More

    ಗುಣಮಟ್ಟ ಆರೋಗ್ಯ ಸೇವೆಗೆ ತಂತ್ರಜ್ಞಾನ ಸಹಕಾರಿ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

    ಬೆಂಗಳೂರು:ಜನರಿಗೆ ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಒದಗಿಸಲು ತಂತ್ರಜ್ಞಾನ ಬಹಳ ಮುಖ್ಯವಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡೆಂಘೆ ನಿಯಂತ್ರಿಸುವ ಎರಡು ಆಪ್ಲಿಕೇಷನ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ಆರೋಗ್ಯ ಇಲಾಖೆ, ಬಿಬಿಎಂಪಿ, ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ಸಹಯೋಗದಲ್ಲಿ ಐಐಎಸ್ಸಿ, ಡೆಂಘೆ ಬಗ್ಗೆ ಮುಂಚಿತವಾಗಿ ಮೂನ್ಸೂಚನೆ ನೀಡುವ ‘ಡೆಂಘೆ ರೋಗ ಕಣ್ಗಾವಲು ಡ್ಯಾಶ್ ಬೋರ್ಡ್’ಹಾಗೂ ಮೊಬೈಲ್ ಅಪ್ಲಿಕೇಷನ್’ ಅಭಿವೃದ್ಧಿಪಡಿಸಿದೆ. ಡೆಂಘೆ ಬಗ್ಗೆ ಒಂದು ತಿಂಗಳು ಮುಂಚಿತವಾಗಿ ಎಚ್ಚರಿಕೆ ಮೂನ್ಸೂಚನೆ ಮಾಹಿತಿ ನೀಡುತ್ತದೆ. ಯಾವ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹೆಚ್ಚು ಡೆಂಘೆ ಕಾಣಿಸಿಕೊಳ್ಳುತ್ತದೆ ಹಾಗೂ ಮುಂಜಾಗ್ರತಾವಾಗಿ ಕ್ರಮ ತೆಗೆದುಕೊಳ್ಳುವಂತೆ ನಮಗೆ ಅಪಾಯದ ಎಚ್ಚರಿಕೆ ನೀಡುತ್ತದೆ. ಡೆಂಘೆ ಹೇಗೆ ಹರಡುತ್ತದೆ, ಎಷ್ಟು ಕೇಸ್‌ಗಳು ದಾಖಲಾಗುತ್ತಿವೆ, ಹವಾಮಾನ ಪರಿಸ್ಥಿತಿ, ಉಷ್ಣತೆ ಹಾಗೂ ಜನರ ಓಡಾಟ ಹೇಗಿದೆ ಎಂಬುದರ ಬಗ್ಗೆಯೂ ಮಾಹಿತಿ ಸಿಗಲಿದೆ ಎಂದರು.

    ವಿಶೇಷವಾಗಿ ಡೆಂಘೆಗಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅದೇರೀತಿ ಬೇರೆ ಬೇರೆ ಸಾಂಕ್ರಾಮಿಕ ರೋಗಿಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುವುದು. ಇಲಾಖೆ ಅಧಿಕಾರಿಗಳು ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇದರಿಂದ ನಮಗೂ ಹೊಸ ಅನುಭವವಾಗಲಿದೆ. ಬಿಬಿಎಂಪಿ ಮಟ್ಟದಲ್ಲಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಡೆಂಘೆ ನಿಯಂತ್ರಣಕ್ಕೆ ಆರೋಗ್ಯ ಕಾರ್ಯಕರ್ತರು ಹೇಗೆ ಕೆಲಸ ಮಾಡುತ್ತಾರೆ, ಜ್ವರ, ಲಾರ್ವಾ ಸಮೀಕ್ಷೆ, ಮನೆ ಮನೆಗೆ ಆರೋಗ್ಯ ಸರ್ವೇ, ದತ್ತಾಂಶ ಹಾಗೂ ರಕ್ತದ ಮಾದರಿ ಸಂಗ್ರಹ ಬಗ್ಗೆ ಮಾಹಿತಿ ನೀಡುತ್ತದೆ. ಎರಡು ಆಪ್ಲಿಕೇಷನ್ ಅಭಿವೃದ್ಧಿಪಡಿಸಿರುವ ಐಐಎಸ್ಸಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

    ಇದನ್ನೂ ಓದಿ: Pratap Simha Strikes Against CM Siddaramaiah | ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

    ನಮ್ಮ ಕಾರ್ಯಕ್ರಮಗಳು ಜನರಿಗೆ ಮುಟ್ಟಬೇಕು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸಾಂಕ್ರಾಮಿಕ ರೋಗಗಳ ತಡೆಗೆ ಪ್ರಕ್ರಿಯೆ ಶುರು ಮಾಡಲಿದ್ದೇವೆ. ರೋಗ ನಿಯಂತ್ರಣಕ್ಕೆ ಬರದಿದ್ದರೆ ಜಿನೋಮಿಕ್ಸ್ ಪರೀಕ್ಷೆ ಮಾಡಬೇಕಾಗುತ್ತದೆ. ಸದ್ಯ ಅಂಥ ಪರಿಸ್ಥಿತಿ ಉದ್ಬವಿಸಿಲ್ಲ ಎಂದು ಹೇಳಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಆಂತರಿಕ ತನಿಖೆ ನಡೆಸಲಾಗುತ್ತದೆ ಎಂದರು. ನಗರದಲ್ಲಿ ಹುಕ್ಕಾಬಾರ್ ಹೆಚ್ಚಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಗರದಲ್ಲಿ ಹುಕ್ಕಾಬಾರ್ ಹೆಚ್ಚಾಗುತ್ತಿರುವುದು ನಿಜ. ಇದರ ಸಂಬಂಧ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಮಾದಕ ವಸ್ತುಗಳ ಸುಲಭವಾಗಿ ಸಿಗುತ್ತಿದೆ. ಇದನ್ನು ತಡೆಗೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ಆಲೋಚಿಸಲಾಗಿದೆ ಎಂದರು.

    ಇಲಾಖೆ ಆಯುಕ್ತ ಡಿ.ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ) ಎಂಡಿ ನವೀನ್ ಭಟ್, ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts