More

    ಶಿಕ್ಷಕರ ಕ್ಷೇತ್ರದ ಚುನಾವಣೆ: ಪ್ರಮುಖ ಅಭ್ಯರ್ಥಿಗಳಿಂದ ಮತಬೇಟೆ

    ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಕಣ ನಾಮಪತ್ರ ಸಲ್ಲಿಕೆ ಅಂತಿಮಗೊಳ್ಳುವುದರೊಂದಿಗೆ ರಂಗೇರಿದ್ದು, ಇನ್ನೇನಿದ್ದರೂ ಮತಬೇಟೆ ಶುರುವಾಗಲಿದೆ.

    ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್​ನಿಂದ ಎ.ಪಿ.ರಂಗನಾಥ್, ಕಾಂಗ್ರೆಸ್​ನ ಪ್ರವೀಣ್ ಪೀಟರ್ ನಾಮಪತ್ರ ಸಲ್ಲಿಸಿದ್ದು, ಇಂದಿನಿಂದ (ಅ.9) ಮತದಾನದ ಹಕ್ಕು ಹೊಂದಿರುವ ಶಿಕ್ಷಕರ ಮತ ಬೇಟೆಗೆ ಹೊರಡಲಿದ್ದಾರೆ. ಮತದಾರರ ಪಟ್ಟಿ ಇಂದು (ಶುಕ್ರವಾರ) ಅಂತಿಮಗೊಳ್ಳುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಸುಮಾರು 2,500 ಮತದಾರರಿದ್ದು, ಇವರ ಪರಿಷ್ಕರಣೆ ಕಾರ್ಯ ಅಂತಿಮ ಹಂತದಲ್ಲಿದೆ. ಈ ಸಂಖ್ಯೆ ಹೆಚ್ಚು ಅಥವಾ ಕಡಿಮೆಯಾದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಾರೆ ಚುನಾವಣಾ ಶಾಖೆ ಸಿಬ್ಬಂದಿ. ಪಟ್ಟಿ ಕೈ ಸೇರುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತ ಬೇಟೆಗೆ ಹೊರಡಲಿದ್ದು, ಆ ನಂತರ ಚುನಾವಣಾ ಕಣ ರಂಗೇರಲಿದೆ.

    ಬಾಡೂಟ ಎಣ್ಣೆ ಪಾರ್ಟಿ: ಇಡೀ ಸಮಾಜಕ್ಕೆ ಮಾದರಿಯಾಗಬೇಕಾದ ಶಿಕ್ಷಕ ಸಮುದಾಯ ಬಾಡೂಟ ಮತ್ತು ಎಣ್ಣೆ ಪಾರ್ಟಿಗಳಿಗೆ ಮರುಳಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಶಿಕ್ಷಕರಿಗೆ ಗಿಫ್ಟ್​ಗಳನ್ನು ನೀಡುವ ಮೂಲಕ ಅವರನ್ನು ಸೆಳೆಯಲು ಅಭ್ಯರ್ಥಿಗಳು ಕಸರತ್ತು ಮಾಡಿದ್ದಾರೆ. ಒಬ್ಬ ಅಭ್ಯರ್ಥಿ ಬಾಡೂಟ ಎಣ್ಣೆ ಜತೆಗೆ ಹಾಟ್​ಬಾಕ್ಸ್ ಉಡುಗೊರೆಯಾಗಿ ನೀಡಿದ್ದರೆ, ಮತ್ತೊಬ್ಬ ಅಭ್ಯರ್ಥಿ ಬ್ಯಾಗ್ ನೀಡುವ ಮೂಲಕ ಶಿಕ್ಷಕರನ್ನು ಸೆಳೆಯುವ ಕೆಲಸ ಮಾಡಿದ್ದರು. ಇದೀಗ ಅಧಿಕೃತವಾಗಿ ಅಖಾಡಕ್ಕೆ ಇಳಿದ ಮೇಲೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮತ್ತಷ್ಟು ಪಾರ್ಟಿ ಮತ್ತು ಉಡುಗೊರೆ ನೀಡುವುದಂತೂ ಖಂಡಿತ.

    ಕೆಲವರಿಗೆ ಹಬ್ಬ: ಚುನಾವಣೆ ಬಂತೆಂದರೆ ಸಾಮಾನ್ಯವಾಗಿ ಅಭ್ಯರ್ಥಿಯನ್ನು ಓಲೈಕೆ ಮಾಡುವ ಗುಂಪು ಹೆಚ್ಚಿನ ಲಾಭ ಪಡೆಯುವುದು ಖಂಡಿತ. ಈಗಾಗಲೇ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ಪರವಾಗಿ ಕೆಲಸ ಮಾಡುವ ಶಿಕ್ಷಕರ ವೃಂದವನ್ನೇ ಕಟ್ಟಿಕೊಂಡಿದ್ದು, ಇವರ ಮೂಲಕ ರಾಜಕಾರಣದ ಸೋಂಕು ಅಂಟಿಸಿಕೊಳ್ಳದ ಶಿಕ್ಷಕರನ್ನು ಸೆಳೆಯುವ ಕೆಲಸ ಮಾಡಿದೆ. ಈ ತಂಡದ ಮೂಲಕ ಶಿಕ್ಷಕರಿಗೆ ವರ್ಗಾವಣೆ, ವೇತನ ಪರಿಷ್ಕರಣೆ, ಅವರ ಶಾಲೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಶ್ವಾಸನೆಗಳನ್ನು ನೀಡುವ ಕೆಲಸವೂ ನಡೆಯಲಿದೆ. ರಾಜಕೀಯ ತಮಗೇಕೆ ಎಂದು ಕಾದು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಶಿಕ್ಷಕರು ಕಷ್ಟಗಳ ಪರಿಹಾರಕ್ಕೆ ವಾಗ್ದಾನ ಪಡೆಯಲು ಸಿದ್ದರಾಗಿದ್ದಾರೆ.

    ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ: ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಂತೆ ಕಾಣುತ್ತದೆ. ಆದರೆ ಇಲ್ಲಿ ಪ್ರತಿ ಬಾರಿ ಜೆಡಿಎಸ್-ಬಿಜೆಪಿ ನಡುವೆ ಫೈಟ್ ನಡೆದದ್ದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಹೋರಾಟವೇ ಆದರೂ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಹೇಗೆ ಮತದಾರರನ್ನು ತಲುಪುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಒಂದು ವೇಳೆ ಎ.ಪಿ. ರಂಗನಾಥ್ ಗೆಲುವು ಸಾಧಿಸಿದರೆ, ಪುಟ್ಟಣ್ಣರ ಸಾಧನೆ ಹಿಂದೆ ಪಕ್ಷ ಇತ್ತು ಎನ್ನಬಹುದು, ಪುಟ್ಟಣ್ಣ ಗೆಲುವು ಸಾಧಿಸಿದರೆ ಅದು ವೈಯಕ್ತಿಕ ವರ್ಚಸ್ಸು ಎನ್ನುವುದು ಸಾಬೀತಾಗಲಿದೆ. ಪ್ರವೀಣ್ ಪೀಟರ್ ಗೆದ್ದರೆ ಕಾಂಗ್ರೆಸ್ ಪಾಲಿಗೆ ಅಚ್ಚರಿ ಫಲಿತಾಂಶವಾಗುವುದಂತೂ ಖಂಡಿತ.

    ಜಿಲ್ಲಾಡಳಿತ ಗಮನಹರಿಸಬೇಕಿದೆ: ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಚುನಾವಣೆ ಭ್ರಷ್ಟಾಚಾರದ ಕೂಪವಾಗುತ್ತಿರುವ ಹಾಗೂ ಸಭ್ಯತೆಯ ಎಲ್ಲೆ ಮೀರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ನಿಗಾ ಇಡಬೇಕಿದೆ. ಸಾಮಾನ್ಯವಾಗಿ ಬೇರೆ ಚುನಾವಣೆಗಳ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಗಾಗಿಯೇ ತಂಡಗಳನ್ನು ರಚಿಸಿ ಕಟ್ಟುನಿಟ್ಟಿನ ಚುನಾವಣೆ ನಡೆಸುವ ಅಧಿಕಾರಿಗಳು, ಕಡಿಮೆ ಮತದಾರರು ಇರುವ ಶಿಕ್ಷಕರ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಆದರೆ, ಶಿಕ್ಷಕರಿಗೆ ಉಡುಗೊರೆಗಳು ಮತ್ತು ಪಾರ್ಟಿಗಳು ಹೆಚ್ಚಾಗಿ ನಡೆಯುವುದರಿಂದ ಡಾಬಾಗಳು, ರೆಸ್ಟೋರೆಂಟ್​ಗಳಲ್ಲಿ ನಡೆಯುವ ಪಾರ್ಟಿಗಳ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ.

    ನಾಮಪತ್ರದಲ್ಲಿರುವ ಸೂಚಕರ ಹೆಸರೂ ನಕಲಿ

    ಚನ್ನಪಟ್ಟಣ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ರಂಗು ಪಡೆದು ಕೊಳ್ಳುತ್ತಿರುವಂತೆ ನಕಲಿ ಮತದಾರರ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಈ ನಡುವೆ ಅಭ್ಯರ್ಥಿಗಳ ಸೂಚಕರ ಹೆಸರಿನಲ್ಲೂ ನಕಲಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.

    ಅಭ್ಯರ್ಥಿಯಾಗುವವರು ಉಮೇದುವಾರಿಕೆ ಸಲ್ಲಿಸುವಾಗ ನಾಮಪತ್ರದಲ್ಲಿ ಸೂಚಕರನ್ನು ಗುರುತಿಸಿ, ಅವರ ಸಹಿ

    ನೀಡುವುದು ಕಡ್ಡಾಯ. ಪರಿಚಯಸ್ಥ ಮತದಾರರನ್ನು ಎಲ್ಲ ಅಭ್ಯರ್ಥಿಗಳು ಸೂಚಕರನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ, ತಾಲೂಕಿನ ಐವರು ಮತದಾರರಿಗೆ ಗೊತ್ತಿಲ್ಲದಂತೆ ಅಭ್ಯರ್ಥಿಯೊಬ್ಬರು ಅವರನ್ನು ಸೂಚಕರೆಂದು ಬಳಸಿಕೊಂಡಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಅಭ್ಯರ್ಥಿಗಳಿಗೆ ಸೂಚಕರಾಗುವವರ ಪರಿಶೀಲನೆ ನಡೆಸಲು ಚುನಾವಣಾಧಿಕಾರಿಗಳು, ಆಯಾ ತಹಸೀಲ್ದಾರ್​ಗಳಿಗೆ ಕಳುಹಿಸಿ ಕೊಡುತ್ತಾರೆ. ಈ ವೇಳೆ ಸೂಚಕರ ಬಗ್ಗೆ ವಿಚಾರಿಸಿದಾಗ ಇವರ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

    ಈ ಐವರನ್ನು ತಹಸೀಲ್ದಾರ್ ವಿಚಾರಿಸಿದಾಗ, ಈ ಸಹಿ ನಮ್ಮದಲ್ಲ. ಜತೆಗೆ, ನಾವು ಯಾರಿಗೂ ಸೂಚಕರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

    ಐವರು ಮತದಾರರ ಹೆಸರನ್ನು ಸೂಚಕರನ್ನಾಗಿ ಬಳಸಿಕೊಂಡು ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಯಾರೆಂಬುದು ತಿಳಿದುಬಂದಿಲ್ಲ. ಚುನಾವಣಾಧಿಕಾರಿಗಳಿಂದ ಬಂದ ಸೂಚಕರ ಪಟ್ಟಿಯನ್ನು ತಹಸೀಲ್ದಾರ್ ಎಲ್.ನಾಗೇಶ್ ಪರಿಶೀಲಿಸಿದ್ದು, ಅದರಲ್ಲಿ ಈ ಬೋಗಸ್ ನಡೆದಿರುವುದು ಕಂಡುಬಂದಿದೆ ಅಷ್ಟೇ. ಐವರು ಮತದಾರರು ಸೂಚಕರಾಗಿ ಯಾರಿಗೂ ಸಹಿ ಹಾಕಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದು, ಈ ಬಗ್ಗೆ ತಹಸೀಲ್ದಾರ್ ವರದಿ ರವಾನಿಸಿದ್ದಾರೆ.

    ಅಭ್ಯರ್ಥಿ ಯಾರು?: ಐವರು ಮತದಾರರ ಹೆಸರನ್ನು ಸೂಚಕರನ್ನಾಗಿ ಬಳಸಿಕೊಂಡು ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಯಾರೆಂಬುದು ತಿಳಿದುಬಂದಿಲ್ಲ. ಚುನಾವಣಾಧಿಕಾರಿಗಳಿಂದ ಬಂದ ಸೂಚಕರ ಪಟ್ಟಿಯನ್ನು ತಹಸೀಲ್ದಾರ್ ಎಲ್.ನಾಗೇಶ್ ಪರಿಶೀಲಿಸಿದ್ದು, ಅದರಲ್ಲಿ ಈ ಬೋಗಸ್ ನಡೆದಿರುವುದು ಕಂಡುಬಂದಿದೆ ಅಷ್ಟೇ. ಐವರು ಮತದಾರರು ಸೂಚಕರಾಗಿ ಯಾರಿಗೂ ಸಹಿ ಹಾಕಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದು, ಈ ಬಗ್ಗೆ ತಹಸೀಲ್ದಾರ್ ವರದಿ ರವಾನಿಸಿದ್ದಾರೆ.

    ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಸೂಚಕರು ಎನ್ನಲಾದ ಐವರ ಬಗ್ಗೆ ಪರಿಶೀಲನೆ ನಡೆಸುವಂತೆ ಪಟ್ಟಿ ಬಂದಿತ್ತು. ಸಹಿಗಳ ಹೊಂದಾಣಿಕೆ ಯಾಗದ ಹಿನ್ನೆಲೆಯಲ್ಲಿ ಐವರನ್ನು ಕಚೇರಿಗೆ ಕರೆಸಿಕೊಂಡು ಪರಿಶೀಲಿಸಲಾಯಿತು. ಈ ವೇಳೆ ಇವರ ಗಮನಕ್ಕೆ ತರದೆ ಸೂಚಕರನ್ನಾಗಿ ಮಾಡಿ ಕೊಂಡಿರುವುದು ದೃಢಪಟ್ಟಿದೆ. ಈ ಬಗ್ಗೆ ಐವರು ಲಿಖಿತ ಮಾಹಿತಿ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ವರದಿ ನೀಡಲಾಗಿದೆ.

    | ಎಲ್.ನಾಗೇಶ್, ತಹಸೀಲ್ದಾರ್, ಚನ್ನಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts