More

    21 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ: ಡಿಸಿ ಸೆಲ್ವಮಣಿ

    ಶಿವಮೊಗ್ಗ: ಭಾರತದ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನವನ್ನು ಸೆಪ್ಟಂಬರ್ 5ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಿದ್ದು ಅಂದು ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 21 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಿಸಿ ಡಾ. ಆರ್.ಸೆಲ್ವಮಣಿ ತಿಳಿಸಿದರು.
    ಡಿಸಿ ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಿಕ್ಷಕರ ದಿನ ಆಚರಿಸಲಿದ್ದು ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ಇದರೊಂದಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಗುವುದು ಎಂದರು.
    ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು. ಅಲ್ಲದೇ ಶಿಕ್ಷಣ ತಜ್ಞರನ್ನು ಆಹ್ವಾನಿಸಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
    ಪ್ರೌಢಶಾಲಾ ಶಿಕ್ಷಕರ ಸಂಘದ ರಾಜಾಧ್ಯಕ್ಷ ಬಿ.ಸಿದ್ಧಬಸಪ್ಪ ಮಾತನಾಡಿ, ಕರೊನಾ ಸೋಂಕಿನ ಕಾರಣದಿಂದ ಕಳೆದೆರಡು ವರ್ಷ ಶಿಕ್ಷಕರ ದಿನಾಚರಣೆ ಆಚರಿಸಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಅದ್ಧೂರಿಯಾಗಿ ಆಚರಿಸಬೇಕಿದೆ ಎಂದರು.
    ಡಿಡಿಪಿಐ ಕಚೇರಿ ಬಿಇಒ ಉಮಾಶಂಕರ್, ಲೋಕೇಶ್, ನಾಗರಾಜ್, ರಾಮೇಗೌಡ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರವಿ, ಧರ್ಮಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts