀವ್ರ ದುಃಖಿತರಾಗಿದ್ದಾರೆ ಎಂದು ವಾರ್ನ್ ಮ್ಯಾನೇಜರ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿದ್ದಾಗಲೆಲ್ಲ ಮಕ್ಕಳಿಗೆ ಹೆಚ್ಚಿನ ಸಮಯ ನೀಡುತ್ತಿದ್ದ ವಾರ್ನ್, ಪುತ್ರನಿಗೆ ಕ್ರಿಕೆಟಿಗನಾಗುವಂತೆ ಎಂದೂ ಒತ್ತಡ ಹೇರಿರಲಿಲ್ಲ.

    ಶೇನ್ ವಾರ್ನ್ ಕೊಠಡಿಯಲ್ಲಿ ರಕ್ತದ ಕಲೆಗಳು! ಥಾಯ್ಲೆಂಡ್ ಪೊಲೀಸರ ತನಿಖೆಯಲ್ಲಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts