More

    ಸಭೆಗೆ ಬಾರದ ಸಹಾಯಕ ಕೃಷಿ ನಿರ್ದೇಶಕಗೆ 1 ಸಾವಿರ ರೂ. ದಂಡ; ಆಡಳಿತಾಧಿಕಾರಿ ಸೂಚನೆ

    ರಾಣೆಬೆನ್ನೂರ: ಸಾಮಾನ್ಯ ಸಭೆಗೆ ಕಾರಣ ತಿಳಿಸದೆ ಗೈರಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರಗೆ 1 ಸಾವಿರ ರೂ. ದಂಡ ವಿಧಿಸುವಂತೆ ತಾಪಂ ವ್ಯವಸ್ಥಾಪಕರಿಗೆ ಜಿಪಂ ಉಪ ಕಾರ್ಯದರ್ಶಿ ಹಾಗೂ ತಾಪಂ ಆಡಳಿತಾಧಿಕಾರಿ ಎಸ್.ಬಿ. ಮಳ್ಳಳ್ಳಿ ಸೂಚಿಸಿದರು.
    ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಹಿತಿ ನೀಡಿದರೂ ತಾವು ಸಭೆಗೆ ಬಾರದೆ ಬೇರೆ ಅಧಿಕಾರಿಗಳನ್ನು ಕಳುಹಿಸಿದರೆ ನಡೆಯಲ್ಲ. ಅವರಿಗೆ ಎನ್‌ಆರ್‌ಇಜಿ ಸೆಕ್ಷನ್ 25ರ ಅಡಿಯಲ್ಲಿ 1 ಸಾವಿರ ರೂ. ದಂಡ ವಿಧಿಸಬೇಕು. ಇದರಲ್ಲಿ ದಂಡ ಪ್ರಮಾಣಕ್ಕಿಂತ ಅದರಿಂದ ಅಧಿಕಾರಿಯ ಸೇವೆಯಲ್ಲಿ ಮುಂದೆ ತೊಂದರೆಯಾಗುತ್ತದೆ. ಈ ವಿಷಯ ಸ್ಟೇಟ್ ಕೌನ್ಸಿಲ್‌ಗೆ ಹೋಗುತ್ತದೆ ಮತ್ತು ಎರಡ್ಮೂರು ಬಡ್ತಿ ಕಟ್ ಆಗುತ್ತದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸಭೆಗೆ ಸರಿಯಾಗಿ ಎಲ್ಲರೂ ಹಾಜರಾಗಬೇಕು ಎಂದು ಸೂಚಿಸಿದರು.
    ಸಭೆ ಪ್ರಾರಂಭದಲ್ಲಿಯೇ ಶಿಕ್ಷಣ ಇಲಾಖೆ ಮೇಲಿನ ಚರ್ಚೆ ಕುರಿತು ಮಾಹಿತಿ ನೀಡುವಂತೆ ಬಿಇಒ ಕರೆಯಲಾಯಿತು. ಆದರೆ, ಅವರ ಬದಲಾಗಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಭೆಗೆ ಆಗಮಿಸಿದ್ದರು. ಇದು ಎಸ್.ಬಿ. ಮಳ್ಳಳಿ ಕೋಪಗೊಳ್ಳಲು ಕಾರಣವಾಯಿತು. ಇದು ಸಾಲದೆಂಬಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕೂಡ ಕೌಟುಂಬಿಕ ಕಾರಣದಿಂದ ಗೈರು ಹಾಜರಾಗಿ ತಮ್ಮ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿತು. ಅಲ್ಲದೆ ಸಭೆಗೆ ಬಂದಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಆಡಳಿತಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗದೆ ತಡಬಡಾಯಿಸಿದರು. ನಂತರ ಕೃಷಿ ವಿಚಾರ ಬಂದಾಗ ಸಹಾಯಕ ನಿರ್ದೇಕರು ಇಲ್ಲದ ಕಾರಣ ಅವರಿಗೆ ದಂಡ ವಿಧಿಸಿದರು.
    ನರೇಗಾದಡಿ ಕೆಲಸ ಮಾಡಿಸಿ…
    ತಾಲೂಕಿನಲ್ಲಿ ಬರ ಘೋಷಣೆಯಾಗಿದ್ದು ಸ್ಥಳೀಯ ಜನರಿಗೆ ಕೆಲಸ ನೀಡಬೇಕು. ಬದು ನಿರ್ಮಾಣ, ಕೃಷಿ ಹೊಂಡ, ನೀರುಗಾಲುವೆ, ಎರೆಹುಳು ತೊಟ್ಟಿ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಗ್ರಾಪಂಗಳ ಮೂಲಕ ಎನ್‌ಆರ್‌ಇಜಿ ಅಡಿ ಕೈಗೆತ್ತಿಕೊಳ್ಳಲು ಯಾವುದೇ ಮಿತಿ ಇಲ್ಲ. 260 ಕೆಲಸಗಳನ್ನು ಕೈಗೊಳ್ಳಬಹುದಾಗಿದೆ ಎಂದು ಆಡಳಿತಾಧಿಕಾರಿ ಎಸ್.ಬಿ. ಮಳ್ಳಳ್ಳಿ, ಅರಣ್ಯ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು.
    ಸರ್ಕಾರಿ ಶಾಲೆಗಳಿಗೆ ನೀಡಿದ ಸಸಿಗಳ ಬಗ್ಗೆ ಶಿಕ್ಷಣ ಇಲಾಖೆಯವರು ಕಾಳಜಿ ವಹಿಸಬೇಕು. ಪ್ರತಿ ವರ್ಷ ವನಮಹೋತ್ಸವ ದಿನದಂದು ಅದೇ ಜಾಗದಲ್ಲಿ ಸಸಿಗಳನ್ನು ನೆಡುತ್ತಿರುವುದು ಕಂಡು ಬಂದಿದೆ. ಸಸಿಗಳ ಆರೈಕೆ ದೃಷ್ಟಿಯಿಂದ ಬಿಸಿಯೂಟ ಮಾಡಿದ ಮಕ್ಕಳು ಕೈ ತೊಳೆಯುವ ನೀರು ಸಸಿಗಳನ್ನು ನೆಟ್ಟ ಪ್ರದೇಶಕ್ಕೆ ಸೇರುವಂತೆ ಕ್ರಮ ಜರುಗಿಸಬೇಕು ಎಂದು ಅಕ್ಷರ ದಾಸೋಹ ಅಧಿಕಾರಿಗೆ ಸಲಹೆ ನೀಡಿದರು.
    ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹರ ಘರ ಜಲ ಗುರಿ ಕಡಿಮೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಹೇಗಿದೆ. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಕಾಮಗಾರಿ ನಿಲ್ಲಿಸಿದ ಉದಾಹರಣೆಯಿದೆಯೇ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ತಾಲೂಕಿನ ನಲವಾಗಲ ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಅದು ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದರು.
    ಸರ್ಕಾರಿ ಶಾಲೆಗಳಲ್ಲಿ ಹಾಗೂ ಸರ್ಕಾರದ ಹಾಸ್ಟೆಲ್‌ಗಳಲ್ಲಿ ಊಟದ ಮೆನ್ಯುನಲ್ಲಿ ಇರುವ ಆಹಾರ ಪದಾರ್ಥಗಳು ತೋರಿಕೆ ಮಾತ್ರವಿರದೆ ವಿದ್ಯಾರ್ಥಿಗಳ ತಟ್ಟೆಯಲ್ಲಿರಬೇಕು. ಇದರ ಬಗ್ಗೆ ಸಂಬಂಧಿಸಿದ ಅಕ್ಷರ ದಾಸೋಹ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
    ಯುಟಿಪಿ (ತುಂಗಾ ಮೇಲ್ದಂಡೆ ಯೋಜನೆ) ಕಾಲುವೆಗಳಲ್ಲಿ ಹೂಳೆತ್ತಲು ಸರ್ಕಾರದಿಂದ ಯಾವುದೇ ಅನುದಾನ ಲಭಿಸುವುದಿಲ್ಲ ಎಂದು ಯುಟಿಪಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಆಗ ತಾಪಂ ಆಡಳಿತಾಧಿಕಾರಿಗಳು ನಿಮ್ಮ ಇಲಾಖೆ ವತಿಯಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಕೊಟ್ಟಲ್ಲಿ ಗ್ರಾಪಂಗಳ ವತಿಯಿಂದ ಎನ್‌ಆರ್‌ಇಜಿ ಮೂಲಕ ಕೆಲಸವಾಗುತ್ತದೆ ಹಾಗೂ ಮಾನವ ದಿನಗಳ ಗುರಿಯೂ ತಲುಪಿದಂತಾಗುತ್ತದೆ ಎಂದು ತಿಳಿಸಿದರು.
    ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ ಎಸ್.ಪಿ., ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts