More

    ಜವಳಿ ಉದ್ಯಮ ಬಲವರ್ಧನೆಗೆ ಕ್ರಮ

    ಬೆಳಗಾವಿ: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಸೇರಿ ಸರ್ಕಾರದ ವಿವಿಧ ಇಲಾಖೆಗಳಿಗೆ ಬಟ್ಟೆಗಳನ್ನು ಕೈಮಗ್ಗ ಅಭಿವೃದ್ಧಿ ನಿಗಮದ ವತಿಯಿಂದ ಪೂರೈಕೆ ಮಾಡುವ ಕುರಿತು ಮಾಹಿತಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವ ಶ್ರೀಮಂತ ಪಾಟೀಲ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಲಾಖೆಯ ಪಗ್ರತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಉದ್ದಿಮೆಗಳ ಬೆಳವಣಿಗೆಗೆ ಪೂರಕ ಕ್ರಮ ಕೈಗೊಳ್ಳುವುದು, ಉದ್ಯೋಗಾವಕಾಶ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದರು.

    ಜವಳಿ ಉದ್ಯಮ ಬಲವರ್ಧನೆ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು. ಉದ್ಯಮ ಬೆಳವಣಿಗೆ ದೃಷ್ಟಿಯಿಂದ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಸೌಲಭ್ಯ ಕಲ್ಪಿಸುವ ಅಗತ್ಯವಿದ್ದು, ಅದಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ 7 ಜಿನ್ನಿಂಗ್ ಘಟಕಗಳು, 3 ಸ್ಪಿನ್ನಿಂಗ್ ಘಟಕಗಳು, 1,256 ಕೈಮಗ್ಗ, 31,371 ವಿದ್ಯುತ್ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಬೋರಗಾಂವದಲ್ಲಿ ಜವಳಿ ಉದ್ದಿಮೆಗಳ ಘಟಕ ಸ್ಥಾಪನೆಯಾಗಿದ್ದು ನೀರು, ರಸ್ತೆ ಹಾಗೂ ವಿದ್ಯುಚ್ಛಕ್ತಿ ಸಮಸ್ಯೆ ಕಂಡುಬಂದಿದೆ. ಈ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸುತ್ತಿರುವ ಜವಳಿ ಉದ್ಯಮಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಮಗ್ರ ಅಂಶಗಳನ್ನೊಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಿದರು.
    ಜವಳಿ ನೀತಿ ಯೋಜನೆಯಡಿ ಸಿದ್ಧ ಉಡುಪು ತಯಾರಿಕೆಗೆ ಸಂಬಂಧಿಸಿದಂತೆ ಉದ್ಯೋಗ ಸೃಜನೆಗಾಗಿ ಯುವಕ, ಯುವತಿಯರಿಗೆ 45 ದಿನಗಳ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಹಾಜರಾತಿಯನ್ನು ಪಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವಂತೆ ನಿರ್ದೇಶನ ನೀಡಿದರು.

    ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವಿಜಯಕುಮಾರ ನಿರಾಳೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಕೀರ್ತಪ್ಪ ಗೋಟೂರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜೀವಕುಮಾರ ಹುಲಕಾಯಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಜವಳಿ ಉದ್ಯಮ ಸ್ಥಾಪನೆಗೆ ಮುಂದಾಗುವವರನ್ನು ಒಂದು ಕಡೆ ಸೇರಿಸಿ ಅತ್ಯಾಧುನಿಕ ವ್ಯವಸ್ಥೆ ಮತ್ತು ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
    | ಡಾ.ಕೆ.ವಿ.ರಾಜೇಂದ್ರ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts