More

    ಆಸ್ಪತ್ರೆಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

    ತೇರದಾಳ: ಆಸ್ಪತ್ರೆ ಸ್ಥಾಪಿಸಿ ಬಡವರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಸಸಾಲಟ್ಟಿ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟಿಸಿದರು.

    ಬ್ಯಾಂಕ್ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಟ್ಟು ಪ್ರತಿಭಟನೆ ಆರಂಭಿಸಿದರು.
    2017ರಲ್ಲಿ ಸರ್ಕಾರಕ್ಕೆ 1.40 ಲಕ್ಷ ರೂ. ಡಿಪಾಜಿಟ್ ತುಂಬಿದ್ದರಿಂದ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಗ್ರಾಮಕ್ಕೆ ಮಂಜೂರು ಮಾಡಿತ್ತು. ಪಿಕೆಪಿಎಸ್ ಕಟ್ಟಡದಲ್ಲಿ ಸರ್ಕಾರಿ ಆಸ್ಪತ್ರೆ ಆರಂಭಕ್ಕೆ ಕಮಿಟಿಯವರೇ ಒಪ್ಪಿಕೊಂಡಿದ್ದರು. ಈಗ ಅದನ್ನು ತಿರಸ್ಕರಿಸುತ್ತಿದ್ದು, ಹೀಗಾಗಿ ನಮ್ಮೂರಿಗೆ ಆಸ್ಪತ್ರೆ ಮಂಜೂರಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪಿಕೆಪಿಎಸ್‌ನವರು ಸಹಕರಿಸಬೇಕು. ಆಸ್ಪತ್ರೆ ಸ್ಥಾಪಿಸುವವರೆಗೆ ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ಪ್ರತಿಭಟನೆಯ ಬಿಸಿಯಿಂದ ಎಚ್ಚೆತ್ತ ಪಿಕೆಪಿಎಸ್ ಅಧ್ಯಕ್ಷ ಚನ್ನಮಲ್ಲಪ್ಪ ಮದಲಮಟ್ಟಿ ಸೇರಿ ಆಡಳಿತ ಮಂಡಳಿ, ಗ್ರಾಪಂ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಹಾಗೂ ಸದಸ್ಯರು ಸಭೆ ನಡೆಸಿ ಚರ್ಚಿಸಿದರು. ಶಾಸಕ ಸಿದ್ದು ಸವದಿ ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ಕಟ್ಟಡ ನೀಡುವ ತೀರ್ಮಾನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

    ನಂತರ ಮಾಯಪ್ಪ ಬೆಂಡಿಕಾಯಿ ಮಾತನಾಡಿ, ಶಾಸಕರು ಶುಕ್ರವಾರ ಗ್ರಾಮಕ್ಕೆ ಆಗಮಿಸಿ ಆಸ್ಪತ್ರೆ ಸ್ಥಾಪಿಸುವ ಜಾಗದ ಸಮಸ್ಯೆ ಕುರಿತಂತೆ ತೀರ್ಮಾನ ಕೈಗೊಳ್ಳುವರು. ಎಲ್ಲರೂ ಅಲ್ಲಿವರೆಗೆ ಸಹಕರಿಸಬೇಕು ಎಂದರು. ಈ ವೇಳೆ ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯವರ ನಡುವೆ ಮಾತಿನ ಜಟಾಪಟಿ ನಡೆಯಿತು.

    ದೇವರಾಜ ಬಳಗಾರ, ಪ್ರಕಾಶ ಬೆಂಡಿಕಾಯಿ, ವಿಠಲ ಕಾಂಬಳೆ, ಹನುಮಂತ ಪೂಜಾರಿ, ಕಂಠೆಪ್ಪ ಮಾಸ್ತಿ, ಬಾಜವ್ವ ಕಾಂಬಳೆ, ಸಾಂಯವ್ವ ಸರಿಕರ, ಲಕ್ಷ್ಮೀಬಾಯಿ ಕಾಂಬಳೆ, ಜುಬಾಯಿ ರಾಯನ್ನವರ ಇತರರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts