More

    ಹತ್ತಾರು ವರ್ಷದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೇ ಠಿಕಾಣಿ!

    ಪ್ರಕಾಶ ಹಿರೇಮಠ ಹುಬ್ಬಳ್ಳಿ
    ಅಧಿಕಾರಿಗಳ ಪಾಲಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಚಿನ್ನದ ಮೊಟ್ಟೆ ಇಡುವ ಕೋಳಿಯೇ? ಇಂಥದೊಂದು ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

    ಈ ಪ್ರಶ್ನೆ ಏಳಲೂ ಸಕಾರಣ ಉಂಟು. ಅದೇನೆಂದರೆ ನಿಯೋಜನೆಯ (ಡೆಪ್ಯೂಟೇಶನ್) ಮೇಲೆ ಪಾಲಿಕೆಗೆ ಬಂದ ಅಧಿಕಾರಿಗಳು ಹತ್ತು-ಹದಿನೈದು ವರ್ಷದಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ.


    ವಿವಿಧ ಇಲಾಖೆಯ ಎ ಮತ್ತು ಬಿ ವರ್ಗದ ಅಧಿಕಾರಿಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಿಯೋಜನೆ ಮಾಡಲಾಗಿದೆ. ಇಂಥವರ ಸಂಖ್ಯೆ ಪಾಲಿಕೆಯಲ್ಲಿ ಜಾಸ್ತಿಯಿದೆ. ನಿಯೋಜನೆ ಎನ್ನುವುದು ತಾತ್ಕಾಲಿಕ.

    ಆದರೆ, ಪಾಲಿಕೆಗೆ ನಿಯೋಜನೆ ಮೇಲೆ ಬಂದವರ ಪೈಕಿ ಕೆಲವರು 10-15 ವರ್ಷದಿಂದ ಇಲ್ಲೇ ಬೀಡುಬಿಟ್ಟಿದ್ದಾರೆ. ಈ ಸಂಗತಿ ಸರ್ಕಾರದ ಗಮನಕ್ಕೂ ಬಂದಿದೆ. ಪರಿಣಾಮ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಇನ್ನುಳಿದ ಮಹಾನಗರ ಪಾಲಿಕೆಗೂ ಅನ್ವಯ ಆಗುವಂತೆ ‘ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾಲಿಕೆಯ ವೃಂದದ ಮತ್ತು ಅನ್ಯ ಇಲಾಖೆಯಿಂದ ನಿಯೋಜನೆಗೊಂಡ ಎ ಮತ್ತು ಬಿ ವರ್ಗದ ಅಧಿಕಾರಿಗಳನ್ನು ಮೂಲ ಇಲಾಖೆಗೆ ಕಳುಹಿಸಲು’ ಸೂಚಿಸಿ ಆದೇಶಿಸಿದ್ದಾರೆ.

    ಕಳೆದ ಜೂನ್ 20ರಂದೇ ಆದೇಶ ಹೊರಡಿಸಿದ್ದರೂ ನಿಯೋಜನೆಯ ಮೇಲೆ ಬಂದವರನ್ನು ಮಾತೃ ಇಲಾಖೆಗೆ ಕಳುಹಿಸಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಚಿಕ್ಕಮಗಳೂರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗವಾಗಿರುವುದರಿಂದ ನಿಯೋಜನೆ ಮೇಲೆ ಪಾಲಿಕೆಗೆ ಬಂದವರು ಮತ್ತಷ್ಟು ದಿನ ಇಲ್ಲಿಯೇ ತಳವೂರುವುದು ನಿಶ್ಚಿತ. ಹೀಗಾಗಿ ಸಚಿವರ ಆದೇಶಕ್ಕೆ ಸದ್ಯಕ್ಕಂತೂ ಬೆಲೆ ಸಿಗುವುದು ಅನುಮಾನ.


    ಜನಪ್ರತಿನಿಧಿಗಳ ಅಸಮಾಧಾನ?

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಿಯೋಜನೆ ಮೇಲೆ ಬೀಡುಬಿಟ್ಟಿರುವ ಎ ಮತ್ತು ಬಿ ವರ್ಗದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಸಚಿವ ಸುರೇಶ ಆದೇಶ ಮಾಡಲು ಕಾರಣ ಜನಪ್ರತಿನಿಧಿಗಳ ದೂರು. ಪಾಲಿಕೆಯ ಸದಸ್ಯರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಠಿಕಾಣಿ ಹೂಡಿರುವ ಬಗ್ಗೆ ಸಚಿವರಿಗೆ ದೂರಿದ್ದಾರೆ.

    ಇಂಥ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸ್ಪಂದಿಸುತ್ತಿಲ್ಲ, ಆಡಳಿತ ವ್ಯವಸ್ಥೆ ಹಾಳು ಮಾಡಿದ್ದಾರೆಂದೆಲ್ಲ ದೂರು ನೀಡಿದ್ದಾರೆ.


    ನಿಯೋಜನೆಯ ಮರ್ಮವೇನು?

    ಯಾವುದೇ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆಯ ಮೇಲೆ ವರ್ಗಾವಣೆ ಮಾಡುವುದರ ಹಿಂದೆ ವಿವಿಧ ಕಾರಣಗಳಿರುತ್ತವೆ.

    ಪ್ರಮುಖವಾಗಿ ಇಲಾಖೆಯೊಂದರಲ್ಲಿ ಅತೀ ಹೆಚ್ಚು ಹುದ್ದೆಗಳಿದ್ದಲ್ಲಿ ಕೆಲಸ ಸರಿದೂಗಿಸಲು ಮಾತೃ ಇಲಾಖೆಯಿಂದ ಬೇರೆಡೆ ನಿಯೋಜನೆ ಮಾಡಲಾಗುತ್ತದೆ. ಇದಲ್ಲದೇ ಅಧಿಕಾರಿಗಳೇ ಜನಪ್ರತಿನಿಧಿಗಳ ಪ್ರಭಾವ ಬಳಸಿ ಆಯಕಟ್ಟಿನ ಸ್ಥಾನಕ್ಕೆ ಗಿಟ್ಟಿಸಿಕೊಳ್ಳಲು ನಿಯೋಜಿಸಿಕೊಳ್ಳುತ್ತಾರೆ.

    ಇಂಥವರು ಮಾತೃ ಇಲಾಖೆಗೆ ಹೋಗಲು ಸಿದ್ಧರಿರುವುದಿಲ್ಲ. ಮಾತೃ ಇಲಾಖೆಗೆ ಹೋಗುವಂತೆ ಸಚಿವರು ಆದೇಶಿಸಿದರೂ ಸ್ಥಳೀಯ ಜನಪ್ರತಿನಿಧಿಯ ಪ್ರಭಾವ ಬಳಸಿ ಆ ಸ್ಥಾನದಲ್ಲಿಯೇ ಮುಂದುವರಿಯುವಂತೆ ವ್ಯವಸ್ಥೆ ಮಾಡಿಸಿಕೊಳ್ಳುತ್ತಾರೆ.


    ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಬಳಿಕ ಸಚಿವರ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು. – ವೀಣಾ ಭರದ್ವಾಡ ಮೇಯರ್

    ನಿಯೋಜನೆ ಮೇಲೆ ಬಂದಿರುವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಸಹಕಾರ ತೋರುತ್ತಿದ್ದಾರೆ. ಈ ಬಗ್ಗೆ ಸಚಿವರಿಗೆ ಪತ್ರ ಬರೆದು ದೂರಿದ್ದೆ. ಮೂಲ ಇಲಾಖೆಗೆ ಕಳುಹಿಸಲು ಸಚಿವರ ಆದೇಶ ಬಂದರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ದುರಾದೃಷ್ಟ. – ಕವಿತಾ ಕಬ್ಬೇರ ಪಾಲಿಕೆ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts