More

    ಉಗ್ರ ‘ಬರಹಗಾರ’ರ ಪತ್ತೆಗೆ ಯತ್ನ

    ಮಂಗಳೂರು: ನಗರದ ಬಿಜೈ ರಸ್ತೆಯ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಶುಕ್ರವಾರ ಬೆಳಗ್ಗೆ ಕಂಡು ಬಂದ ಉಗ್ರ ಸಂಘಟನೆ ಲಷ್ಕರ್ ಪರ ಬರಹ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂರು ತಂಡಗಳಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
    ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಮಾರ್ಗದರ್ಶನದಲ್ಲಿ ಕೇಂದ್ರ ಉಪವಿಭಾಗ ಎಸಿಪಿ ಜಗದೀಶ್, ಕದ್ರಿ ಇನ್‌ಸ್ಪೆಕ್ಟರ್ ಸವಿತ್ರ ತೇಜ ಹಾಗೂ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡಗಳು ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿವೆ.

    ಕದ್ರಿ ಕಂಬಳ ಕ್ರಾಸ್‌ಗೆ ಕದ್ರಿ, ಕೆಪಿಟಿ, ಕುಂಟಿಕಾನ, ಬಿಜೈ ಮೊದಲಾದ ಕಡೆಗಳಿಂದ ಬರುವ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಲಾಗಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ 6 ಗಂಟೆ ತನಕ ಸಂಚರಿಸಿದ ವಾಹನ ಹಾಗೂ ವ್ಯಕ್ತಿಗಳ ಕುರಿತು ವಿವರ ಸಂಗ್ರಹಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿರುವ ಚೆಕ್‌ಪೋಸ್ಟ್‌ಗಳ ಸಿಸಿ ಕ್ಯಾಮರಾಗಳನ್ನೂ ಪರಿಶೀಲನೆ ನಡೆಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದು ಈ ಕೃತ್ಯ ಎಸಗಿರುವ ಬಗ್ಗೆ ಶುಕ್ರವಾರವೇ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲೂ ತನಿಖೆ ಸಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪೊಲೀಸ್ ಗಸ್ತು ಬಿಗಿ: ಮಂಗಳೂರು ನಗರದಲ್ಲಿ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ರಾತ್ರಿ ವೇಳೆ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ಪೊಲೀಸ್ ಗಸ್ತು ವೈಫಲ್ಯ ಆರೋಪ ವ್ಯಕ್ತವಾಗಿತ್ತು. ಪೊಲೀಸ್ ಆಯುಕ್ತರು ಇದನ್ನು ಗಂಭೀರವಾಗಿ ಪರಿಗಣಿಸಿ ಗಸ್ತು ಬಿಗಿಗೊಳಿಸಿದ್ದು, ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ತಂತ್ರಜ್ಞರಿಂದ ಮಾಹಿತಿ ಸಂಗ್ರಹ: ಬರಹ ಬರೆಯಲು ಯಾವ ಪದಾರ್ಥ ಉಪಯೋಗಿಸಿದ್ದಾರೆ. ಹೇಗೆ ಬರೆದಿದ್ದಾರೆ ಎನ್ನುವ ಕುರಿತೂ ಪೊಲೀಸರು ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ. ಬ್ರಶ್ ಬದಲು ವೇಗವಾಗಿ ಬರೆಯಲು ಸ್ಪ್ರೇ ಮಷಿನ್ ಬಳಸಿರುವ ಸಾಧ್ಯತೆ ಇದೆ ಎಂದೂ ಪೊಲೀಸರು ಶಂಕಿಸಿದ್ದಾರೆ.

    ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಬರಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತಾಂತ್ರಿಕವಾಗಿ ಹೆಚ್ಚು ಅನುಭವ ಹೊಂದಿರುವ ಅಧಿಕಾರಿಗಳನ್ನು ತನಿಖಾ ತಂಡಗಳಿಗೆ ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗುವ ಭರವಸೆ ಇದೆ.
    -ವಿಕಾಶ್ ಕುಮಾರ್, ಆಯುಕ್ತರು, ಮಂಗಳೂರು ನಗರ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts