More

    ಪಠ್ಯ ಪೂರ್ಣಕ್ಕೆ ಆನ್‌ಲೈನ್ ವರ್ಗ

    ಮೂಡಲಗಿ: ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಾರಕ ರೋಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಹಂತ ಹಂತವಾಗಿ ಜಗತ್ತಿನ ತುಂಬೆಲ್ಲ ಹರಡುತ್ತಿರುವ ಈ ವೈರಸ್‌ಗೆ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ. ಈ ವೈರಸ್ ತಡೆಗಟ್ಟುವುದು ಸವಾಲಿನ ಕೆಲಸವಾಗಿದ್ದರಿಂದ ದೇಶವ್ಯಾಪೀ ಲಾಕ್‌ಡೌನ್ ಜಾರಿಯಲ್ಲಿದ್ದು, ಎಲ್ಲ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಉಂಟಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಮೌನ ಆವರಿಸಿದ್ದು, ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳೂ ಸಹ ಸ್ತಬ್ಧಗೊಂಡಿವೆ.

    ಮಹಾಮಾರಿ ಕರೊನಾದ ಪರಿಣಾಮ ವಿದ್ಯಾರ್ಜನೆಗೆ ತೊಡಕಾಗಬಾರದೆಂದು ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಆನ್‌ಲೈನ್ ವರ್ಗ ನಡೆಸಲು ಕಾರ್ಯೋನ್ಮುಖರಾಗಿದ್ದಾರೆ. ಯುಜಿಸಿ ಮತ್ತು ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ, ಉಪನ್ಯಾಸಕರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮನೆಯಿಂದಲೇ ವಿದ್ಯಾರ್ಥಿಗಳನ್ನು ತಲುಪುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದರು. ಇದರನ್ವಯ ಈ ಮಹಾವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಗದ ಪಠ್ಯಕ್ರಮ ಮುಗಿಸಲು ಮುಂದಾಗಿದೆ.

    ಏ. 20 ಕೊನೆಯ ದಿನ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾಲಯದ ವೇಳಾಪಟ್ಟಿಯಂತೆ ಏ. 20 ವರ್ಗಗಳಿಗೆ ಕೊನೆಯ ದಿನವಾಗಿತ್ತು. ಮಹಾವಿದ್ಯಾಲಯದಲ್ಲಿನ ವರ್ಗಗಳು ಕೊನೆಯ ಹಂತದಲ್ಲಿದ್ದವು. ಆದರೆ, ಪಠ್ಯಗಳನ್ನು ಮುಗಿಸುವ ಹಂತದಲ್ಲಿದ್ದಾಗ ಸರ್ಕಾರ ಲಾಕ್‌ಡೌನ್ ೋಷಿಸಿದಾಗ ಪಠ್ಯ ಮುಗಿಸುವುದು ಬಾಕಿ ಉಳಿದಿತ್ತು. ಇದೀಗ ಉಪನ್ಯಾಸಕರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಠ್ಯಕ್ರಮ ಪೂರ್ಣಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

    ಉತ್ತಮ ಸ್ಪಂದನೆ: ಮಾ. 23ರಂದು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಪಠ್ಯ ಮುಗಿಸುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್, ಆಧುನಿಕ ತಂತ್ರಜ್ಞಾನದ ಮಾರ್ಗಗಳಾದ ವಾಟ್ಸ್‌ಆ್ಯಪ್ ಗ್ರೂಪ್, ಗೂಗಲ್ ಕ್ಲಾಸ್, ಝೂಮ್ ಆ್ಯಪ್, ವಿಡಿಯೋ ಕ್ಲಾಸ್, ವೆಬ್ ವಿನಾರ್ ಮೂಲಕ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಠ್ಯ ಪೂರ್ಣಗೊಳಿಸುವ ವಿನೂತನ ಕಾರ್ಯ ಮಾಡುತ್ತಿದೆ. ಗ್ರಾಮೀಣ ಭಾಗದವರಿಗೆ ಇದು ಹೊಸದು. ಆದರೂ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆನ್‌ಲೈನ್ ವರ್ಗಗಳ ಕುರಿತು ಮಾರ್ಗದರ್ಶನ ನೀಡಿ ಅದನ್ನು ಯಶಸ್ವಿಗೊಳಿಸುತ್ತಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಸ್ಪಂದನೆಯೂ ಉತ್ತಮವಾಗಿದೆ ಎನ್ನುತ್ತಾರೆ ಉಪನ್ಯಾಸಕರು.

    ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ

    ಮಹಾವಿದ್ಯಾಲಯದಲ್ಲಿ ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ, ಗಣಕವಿಜ್ಞಾನ, ಭೌತಶಾಸ್ತ್ರ, ವಾಣಿಜ್ಯಶಾಸ್ತ್ರ, ವ್ಯವಹಾರ ಅಧ್ಯಯನ, ಸಮಾಜಕಾರ್ಯ ಹಾಗೂ ಪ್ಲೇಸ್‌ಮೆಂಟ್ ಸೆಲ್ ವಿಷಯದ ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳ ಜತೆಗೆ ನೇರ ಸಂಪರ್ಕದಲ್ಲಿ ಇದ್ದಾರೆ. ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ವಿವಿಧ ಆಯಾಮಗಳ ಕುರಿತು ಅರಿವು ಮೂಡಿಸಿ, ಅವುಗಳನ್ನು ಬಳಸಿಕೊಂಡು ಆನ್‌ಲೈನ್ ವರ್ಗಗಳನ್ನು ನಡೆಸಿ ಪಠ್ಯ ಮುಗಿಸುವ ಹಂತದಲ್ಲಿದ್ದಾರೆ. ಅಲ್ಲದೆ, ಎಲ್ಲ ವಿಷಯಗಳ ಪಠ್ಯದಂತೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಪ್ರತಿದಿನ ಗೂಗಲ್ ಫಾರ್ಮ್ ಮೂಲಕ ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ತಯಾರಿಸಿ ವಿದ್ಯಾರ್ಥಿಗಳ ಗ್ರೂಪ್‌ಗೆ ರವಾನೆ ಮಾಡಿ ಅವರಿಂದ ಆನ್‌ಲೈನ್ ಮೂಲಕ ಉತ್ತರಿಸುವ ಕಾರ್ಯ ದಿನನಿತ್ಯ ನಡೆಯುತ್ತಿದೆ.

    ಉನ್ನತ ಶಿಕ್ಷಣದ ಆಶಯ ಈಡೇರಿಸುವ ಅವಕಾಶವನ್ನು ಪ್ರಸಕ್ತ ಸನ್ನಿವೇಶ ನಿರ್ಮಿಸಿದೆ. ನಮ್ಮ ಮಹಾವಿದ್ಯಾಲಯದ ಲಭ್ಯವಿರುವ ಆನ್‌ಲೈನ್ ಮೂಲಕ ಈ ವಿನೂತನ ವರ್ಗಗಳನ್ನು ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯನ್ನು ಇನ್ನು ನಿರಂತರವಾಗಿ ಮುಂದುವರಿಸುತ್ತೇವೆ.
    | ಡಾ. ಆರ್.ಬಿ. ಕೊಕಟನೂರ ಶ್ರೀಪಾದಬೋಧ ಸ್ವಾಮೀಜಿ ಮಹಾವಿದ್ಯಾಲಯದ ಪ್ರಾಚಾರ್ಯ, ಮೂಡಲಗಿ

    | ಗಂಗಪ್ಪ ಬಿ.ಹುಂಡೇಕರ ಮೂಡಲಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts