More

    ಶಿಕ್ಷಕರಿಗೆ ‘ಭಾರ’ವಾದ ಬದುಕು

    ಬೆಳಗಾವಿ: ‘ನಾನು 8 ವರ್ಷಗಳಿಂದ ಅನುದಾನ ರಹಿತ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕರೊನಾ ಹಿನ್ನೆಲೆಯಲ್ಲಿ 4 ತಿಂಗಳಿಂದ ಶಾಲೆಗೆ ಬೀಗ ಜಡಿಯಲಾಗಿದ್ದು, ಆಡಳಿತ ಮಂಡಳಿ ವೇತನ ಕೊಟ್ಟಿಲ್ಲ. ಅನಿವಾರ್ಯವಾಗಿ ಕಾರು ಚಲಾಯಿಸಿ ಬದುಕಿನ ಬಂಡಿ ದೂಡುತ್ತಿದ್ದೇನೆ. ಬದುಕು ನಡೆಸಲು ಯಾವ ಕೆಲಸವಾದರೇನೂ?’.

    ಬೆಳಗಾವಿ ಜಿಲ್ಲೆಯ ಅನುದಾನ ರಹಿತ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ತಮ್ಮ ಬದುಕಿನಲ್ಲಿ ಕಹಿ ಮಾರ್ಗ ಎದುರಾದರೂ, ಅನಿವಾರ್ಯ ತೆಯ ರೀತಿಯನ್ನು ಹೇಳಿಕೊಂಡ ಪರಿಯಿದು. ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ಶಿಕ್ಷಕರು, ಮಹಾಮಾರಿ ಕರೊನಾ ವೈರಸ್‌ನಿಂದ ನನ್ನ ಬದುಕೇ ಹಳಿ ತಪ್ಪಿದೆ ಎಂದು ಅಳಲು ತೋಡಿಕೊಂಡರು. ಇದು ನನ್ನಬ್ಬನ ಸಂಕಷ್ಟವಷ್ಟೇ ಅಲ್ಲ, ಬಹುತೇಕ ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ಕತೆ-ವ್ಯಥೆ ಇದೇ ರೀತಿ ಆಗಿದೆ ಎಂದರು.

    ಬಳೆ ಮಾರಾಟ: ಕುಟುಂಬ ನಿರ್ವಹಣೆಗಾಗಿ ಕೆಲ ಶಿಕ್ಷಕರು ಕೃಷಿ ಕಾಯಕದತ್ತ ಮುಖಮಾಡಿದ್ದರೆ, ಇನ್ನೂ ಕೆಲವರು ಕಾರ್ಖಾನೆಗಳಲ್ಲಿ ಲಭ್ಯವಿರುವ ಕೆಲಸಕ್ಕೆ ಹೋಗುತ್ತಿದ್ದಾರೆ. ಬಳೆಗಾರ ಕುಟುಂಬದ ಶಿಕ್ಷಕರೊಬ್ಬರು ತಮ್ಮ ತಾಯಿಯೊಂದಿಗೆ ಬಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅದೆಷ್ಟೋ ಶಿಕ್ಷಕರು ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ದುಡಿಯುತ್ತಿದ್ದಾರೆ. ಕೆಲವರು ಸುಂಕ ವಸೂಲಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪದೇಪದೆ ಕರೆ: ಕುಟುಂಬ ನಿರ್ವಹಣೆಗೆ ಅಗತ್ಯವಿರುವ ಕೆಲ ವಸ್ತುಗಳನ್ನು ಇಎಂಐ ಆಧಾರದಲ್ಲಿ ಖರೀದಿಸಿದ್ದೆ. ಪ್ರತಿ ತಿಂಗಳ ವೇತನ ಪಾವತಿಯಾದ ನಂತರ ಸಾಲದ ಕಂತು ಭರಿಸುತ್ತಿದ್ದೆ. ಆದರೆ, ಏಪ್ರಿಲ್‌ನಿಂದ ವೇತನವೇ ಕೈಗೆಟುಕದ್ದರಿಂದ ಬೇರೆಯವರ ಬಳಿ ಕೈಗಡ ಸಾಲ ಪಡೆದು ಜೀವನ ನಡೆಸುತ್ತಿದ್ದೇನೆ. ಆದರೆ, ಸಾಲದ ಕಂತು ಪಾವತಿಸುವಂತೆ ಬ್ಯಾಂಕ್‌ನಿಂದ ಪದೇಪದೆ ಬರುತ್ತಿರುವ ಕರೆ ತಲೆಬಿಸಿ ತಂದಿದೆ ಎಂದು ಬೆಳಗಾವಿ ನಗರದ ಖಾಸಗಿ ಶಾಲೆ ಶಿಕ್ಷಕರೊಬ್ಬರು ‘ವಿಜಯವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

    4 ತಿಂಗಳ ವೇತನ ಬಾಕಿ

    ಬೆಳಗಾವಿ ಜಿಲ್ಲೆಯಲ್ಲಿ 1,285 ಅನುದಾನ ರಹಿತ ಶಾಲೆಗಳಿವೆ. ಈ ಪೈಕಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 366 ಪ್ರಾಥಮಿಕ, 148 ಪ್ರೌಢಶಾಲೆಗಳಿದ್ದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 546 ಪ್ರಾಥಮಿಕ, 225 ಪ್ರೌಢಶಾಲೆಗಳಿವೆ. ಇವುಗಳಲ್ಲಿ ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕರೊನಾ ಸಂಕಷ್ಟದ ಕಾಲದಲ್ಲೂ ತಮ್ಮ ಸಿಬ್ಬಂದಿಗೆ ಶೇ. 50ರಷ್ಟು ಸಂಬಳ ಪಾವತಿಸಿವೆ. ಆದರೆ, ಬಹುತೇಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳು 4 ತಿಂಗಳಿಂದ ವೇತನ ಪಾವತಿಸಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಿಬ್ಬಂದಿ ಸದ್ಯ ಆರ್ಥಿಕ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು, ಸಿಬ್ಬಂದಿಗೆ ವೇತನ ಪಾವತಿಯಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಸಿಬ್ಬಂದಿಗೆ ಕಡ್ಡಾಯವಾಗಿ ವೇತನ ಪಾವತಿಸುವಂತೆ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದ್ದೇನೆ.
    | ಗಜಾನನ ಮನ್ನಿಕೇರಿ ಡಿಡಿಪಿಐ, ಚಿಕ್ಕೋಡಿ

    ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿಗೆ ವೇತನ ಪಾವತಿಯಾಗದಿರುವ ಕುರಿತು ದೂರು ಬಂದಿಲ್ಲ. ನಿರ್ದಿಷ್ಟವಾಗಿ ದೂರು ಬಂದರೆ, ಸಂಬಂಧಿತ ಶಾಲೆ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
    | ಎ.ಬಿ.ಪುಂಡಲೀಕ ಡಿಡಿಪಿಐ, ಬೆಳಗಾವಿ

    ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ವಿಶೇಷ ಪ್ಯಾಕೇಜ್ ೋಷಿಸಬೇಕು. ಶಾಲಾ ಆಡಳಿತ ಮಂಡಳಿಗಳಿಂದ ತುರ್ತಾಗಿ ವೇತನ ಕೊಡಿಸುವ ಕೆಲಸವಾಗಬೇಕು.
    | ಎಸ್.ಎಸ್. ಮಠದ ರಾಜ್ಯ ಘಟಕದ ಅಧ್ಯಕ್ಷ, ಮಾಧ್ಯಮಿಕ ಶಾಲೆ ಮತ್ತು ಕಾಲೇಜುಗಳ ನೌಕರರ ಸಂಘ, ಬೆಳಗಾವಿ

    | ಇಮಾಮಹುಸೇನ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts