More

    ಮಳೆ ಆಪತ್ತು ನಿರ್ವಹಣೆಗೆ ತಂಡ

    ಬಂಕಾಪುರ: ಕರೊನಾ ಎರಡನೇ ಅಲೆಯ ನಿಯಂತ್ರಣ, ಜಾಗೃತಿ, ಮಾರ್ಗಸೂಚಿ ಜಾರಿಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇದೀಗ ಮಳೆಗಾಲದಲ್ಲಿ ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧ ನೀರು, ಸ್ವಚ್ಛತೆ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ.

    ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಜನರಿಗೆ ತೊಂದರೆಯಾಗುವುದನ್ನು ತಡೆಯಲು ಪುರಸಭೆ 24*7 ಮಾದರಿಯಲ್ಲಿ 8 ಪೌರ ಕಾರ್ವಿುಕರ ತಂಡ ರಚಿಸಿ, ನೀರು ನುಗ್ಗುವ ಸ್ಥಳಗಳಲ್ಲಿ ನಿಯೋಜನೆ ಮಾಡಿದೆ. ಆಸಾರ ಸರ್ಕಲ್, ಚಾಮುಂಡೇಶ್ವರಿ ನಗರ, ಕನೋಜ ಗಲ್ಲಿ, ಎಂ.ಜಿ. ಬ್ಯಾಂಕ್ ರಸ್ತೆ, ಸುಂಕದಕೇರಿ ಸೇರಿ ಇತರೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಚರಂಡಿ ನೀರು ಸರಾಗವಾಗಿ ಹರಿಯದೆ ಮನೆ, ಅಂಗಡಿ-ಮುಂಗಟ್ಟುಗಳಿಗೆ ನುಗ್ಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಲು ಪುರಸಭೆ ಮುಂದಾಗಿದೆ.

    ವಿಶೇಷ ತಂಡ ರಚನೆ:ಮಳೆ ಆಪತ್ತು ನಿರ್ವಹಣೆಗೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ನೇತೃತ್ವದಲ್ಲಿ ಈಗಾಗಲೇ ಕಂದಾಯ ಅಧಿಕಾರಿ ಎಂ. ಎಂ. ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಕಿ ರೂಪಾ ನಾಯ್ಕ, ಕಚೇರಿ ವ್ಯವಸ್ಥಾಪಕಿ ಬಸಮ್ಮ ಕೊರಕಲ್, ಕಂದಾಯ ನಿರೀಕ್ಷಕ ರಮೇಶ ತಿರಕಪ್ಪನವರ, ಸಮುದಾಯ ಸಂಘಟಕ ಬೀರಪ್ಪ ಗಿಡ್ಡನ್ನವರ, ಎಸ್​ಡಿಸಿ ವೀರಯ್ಯ ಹಿರೇಮಠ ಸೇರಿ ಆರು ಜನರ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ.

    ಮಳೆ-ಗಾಳಿಗೆ ವಿದ್ಯುತ್ ಕಂಬ, ಗಿಡ- ಮರಗಳು ನೆಲಕ್ಕುರುಳಿ ಸಮಸ್ಯೆ ಉಂಟಾದಲ್ಲಿ ಅರಣ್ಯ ಮತ್ತು ಹೆಸ್ಕಾಂ ಸಿಬ್ಬಂದಿಯ ಸಹಾಯದೊಂದಿಗೆ ತೆರವು ಕಾರ್ಯಾಚರಣೆಗೆ ಅಗತ್ಯವಿರುವ ಸಾಮಗ್ರಿ ಮತ್ತು ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೆ, ವಿದ್ಯುತ್ ಕಡಿತ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅವಶ್ಯವಾದಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಪಟ್ಟಣದ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

    ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ:ಕಳೆದ ಒಂದು ವರ್ಷದಿಂದ ನಿರಂತರವಾಗಿ ಪಟ್ಟಣಕ್ಕೆ ವರದಾ ನದಿಯ ನೀರನ್ನು ತೆವರುಮೆಳ್ಳಳ್ಳಿ ಗ್ರಾಮದ ಹತ್ತಿರದ ಜಾಕ್​ವೆಲ್​ನಿಂದ ಪೂರೈಕೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿಂದ ನೀರು ಪೂರೈಕೆ ಮಾಡಲು ವಿದ್ಯುತ್​ನ ತೊಂದರೆಯಾದಲ್ಲಿ ಪಟ್ಟಣದ ಬಾಳಪ್ಪನ ಬಾವಿ ಸಂಪ್ ಮತ್ತು ದುರ್ಗಾದೇವಿ ಸಂಪ್​ನಿಂದ ಕುಡಿಯುವ ನೀರು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಪಟ್ಟಣದಲ್ಲಿ ಪುರಸಭೆಯ ಐದು ಶುದ್ಧ ನೀರಿನ ಘಟಕಗಳಲ್ಲಿ ಮೂರು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಎರಡು ಘಟಕಗಳನ್ನು ಶೀಘ್ರ ಆರಂಭಿಸುವುದಾಗಿ ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    ರೋಗ ಹರಡದಂತೆ ಮುಂಜಾಗ್ರತೆ ಕ್ರಮ:ಪಟ್ಟಣದ ಎಲ್ಲ ಚರಂಡಿ ಸ್ವಚ್ಛಗೊಳಿಸಲಾಗುತ್ತಿದ್ದು, ಎಲ್ಲ ವಾರ್ಡ್​ಗಳಲ್ಲಿ ಸೋಡಿಯಂ ಹೈಪೋಕ್ಲೊರೈಡ್ ದ್ರಾವಣವನ್ನು ಈಗಾಗಲೇ ಸಿಂಪಡಣೆ ಮಾಡಲಾಗಿದೆ. ಈಗ ಮತ್ತೆ ಫಾಗಿಂಗ್ ಮತ್ತು ಮೆಲಾಥಿಯನ್ ಪೌಡರ್ ಸಿಂಪಡಣೆ ಹಾಗೂ ತ್ಯಾಜ್ಯ ವಸ್ತು, ಚರಂಡಿಗಳಲ್ಲಿ ಸತ್ತ ಪ್ರಾಣಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

    ಮಳೆಯಿಂದ ಸಮಸ್ಯೆ, ತೊಂದರೆ ಎದುರಾದರೆ ಸಾರ್ವಜನಿಕರು ತುರ್ತಾಗಿ ಸಂರ್ಪಸಲು ಪುರಸಭೆ ಸಹಾಯವಾಣಿ ಆರಂಭಿಸಿದೆ. ಮುಖ್ಯಾಧಿಕಾರಿ ಮೊ. 9449178195, ನೇಸಿಮ್ ಆಲದಕಟ್ಟಿ ಮೊ. 8073198696 ಅವರನ್ನು ಸಂರ್ಪಸಬಹುದಾಗಿದೆ.

    ಪಟ್ಟಣದಲ್ಲಿ ಈಗಾಗಲೇ ಕುಡಿಯುವ ನೀರು ಹಾಗೂ ನೈರ್ಮಲ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದ ಎಲ್ಲ ಸಮಸ್ಯೆ ಎದುರಿಸಲು ಪುರಸಭೆ ಸನ್ನದ್ಧವಾಗಿದೆ. ಜನರಿಗೆ ಸಮಸ್ಯೆಯಾದಲ್ಲಿ ಪುರಸಭೆ ಸಹಾಯವಾಣಿಗೆ ಕರೆ ಮಾಡಬಹುದು.

    | ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts