More

    ಶಿಕ್ಷಕರ ವರ್ಗಾವಣೆಯೂ ಡೌಟು

    ದೇವರಾಜ್ ಎಲ್.
    ಬೆಂಗಳೂರು: ಹೊಸ ವರ್ಗಾವಣೆ ನೀತಿಯನ್ವಯ ವರ್ಗಾವಣೆಯ ಕನಸು ಕಂಡಿದ್ದ ರಾಜ್ಯದ ಶಿಕ್ಷಕರಿಗೆ ಈ ವರ್ಷವೂ ನಿರಾಸೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಕರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಬಾರಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೇ ಬೇಡವೇ ಎಂಬ ಗೊಂದಲಕ್ಕೆ ಸಿಲುಕಿರುವುದು ಒಂದೆಡೆಯಾದರೆ ಹೊಸದಾಗಿ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣಾ ನಿಯಂತ್ರಣ) 2020ಕ್ಕೆ ನಿಯಮ ರೂಪಿಸುವ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ಅದು ಪೂರ್ಣಗೊಳ್ಳುವವರೆಗೆ ವರ್ಗಾವಣೆ ಆರಂಭವಾಗುವುದು ಬಹುತೇಕ ಅನುಮಾನ.

    ಪ್ರತಿ ವರ್ಷ ಮೇ ಅಂತ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಈ ವೇಳೆಗೆ ಎಲ್ಲ ರೀತಿಯ ವರ್ಗಾವಣೆ ಪ್ರಕ್ರಿಯೆ ಮುಗಿದಿರ ಬೇಕೆಂಬ ನಿಯಮ ಇದೆ. ಆದರೆ, ಈ ನಿಯಮ ಪಾಲಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇದೆ. ಹಲವು ಕಾರಣಗಳಿಂದಾಗಿ 2016ರಿಂದ 2019ರವರೆಗೆ 3 ವರ್ಷ ವರ್ಗಾ ವಣೆಯೇ ನಡೆದಿರಲಿಲ್ಲ. 2016ರಲ್ಲಿ ಆರಂಭವಾದ ವರ್ಗಾವಣೆ ಪ್ರಕ್ರಿಯೆ 2019ರ ಅಂತ್ಯದಲ್ಲಿ ಪೂರ್ಣಗೊಂಡಿತ್ತು.

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಎಸ್ಸೆಸ್ಸೆಲ್ಸಿ ಪರೀಕ್ಷೆ ಇನ್ನೂ ನಡೆದಿಲ್ಲ. ಪಿಯುಸಿಯ 1 ವಿಷಯ ಬಾಕಿ ಇದೆ. ಜೂನ್ 2 ಅಥವಾ 3ನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಒಂದು ವೇಳೆ ಕರೊನಾ ನಿಯಂತ್ರಣಕ್ಕೆ ಬಂದು ಲಾಕ್​ಡೌನ್ ಮುಕ್ತಾಯಗೊಂಡರೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದ ನಂತರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಕೈ ಹಾಕಲಿದೆ. ಸದ್ಯ ಪರಿಸ್ಥಿತಿಯಲ್ಲಿ ಇಲಾಖೆ ವರ್ಗಾವಣೆಗಿಂತ ಪ್ರಮುಖವಾಗಿ ಪರೀಕ್ಷೆಗಳನ್ನು ಮುಗಿಸಿ 2020-21ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭ ಮಾಡುವುದರತ್ತ ಗಮನ ಕೇಂದ್ರೀಕರಿಸಿದೆ. ಹೀಗಾಗಿ ವರ್ಗಾವಣೆ ವಿಳಂಬವಾಗಬಹುದು.

    ಆಕ್ಷೇಪಣೆ ಆಹ್ವಾನಿಸಬೇಕು: ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣಾ ನಿಯಂತ್ರಣ) ನಿಯಮ 2020 ವಿಧಾನಮಂಡಲದಲ್ಲಿ ಅಂಗೀಕೃತಗೊಂಡಿದೆ. ಆದರೆ, ಕರಡು ಪ್ರತಿಗೆ ನಿಯಮ ರೂಪಿಸುವ ಕೆಲಸ ಬಾಕಿ ಉಳಿದಿದೆ. ಕರೊನಾ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಈ ಕಾರ್ಯ ನಡೆಯುತ್ತಿಲ್ಲ. ಶಿಕ್ಷಣ ಇಲಾಖೆ ನಿಯಮಾವಳಿ ರಚಿಸಿದ ಬಳಿಕ ನಿಯಮ ಸರಿ-ತಪ್ಪುಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಶಿಕ್ಷಕರಿಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಕನಿಷ್ಠ 21 ದಿನ ಕಾಲಾವಕಾಶ ನೀಡಬೇಕು. ಆಕ್ಷೇಪಣೆ ಬಂದ ನಂತರ ಅವನ್ನೆಲ್ಲ ಒಟ್ಟುಗೂಡಿಸಿ ಬದಲಾವಣೆ ಅವಶ್ಯವಿದ್ದಲ್ಲಿ ಅದನ್ನು ಮುಗಿಸಬೇಕು. ಅಂತಿಮವಾಗಿ ನಿಯಮ ರೂಪಿಸುವುದಕ್ಕೆ ಕನಿಷ್ಠ ಒಂದೂವರೆ ತಿಂಗಳು ಬೇಕು. ಇದರಲ್ಲಿ ಕಾನೂನಾತ್ಮಕ ಅಂಶಗಳೆಲ್ಲ ಸರಿ ಇದೆಯೇ? ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಕೂಡ ಒಮ್ಮೆ ಪರಿಶೀಲಿಸಿ ಅನುಮತಿ ನೀಡಬೇಕು. ಆನಂತರ ಈ ಕಾಯ್ದೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮತಿ ಪಡೆದುಕೊಳ್ಳಬೇಕು. ಬಳಿಕವಷ್ಟೇ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಅಧಿಸೂಚನೆ ಪ್ರಕಟಿಸಲು ಸಾಧ್ಯ. ಈ ಎಲ್ಲ ಪ್ರಕ್ರಿಯೆ ಮುಕ್ತಾಯಕ್ಕೆ ಕನಿಷ್ಠ ಜೂನ್ ಅಂತ್ಯದವರೆಗೂ ಸಮಯದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಇದನ್ನೂ ಓದಿ:  ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

    ಈ ವರ್ಷ ಶೈಕ್ಷಣಿಕ ವರ್ಷ ಆರಂಭವಾಗುವುದೇ ತಡವಾಗುವುದರಿಂದ ವರ್ಗಾವಣೆ ಸಹ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ವರ್ಗಾವಣೆ ಇಲ್ಲವಾದರೆ ಶಿಕ್ಷಕರು ಕಷ್ಟಪಡಬೇಕಾಗುತ್ತದೆ.
    | ವಿ.ಎಂ.ನಾರಾಯಣ ಸ್ವಾಮಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

    ಹೊಸ ನಿಯಮದಲ್ಲೇನಿದೆ?

    • ಕಡ್ಡಾಯ ವರ್ಗಾವಣೆ ತೆಗೆದು, ಸಮಗ್ರ ಹೊಸ ಕಾಯ್ದೆ ಎಂದು ನಾಮಕರಣ ಮಾಡಲಾಗಿದೆ
    • ಪ್ರತಿ ತಾಲೂಕಿನಲ್ಲಿ ಶೇ.20ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳಿರುವ ತಾಲೂಕುಗಳಿಗಷ್ಟೇ ವರ್ಗಾವಣೆ ಮಾಡಬೇಕೆಂಬ ಮಾನದಂಡವನ್ನು ಕೈಬಿಡಲಾಗಿದೆ
    • ವರ್ಗಾವಣೆಯಲ್ಲಿ 50 ವರ್ಷ ಮೀರಿದ ಶಿಕ್ಷಕಿಯರು ಹಾಗೂ 55 ವರ್ಷ ಮೀರಿದ ಶಿಕ್ಷಕರಿಗೆ ವಿನಾಯಿತಿ
    • ವಿಶೇಷ ಪ್ರಕರಣಗಳನ್ನು ಶೇ.15ರ ವರ್ಗಾವಣೆ ಮಿತಿಯಿಂದ ಹೊರಗಿಡಲಾಗಿದೆ
    • ವರ್ಗಾವಣೆ ಗೊಂದಲ ನಿವಾರಣೆಗಾಗಿ ‘ಕುಂದುಕೊರತೆಯ ನಿವಾರಣಾ’ ಅಧಿಕಾರಿ ನೇಮಕಕ್ಕೆ ಪ್ರಸ್ತಾಪಿಸಿದೆ
    • ಪತಿ-ಪತ್ನಿ ಪ್ರಕರಣಗಳಲ್ಲಿ ಸಾಮಾನ್ಯ ವರ್ಗಾವಣೆ ನೀತಿಯಲ್ಲಿರುವಂತೆ ಕೇವಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಉಳಿದ ಎಲ್ಲ ಪ್ರಕರಣಗಳನ್ನು ಕೈ ಬಿಟ್ಟಿದೆ.

    ಹೊಸ ವರ್ಗಾವಣೆ ಕಾಯ್ದೆಗೆ ನಿಯಮಾವಳಿ ರೂಪಿಸುವ ಕೆಲಸ ಪ್ರಗತಿಯಲ್ಲಿದೆ. ಮೊದಲು ಸ್ಥಗಿತಗೊಂಡಿರುವ ಪರೀಕ್ಷೆ ನಡೆಸಲು ಆದ್ಯತೆ ನೀಡಲಾಗುವುದು. ಜನರ ಪರಿಸ್ಥಿತಿ ಸುಧಾರಿಸಿದ ಮೇಲೆ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ.
    | ಡಾ.ಕೆ.ಜಿ.ಜಗದೀಶ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

    ವರ್ಗಾವಣೆ ಕಾಯ್ದೆ ಕುರಿತಂತೆ ರೂಪಿಸಲಾಗುತ್ತಿರುವ ನಿಯಮಗಳನ್ನು ಅಂತಿಮ ಗೊಳಿಸಲಾಗುತ್ತಿದೆ. ಸಂಸದೀಯ ವ್ಯವಹಾರಗಳ ಇಲಾಖೆಯ ಅಭಿಪ್ರಾಯ ನಿರೀಕ್ಷಿಸಲಾಗಿದೆ. ಅದು ಬಂದ ಕೂಡಲೇ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.
    | ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    6 ಬಾರಿ ವರ್ಗಾವಣೆ ಸ್ಥಗಿತ: ಕಳೆದ ವರ್ಷ ವರ್ಗಾವಣೆಯನ್ನು ಸುಸೂತ್ರವಾಗಿ ನಡೆಸಲು ಇಲಾಖೆ ತೆಗೆದುಕೊಂಡ ಸಮಯ ಬರೋಬ್ಬರಿ 1 ವರ್ಷ 10 ತಿಂಗಳು. ಕೇವಲ 2-3 ತಿಂಗಳಲ್ಲಿ ಮುಗಿಯಬೇಕಾದ ವರ್ಗಾವಣೆ 6 ಬಾರಿ ಸ್ಥಗಿತಗೊಂಡಿತ್ತು. ಹೀಗಾಗಿ ವರ್ಗಾವಣೆ ಪ್ರಯೋಜನ ಬರೀ ಶೇ.15 ಶಿಕ್ಷಕರಿಗಷ್ಟೇ ಸಿಕ್ಕಿತ್ತು. 2017ರ ಡಿ. 29ರಂದು ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. 2019ರ ನ.2ರಂದು ಸಂಪೂರ್ಣವಾಗಿ ವರ್ಗಾವಣೆ ಮುಕ್ತಾಯವಾಯಿತು. ವರ್ಗಾವಣೆಗಾಗಿ 1,09,782 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 84,434 ಪ್ರಾಥಮಿಕ ಮತ್ತು 25,348 ಪ್ರೌಢ ಶಿಕ್ಷಕರು ಇದ್ದರು. ಇದೇ ಕ್ರಮವಾಗಿ 13,240 ಪ್ರಾಥಮಿಕ ಮತ್ತು 3,250 ಪ್ರೌಢ ಶಿಕ್ಷಕರು ವರ್ಗಾವಣೆ ಲಾಭ ಪಡೆದಿದ್ದರು.

    ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts