More

    ಕೋರಮಂಡಲ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ತಹಸೀಲ್ದಾರ್ ಸ್ಥಳ ಪರಿಶೀಲನೆ


    ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಗ್ರಾಮಗಳಿಗೆ ತಹಸೀಲ್ದಾರ್ ನಿಸರ್ಗಪ್ರಿಯ ಶುಕ್ರವಾರ ಭೇಟಿ ನೀಡಿದ್ದರು. ಕಾರ್ಖಾನೆಯಿಂದ ಹೊರಬರುವ ವಿಷಕಾರಿ ಹಾರು ಬೂದಿಯನ್ನು ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದರು.


    ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಮಾಕವಳ್ಳಿ, ಕರೋಟಿ, ಹೆಗ್ಗಡಹಳ್ಳಿ ಗ್ರಾಮಗಳಿಗೆ ನಿಸರ್ಗಪ್ರಿಯ ಭೇಟಿ ನೀಡಿ ಕಾರ್ಖಾನೆ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಬೆಳೆದ ಅಡಿಕೆ, ತೆಂಗು, ರಾಗಿ, ಮೆಕ್ಕೆಜೋಳ, ಬಾಳೆ ಸೇರಿದಂತೆ ಮುಂತಾದ ಫಸಲು ವೀಕ್ಷಣೆ ಮಾಡಿದರು. ಈ ವೇಳೆ ಕಾರ್ಖಾನೆ ಬೂದಿ ಬಿದ್ದಿರುವುದು ಗಮನಕ್ಕೆ ಬಂತು. ಸಾರ್ವಜನಿಕರು ಬೂದಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು.


    ತಾಲೂಕಿನ ರೈತರ ಜೀವನಾಡಿ ಹೇಮಾವತಿ ನದಿ ಸಮೀಪವಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿಷಕಾರಿ ಹಾರು ಬೂದಿ ಬಿಡುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಮತ್ತು ರೈತರು ಬೆಳೆಯುವ ಫಸಲು ಹಾಗೂ ಪರಿಸರದ ಮೇಲೆ ಮಾಲಿನ್ಯ ಆಗುತ್ತಿದೆ. ಸ್ಥಳೀಯರು ಮತ್ತು ರೈತ ಮುಖಂಡರು ಹಲವು ಬಾರಿ ಪ್ರತಿಭಟಿಸಿದರೂ ಹಾರು ಬೂದಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.


    ಮಾಕವಳ್ಳಿ ದೇವರಸೇಗೌಡ, ಕರೋಟಿ ತಮ್ಮಯ್ಯ, ಮಾಕವಳ್ಳಿ ಚಿನ್ನಸ್ವಾಮಿ, ಹರೀಶ್, ಕೇಶವ್, ಸ್ವಾಮಿ, ಆನಂದ್, ಚೆಲುವರಾಜು, ಕರೋಟಿ ಶಂಕರ್ ಸೇರಿ ಇತರರು ಇದ್ದರು.

    ಮಾಕವಳ್ಳಿಯ ಕೋರಮಂಡಲ ಸಕ್ಕರೆ ಕಾರ್ಖಾನೆಯಿಂದ ಹೊರಬರುತ್ತಿರುವ ಹಾರು ಬೂದಿ ಪರಿಶೀಲಿಸಲಾಗಿದೆ. ಸಾರ್ವಜನಿಕರು ಹಾಗೂ ಪರಿಸರಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅಗತ್ಯ ಕ್ರಮ ಅನುಸರಿಸಬೇಕಾಗಿರುವುದು ಕಾರ್ಖಾನೆಯ ಕರ್ತವ್ಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
    ನಿಸರ್ಗಪ್ರಿಯ, ತಹಸೀಲ್ದಾರ್

    ಕಾರ್ಖಾನೆ ಪರಿಸರ ಮಲೀನ ನಿಯಂತ್ರಣ ಮಾಡದೆ ಸುತ್ತಮುತ್ತಲಿನ ಜನರ ಆರೋಗ್ಯ, ಕೃಷಿ ಸೇರಿ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ತ್ಯಾಜ್ಯ ನೀರನ್ನು ಹೇಮಾವತಿ ನದಿಗೆ ಹರಿಸುತ್ತಿದೆ. ಹಾರು ಬೂದಿಯನ್ನು ಹೊರಬಿಟ್ಟು ತೊಂದರೆ ಉಂಟು ಮಾಡುತ್ತಿದೆ. ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
    ದೇವರಸೇಗೌಡ, ಗ್ರಾಮದ ಮುಖಂಡ, ಮಾಕವಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts