More

    ಮೇಲುಕೋಟೆಯಲ್ಲಿ ರಾತ್ರಿ ವೇಳೆ ತೆಲುಗು ಸಿನಿಮಾ ಚಿತ್ರೀಕರಣ

    ಮೇಲುಕೋಟೆ: ತೆಲುಗು ನಟ ನಾಗಾರ್ಜುನ ಅಭಿನಯದ ‘ನಾಸಾಮಿ ರಂಗ’ ತೆಲುಗು ಚಿತ್ರತಂಡ ಮೇಲುಕೋಟೆಯ ಸ್ಮಾರಕ ಹಾಗೂ ಪವಿತ್ರ ಕಲ್ಯಾಣಿಯಲ್ಲಿ ರಾತ್ರಿ ವೇಳೆ ಚಿತ್ರೀಕರಣ ಮಾಡುವ ಮೂಲಕ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ್ದು, ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಎರಡು ದಿನಗಳ ಕಾಲ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದ ತೆಲುಗು ಚಿತ್ರತಂಡ ಜಿಲ್ಲಾಧಿಕಾರಿ ಆದೇಶದಲ್ಲಿರುವ ‘ರಾತ್ರಿ 7 ಗಂಟೆ ನಂತರ ಚಿತ್ರೀಕರಣ ನಿಷೇಧಿಸಲಾಗಿದೆ’ ಎಂಬ ಸ್ಷಷ್ಟವಾದ ಷರತ್ತನ್ನು ಉಲ್ಲಂಘಿಸಿ ತಡರಾತ್ರಿ 12 ಗಂಟೆವರೆಗೆ ಚಿತ್ರೀಕರಣ ಮಾಡಿದೆ.

    ಅಕ್ರಮವಾಗಿ ಇಡೀ ಕಲ್ಯಾಣಿ ಸಮುಚ್ಚಯಕ್ಕೆ ದೀಪಾಲಂಕಾರ ಮಾಡಲಾಗಿದೆ. ನಿಯಮಗಳಿಗೆ ವಿರುದ್ಧವಾಗಿ ಕ್ರೇನ್ ಬಳಸಿ ಚಿತ್ರೀಕರಣ ಮಾಡಲಾಗಿದೆ. ಸೆಟ್‌ನಲ್ಲಿ ಮಾಂಸಾಹಾರ ತರಿಸಿ ಸೇವನೆ ಮಾಡಿದ್ದಾರೆ ಎಂಬ ಆರೋಪ ನಾಗರಿಕರಿಂದ ಕೇಳಿಬರುತ್ತಿದೆ.

    ಈ ಹಿಂದೆ ತೆಲುಗು ಚಿತ್ರತಂಡವೊಂದು ರಾಯಗೋಪುರದ ಬಳಿ ಬಾರ್ ಮಾದರಿಯ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದಾಗ ನಾಗರಿಕರಿಂದ ತೀವ್ರ ವಿರೋಧ ಕೇಳಿ ಬಂದ ಕಾರಣ ರಾಜ್ಯ ಪ್ರಾಚ್ಯವಸ್ತು ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದನ್ನು ರದ್ದುಮಾಡಿ ಒಂದು ಲಕ್ಷ ರೂ. ದಂಡ ಹಾಕಿತ್ತು. ರಾತ್ರಿ ವೇಳೆಯ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಆದರೀಗ ಮತ್ತೆ ರಾತ್ರಿ ಚಿತ್ರೀಕರಣ ಮಾಡಿ ನಿಯಮ ಉಲ್ಲಂಘಿಸಲಾಗಿದೆ.

    ಮೇಲುಕೋಟೆಯಲ್ಲಿ ಭವ್ಯ ಸ್ಮಾರಕಗಳ ಸಂರಕ್ಷಣೆ ಸಂಬಂಧ ಸರ್ಕಾರ ಮತ್ತು ಮತ್ತು ಜಿಲ್ಲಾಡಳಿತ ಕೆಲವೊಂದು ನಿಬಂಧನೆಗಳನ್ನು ಹಾಕಿ ಚಿತ್ರೀಕರಣಕ್ಕೆ ಅನುಮತಿ ನೀಡುತ್ತದೆ. ಆದರೆ ದೇವಾಲಯದ ಅಧಿಕಾರಿಗಳ ನಿರ್ಲಕ್ಷ್ಯತದಿಂದ ಅನುಮತಿ ಇಲ್ಲದಿದ್ದರೂ ರಾಜಕಾರಣಿಗಳ ಕರೆಯ ನೆಪ ನೀಡಿ ರಾತ್ರೀ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಸ್ಮಾರಕಗಳ ಸಂರಕ್ಷಣೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಾಗಕರಿಕರು ಆಗ್ರಹಿಸಿದ್ದಾರೆ.

    ಕನ್ನಡ ಚಿತ್ರತಂಡದಿಂದಲೂ ಉಲ್ಲಂಘನೆ
    ನಟ ದಿಗಂತ್ ಅಭಿನಯದ ಕನ್ನಡ ಚಿತ್ರತಂಡ ಸಹ ಎರಡು ದಿನಗಳ ಹಿಂದೆ ಅಕ್ಕ-ತಂಗಿ ಕೊಳದ ಬಳಿ ನಾಗರಿಕರ ವಿರೋಧದ ನಡುವೆಯೂ ರಾತ್ರಿ ವೇಳೆ ಚಿತ್ರೀಕರಣ ಮಾಡಿತ್ತು. ಈ ವೇಳೆ ಕೊಳಕ್ಕೆ ದೀಪಾಲಂಕಾರ ಮಾಡಲಾಗಿತ್ತು. ಜತೆಗೆ ಸೋಪಾನಗಳ ಮೇಲೆ ಕ್ರೇನ್ ಇಟ್ಟು ಚಿತ್ರೀಕರಣ ಮಾಡಿದ್ದ ಚಿತ್ರತಂಡ, ಆಂಜನೇಯಸ್ವಾಮಿ ದೇವಾಲಯದ ಗೋಪುರದ ಮೇಲೆ ಹತ್ತಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts