More

    ಕುಕ್ಕೆ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸದ್ಯಕ್ಕಿಲ್ಲ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಜೂನ್ 8ರಿಂದ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳಿಗೆ ಸರ್ಕಾರದ ಮುಂದಿನ ಆದೇಶದ ತನಕ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

    ಭಕ್ತರಿಗೆ ಬೆಳಗ್ಗೆ 8.30ರಿಂದ ಸಂಜೆ 5.30ರ ತನಕ ದರ್ಶನಕ್ಕೆ ಅವಕಾಶವಿದೆ. ದೇವಳದ ವಸತಿಗೃಹದಲ್ಲಿ ತಂಗಲು ಅವಕಾಶವಿಲ್ಲ. ಗಂಧ, ತೀರ್ಥ, ಮಂಗಳಾರತಿ, ಪ್ರಸಾದ ಹಾಗೂ ಅನ್ನಪ್ರಸಾದ ವ್ಯವಸ್ಥೆ ಇಲ್ಲ. ದೇವಳದ ಮುಂಭಾಗದಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಲಾಗುವುದು. ಒಳಪ್ರವೇಶಿಸುವಾಗ ಸ್ಯಾನಿಟೈಸರ್ ನೀಡಲಾಗುವುದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು. ದೇವಳದ ಗೋಡೆ, ಕಂಬ, ಇತ್ಯಾದಿಗಳನ್ನು ಮುಟ್ಟಲು ಅವಕಾಶವಿಲ್ಲ. ದೇವಳದಲ್ಲಿ ಅಡ್ಡ ಬೀಳುವುದು ಮತ್ತು ಕುಳಿತುಕೊಳ್ಳಲು ಅವಕಾಶವಿಲ್ಲ. 10 ವರ್ಷ ಕೆಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರಿಗೆ ದೇವಳ ಭೇಟಿ ನಿರ್ಬಂಧಿಸಲಾಗಿದೆ. ದೇವಳದ ಕಲ್ಯಾಣಿ, ಸ್ನಾನ ಘಟ್ಟಗಳಲ್ಲಿ ಸ್ನಾನಕ್ಕೆ ಅವಕಾಶವಿಲ್ಲ. ದೇವಳದ ಪ್ರಧಾನ ದ್ವಾರದಲ್ಲಿ ಹೆಸರು ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿಕೊಂಡು ಕೂಪನ್ ಕೊಡಲಾಗುವುದು. ಕೂಪನ್‌ನಲ್ಲಿ ನೀಡಿದ ನಿರ್ದಿಷ್ಟ ಸಮಯದಲ್ಲಿ ದೇವರ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
    ದೇವಳವನ್ನು ಈಗಾಗಲೇ ಸಂಪೂರ್ಣವಾಗಿ ತೊಳೆದು ಸ್ವಚ್ಛ ಮಾಡಲಾಗಿದೆ. ವೈರಾಣು ತಡೆ ಔಷಧಗಳನ್ನು ಸಿಂಪಡಿಸುವ ಕಾರ್ಯ ನಡೆದಿದೆ.

    ಏಕದ್ವಾರದ ಮೂಲಕ ಪ್ರವೇಶ
    ದೇವಳಕ್ಕೆ ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಹೊರಬರಲು ಮತ್ತೊಂದು ದ್ವಾರ ಬಳಸಿಕೊಳ್ಳಲಾಗುವುದು. ಪ್ರಧಾನ ದ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚಚ್ಚೌಕ ಬರೆಯಲಾಗಿದೆ. ಭಕ್ತರು ಈ ಚೌಕದ ಮೂಲಕ ಸರತಿ ಸಾಲಿನಲ್ಲಿ ಮುಂದಡಿಯಿಡಬಹುದು.

    ಧರ್ಮಸ್ಥಳದಲ್ಲಿ ಸಿದ್ಧತೆ ಪೂರ್ಣ
    ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತೆ ಅನುಸರಿಸಿ ಸೋಮವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
    ದರ್ಶನ ಸಂದರ್ಭ ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಕಾಪಾಡುವುದು ಕಡ್ಡಾಯ. ದೇವಸ್ಥಾನ ಅರ್ಚಕರು, ರಕ್ಷಣಾ ಸಿಬ್ಬಂದಿ ಹಾಗೂ ನೌಕರರು ನೀಡುವ ಸಲಹೆ ಸೂಚನೆಗಳನ್ನು ಗಮನಿಸಿ ಭಕ್ತರು ಸಹಕರಿಸಬೇಕು. ದೇವರ ದರ್ಶನಕ್ಕೆ ಬೆಳಗ್ಗೆ 6.30ರಿಂದ 2 ಗಂಟೆ ಸಂಜೆ 5ರಿಂದ 8 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ, ಸಂಜೆ ಗಂಟೆ 4ರಿಂದ 6.30ರವರೆಗೆ ಭೇಟಿಗೆ ಅವಕಾಶವಿದೆ. ಭಕ್ತರಿಗೆ ಅನ್ನಪ್ರಸಾದ ಸೇವೆಯನ್ನು ಸರ್ಕಾರದ ಮಾರ್ಗಸೂಚಿ ಅನುಸರಿಸಿ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

    ಕೊಲ್ಲೂರು ದೇವಳದಲ್ಲಿ ಸಮಯ ನಿಗದಿ
    ಕೊಲ್ಲೂರು: ಸೋಮವಾರದಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ. ದೇವರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆಯಲಿದ್ದು, 5.30ರಿಂದ 7.30ರ ತನಕ ಭಕ್ತರಿಗೆ ಮೊದಲ ಹಂತದಲ್ಲಿ ದರ್ಶನಕ್ಕೆ ವ್ಯವಸ್ಥೆ, ಬೆಳಗ್ಗೆ 10.30ರಿಂದ 1.30 ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ತನಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
    ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ನೌಕರರು ಹಾಗೂ ಹೊರಗುತ್ತಿಗೆ ಯವರಿಗೆ ತರಬೇತಿ ನೀಡಲಾಗಿದೆ. ದೇವಸ್ಥಾನ ಪ್ರವೇಶ ಮೊದಲು ಕೈ ಕಾಲು ತೊಳೆದು ಬಳಿಕ ಭಕ್ತರು ಸ್ಯಾನಿಟೈಸ್ ಮಾಡಬೇಕು. ದೇವಳದ ಎದುರಿನ ಮುಖ್ಯದ್ವಾರದಿಂದ ಒಳ ಪ್ರವೇಶಿಸಿ, ಆನೆಬಾಗಿಲಿನ ಮೂಲಕ ಹೊರಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಳದ ಬಲಿಪೀಠದ ಎದುರು ನಿಂತು ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಳಕ್ಕೆ ಪ್ರವೇಶವಿಲ್ಲ. ದೇವಳದಲ್ಲಿ ಪೂಜೆ ಹಾಗೂ ಸಂಕಲ್ಪಗಳಿಗೆ ಅವಕಾಶವಿಲ್ಲ. ಸೇವೆ ಮಾಡಬಯಸುವವರು ಹಣ ಪಾವತಿ ಮಾಡಿದಲ್ಲಿ ಆನ್‌ಲೈನ್ ಸೇವಾದಾರರಿಗೆ ಕಳುಹಿಸುವಂತೆ ಅಂಚೆ ಮೂಲಕ ಕುಂಕುಮ ಪ್ರಸಾದ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ದೈಹಿಕ ಅಂತರ ಕಾಯ್ದುಕೊಂಡು ನಿಗದಿಪಡಿಸಿದ ಸಮಯದಲ್ಲಿ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಧ್ವನಿವರ್ಧಕದ ಮೂಲಕ ಭಕ್ತರನ್ನು ಎಚ್ಚರಿಸಲಾಗುವುದು. ಹಂತಹಂತವಾಗಿ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗುವುದು.
    -ಅರವಿಂದ ಸುತ್ತಗುಂಡಿ, ದೇವಳದ ಕಾರ್ಯನಿರ್ವಹಣಾಧಿಕಾರಿ

    ಭಕ್ತರು ಒಮ್ಮೆಲೇ ಮುಗಿಬೀಳಬಾರದು. ದಿನವೂ ದರ್ಶನಕ್ಕೆ ಅವಕಾಶ ಇರುವುದರಿಂದ ಮಾಸ್ಕ್ ಧರಿಸಿಕೊಂಡು, ಅಂತರ ಪಾಲಿಸಿ ದೇವಳಕ್ಕೆ ತೆರಳಬೇಕು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಎಚ್ಚರದಿಂದಿರುವುದು ಅಗತ್ಯ.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

    ಗೆಜ್ಜೆಗಿರಿ ಕ್ಷೇತ್ರದಲ್ಲಿ 14ರಿಂದ ಭಕ್ತರಿಗೆ ಅವಕಾಶ
    ಪುತ್ತೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮುಂಜಾಗರೂಕತಾ ಕ್ರಮವಾಗಿ ಒಂದು ವಾರ ದರ್ಶನ ಅವಕಾಶ ಮುಂದೂಡಲು ನಿರ್ಧರಿಸಲಾಗಿದೆ. ಜೂನ್ 14ರಂದು ಕ್ಷೇತ್ರವನ್ನು ಭಕ್ತರ ಪ್ರವೇಶಕ್ಕಾಗಿ ತೆರೆಯಲಾಗುವುದು. 14ರಿಂದ ಕ್ಷೇತ್ರದಲ್ಲಿ ಭಕ್ತರ ದರ್ಶನಕ್ಕೆ ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಸ್ಯಾನಿಟೈಸಿಂಗ್ ಮತ್ತು ಪ್ರತಿ ಭಕ್ತರ ಥರ್ಮಲ್ ಟೆಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದು ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆ ತಿಳಿಸಿದ್ದಾರೆ.

    22ರಿಂದ ಒಡಿಯೂರಲ್ಲಿ ದೇವರ ದರ್ಶನ
    ವಿಟ್ಲ: ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜೂನ್ 22ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ತನಕ ಅಂತರ ಕಾಯ್ದುಕೊಂಡು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಭೇಟಿಗೂ ಅವಕಾಶವಿದೆ. ಪ್ರವೇಶಕ್ಕೆ ಮಾಸ್ಕ್ ಧಾರಣೆ, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಸ್ವಚ್ಛತೆ ಸೇರಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಮಾಹಿತಿಗೆ ದೂ.ಸಂ.: 08255-266211, 298282, 9448177811 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಇಂದು ಬಹುತೇಕ ಮಸೀದಿ ತೆರೆಯದು
    ಮಂಗಳೂರು/ಉಡುಪಿ: ದೇವಸ್ಥಾನ, ಮಸೀದಿ ಸಹಿತ ರಾಜ್ಯದ ಎಲ್ಲ ಪ್ರಾರ್ಥನಾ ಮಂದಿರಗಳು ಜೂನ್ 8ರಿಂದ ತೆರೆಯಲು ಸರ್ಕಾರ ಅವಕಾಶ ನೀಡಿದ್ದರೂ, ನಗರದ ಬಹುತೇಕ ಮಸೀದಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಈ ದಿನ ತೆರೆಯುತ್ತಿಲ್ಲ.
    ಕೋವಿಡ್ 19 ಸಂಬಂಧಿಸಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಪಾಲಿಸಬೇಕಾದ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಅವಕಾಶವಿದ್ದರೆ ಮಾತ್ರ ಮಸೀದಿ ಸಮುದಾಯದ ಶ್ರದ್ಧಾಳುಗಳ ಭೇಟಿಗೆ ತೆರೆಯಬೇಕು. ಈ ಕುರಿತು ಮಸೀದಿಯ ಆಡಳಿತ ಸಮಿತಿ ಮಟ್ಟದಲ್ಲೇ ತೀರ್ಮಾನ ತೆಗೆದುಕೊಳ್ಳುವಂತೆ ಈಗಾಗಲೇ ಮಂಗಳೂರು ಖಾಜಿ ಸೂಚನೆ ನೀಡಿದ್ದಾರೆ. ಮಂಗಳೂರು ಝೀನತ್ ಭಕ್ಷ್ ಜುಮ್ಮಾ ಮಸೀದಿ, ಕುದ್ರೋಳಿ ಮಸೀದಿ ಜೂನ್ 8ರಂದೇ ತೆರೆಯುತ್ತಿದೆ. ಹೆಚ್ಚಿನ ಮಸೀದಿಗಳು ಸೋಮವಾರ ತೆರೆಯುತ್ತಿಲ್ಲ. ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಮಾರ್ಗಸೂಚಿ ಪ್ರಕಾರ ಮಸೀದಿಯಲ್ಲಿ ನಮಾಜ್ ನಿರ್ವಹಿಸಲು ಝೀನತ್ ಭಕ್ಷ್ ಜುಮ್ಮಾ ಮಸೀದಿ ಸಿದ್ಧತೆ ನಡೆಸಿಕೊಂಡಿದೆ.

    ಇಂದು ಸಭೆ: ಮಸೀದಿ ಪುನರಾರಂಭ ಕುರಿತಂತೆ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಜೂ.8ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಾಮೀಯ ಮಸೀದಿಯಲ್ಲಿ ಸಭೆ ಕರೆಯಲಾಗಿದೆ. ಜೂ.6ರಂದು ನೇಜಾರು ಮಸೀದಿಯಲ್ಲಿ ನಡೆದ ಸಮುದಾಯದ ಪ್ರಮುಖ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈ ಸಭೆ ನಡೆಯಲಿದೆ. ಜಿಲ್ಲೆಯ ಮಸೀದಿಗಳ ಪ್ರಮುಖರು ಭಾಗವಹಿಸಲಿರುವರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವೌಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts