More

    ಕಪ್ಪುಪಟ್ಟಿಯಲ್ಲಿರುವ ಸಂಸ್ಥೆಗೆ ಟೆಂಡರ್, ವಿವಿ ನಿರ್ಧಾರಕ್ಕೆ ಆಕ್ಷೇಪ ; ನೂತನ ಟೆಂಡರ್ ಪ್ರಕ್ರಿಯೆ ಆರಂಭಿಸಲು ತುಮಕೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ

    ತುಮಕೂರು: ವಿವಿಯಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಭದ್ರತೆ, ಮಾನವ ಸಂಪನ್ಮೂಲ ಹಾಗೂ ಸ್ವಚ್ಛತಾ ಸಿಬ್ಬಂದಿ ಹೊರಗುತ್ತಿಗೆ ಟೆಂಡರ್ ವಿಸ್ತರಿಸುವ ಪ್ರಸ್ತಾಪಕ್ಕೆ ವಿವಿ ಸಿಂಡಿಕೇಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ನೂತನ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ.

    ವಿವಿ ಕುಲಪತಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿಂಡಿಕೇಟ್ ಸಭೆಯಲ್ಲಿ ಕಾನೂನು ಬಾಹಿರವಾಗಿ ಟೆಂಡರ್ ವಿಸ್ತರಣೆಗೆ ಶಿಾರಸು ಮಾಡಿರುವ ಟೆಂಡರ್ ಉಪಸಮಿತಿ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕಾನೂನು ಬಾಹಿರ ಕ್ರಮ ತೆಗೆದುಕೊಳ್ಳಬಾರದು ಎಂದು ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿಂದೆ ವಿವಿ ಹಣಕಾಸು ಅಧಿಕಾರಿ ಡಬಲ್ ಪೇಮೆಂಟ್ ಮಾಡಿದ್ದ ಪ್ರಕರಣದಲ್ಲಿ ಕಪ್ಪು ಪಟ್ಟಿಗೆ ಸೇರಿರುವ ಸಂಸ್ಥೆಗಳಿಗೆ ಟೆಂಡರ್ ನೀಡಿರುವ ಬಗ್ಗೆಯೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಹಿಂದಿನ ಸಿಂಡಿಕೇಟ್ ಸಭೆಗಳಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ದಾಖಲೆಗಳನ್ನು ಎಲ್ಲ ಸದಸ್ಯರಿಗೂ ನೀಡಬೇಕು ಎಂದು ಸೂಚಿಸಲಾಗಿದೆ.

    ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಕಡತಗಳು ಸಿಂಡಿಕೇಟ್ ಸಭೆಗೆ ಬರದೆ ಅನುಮೋದನೆಯಾಗುತ್ತಿರುವ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಿ ಎಲ್ಲ ಉಪಸಮಿತಿಗಳ ನಿರ್ಣಯಗಳನ್ನು ಸಿಂಡಿಕೇಟ್ ಸಭೆಯ ಅನುಮತಿ ಪಡೆದ ನಂತರವೇ ಜಾರಿಗೆ ತರಲು ನಿರ್ಣಯಿಸಲಾಗಿದೆ. ಶಿರಾ ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿಪಡಿಸಲು ವಿಶೇಷ ಗಮನ ನೀಡಬೇಕು ಎಂದು ಸದಸ್ಯೆ ಡಾ.ಭಾಗ್ಯಲಕ್ಷ್ಮೀಹಿರೇಂದ್ರಶಾ ವಿಷಯ ಪ್ರಸ್ತಾಪಿಸಿದ್ದಾರೆ.
    ತಿಪಟೂರು ತಾಲೂಕು ರಂಗಾಪುರದಲ್ಲಿ 15 ಎಕರೆ ಕ್ಯಾಂಪಸ್ ಅಭಿವೃದ್ಧಿಪಡಿಸಲು ಹಾಗೂ ಜನವರಿ ಅಂತ್ಯದೊಳಗೆ ಉದ್ಘಾಟನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿದ್ದವರಿಗೆ ವಿವಿ ಬೆದರಿಕೆ: ತುಮಕೂರು ವಿವಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ರೋಸ್ಟರ್ ನಿಯಮ ಉಲ್ಲಂಘಿಸಿ ಎಸ್‌ಸಿ, ಎಸ್‌ಟಿ, ಬಿಸಿಎಂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವ ಪ್ರಕರಣ ಮುಚ್ಚಿಹಾಕುವ ಕೆಲಸ ವಿವಿ ನಡೆಸಿದೆ ಎಂದು ಕೆಲವು ಸಿಂಡಿಕೇಟ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ, ಕಾಲೇಜಿನಲ್ಲಿ ನಡೆದಿರುವ ಕರ್ತವ್ಯಲೋಪದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡಾ.ಶ್ವೇತಾ, ಡಾ.ಮಂಜುನಾಥ್, ಡಾ.ಪೂರ್ಣಿಮಾ ಹಾಗೂ ಡಾ.ಪಾಲಾಕ್ಷಮೂರ್ತಿ ಎಂಬುವವರ ವಿರುದ್ಧ ಕ್ರಮಕೈಗೊಳ್ಳಲು ವಿವಿ ಅಡಳಿತ ಮಂಡಳಿ ಅಚ್ಚರಿಯ ತೀರ್ಮಾನ ತೆಗೆದುಕೊಂಡಿದ್ದು, ಇದರ ಹೊಣೆಯನ್ನು ರೋಸ್ಟರ್ ನಿಯಮ ಉಲ್ಲಂಘನೆ ಮಾಡಿರುವ ಪ್ರಾಚಾರ್ಯರು ಹಾಗೂ ಪ್ರವೇಶಾತಿ ಸಮಿತಿ ಸದಸ್ಯರ ಹೆಗಲಿಗೆ ವಹಿಸಿದ್ದಾರೆ.

    ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆ: 2020ರ ಸೆಪ್ಟೆಂಬರ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಪಾವತಿಸಲು ಸಿಂಡಿಕೇಟ್ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ವಿಶ್ವ ವಿದ್ಯಾನಿಲಯ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಕೆಲಸ ಮಾಡಿದ್ದ 40ಕ್ಕೂ ಹೆಚ್ಚು ಉಪನ್ಯಾಸರಿಗೆ ಒಂದು ತಿಂಗಳ ವೇತನ ನೀಡದ ವಿವಿ ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

    ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. 2020 ನವೆಂಬರ್ ತಿಂಗಳಿನಿಂದ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಿಸಲಾಗಿದ್ದು, 5 ಸಾವಿರ ರೂ. ಹೆಚ್ಚಿಸಲಾಗಿದೆ, ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌ಡಿ ಇಲ್ಲದವರಿಗೆ 18 ರಿಂದ 22 ಸಾವಿರ ಹಾಗೂ 22 ಸಾವಿರ ಇದ್ದವರಿಗೆ 27 ಸಾವಿರಕ್ಕೆ ಹೆಚ್ಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts