More

    ಶಿಕ್ಷಕರ ನೇಮಕಾತಿಗೆ ದೂರಶಿಕ್ಷಣ ಪದವೀಧರರ ಪರಿಗಣಿಸಿ: ಡಿ.ಆರ್.ಗಿರೀಶ್ ಮನವಿ

    ಶಿವಮೊಗ್ಗ: ಪ್ರಸಕ್ತ ಸಾಲಿನ ಪದವೀಧರ(6ರಿಂದ 8) ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಂಚೆ ತೆರಪಿನ ಅಥವಾ ಬಾಹ್ಯ ಮಾದರಿಯಲ್ಲಿ ವ್ಯಾಸಂಗ ಮಾಡಿ ವಿವಿಧ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಪಟ್ಟಿ (1:1)ಯಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್ ಮನವಿ ಮಾಡಿದರು.
    2013-14 ಮತ್ತು 2014-15ನೇ ಸಾಲಿನಲ್ಲಿ ರಾಜ್ಯದ ವಿವಿಧ ವಿವಿಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಬಾಹ್ಯ ಅಥವಾ ಅಂಚೆ ತೆರಪಿನ ಮಾದರಿಯಲ್ಲಿ ಪದವಿ ಪಡೆದಿದ್ದಾರೆ. 2022ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಆಯ್ಕೆಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅರ್ಹತೆ ಹೊಂದಿ 1:2ರ ಅನುಪಾತದಲ್ಲಿ ಪ್ರಕಟಿಸಿರುವ ತಾತ್ಕಲಿಕ ಆಯ್ಕೆ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ ನೆಪ ಹೇಳುತ್ತಾ ಅಂತಿಮ ಆಯ್ಕೆ ಪಟ್ಟಿಯಿಂದ ಅಭ್ಯರ್ಥಿಗಳನ್ನು ಸರ್ಕಾರ ಹೊರಗಿಟ್ಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ಮೂಲ ದಾಖಲಾತಿಗಳ ಪರಿಶೀಲನೆಯನ್ನು ಇದೀಗ ವಿಭಾಗವಾರು ಪ್ರಾರಂಭಿಸಿದ್ದು ಈ ಪ್ರಕ್ರಿಯೆಯಲ್ಲಿ ಘಟಿಕೋತ್ಸವ ಪ್ರಮಾಣಪತ್ರ ಹಾಜರುಪಡಿಸುವಂತೆ ಸಂಬಂಧಿಸಿದ ನೇಮಕಾತಿ ಅಧಿಕಾರಿಗಳು ಕೇಳಿದ್ದಾರೆ. ಆದರೆ ಹಲವು ವಿವಿಗಳು ಘಟಿಕೋತ್ಸವ ನಡೆಸದ ಕಾರಣ ಪ್ರಮಾಣಪತ್ರ ನೀಡುತ್ತಿಲ್ಲ. ಇದು ಅಭ್ಯರ್ಥಿಗಳ ಆಸೆಗೆ ತಣ್ಣೀರೆರಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ಮೈಸೂರಿನ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ನೇಮಕಾತಿ, ಮುಂಬಡ್ತಿ, ಉನ್ನತ ವ್ಯಾಸಂಗಗಳಿಗೆ ಅವಕಾಶ ಕಲ್ಪಿಸಲು ಆದೇಶಿಸಿದೆ. ಅದರಂತೆ ಇಲ್ಲಿಯೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಂತಿಮ ನೇಮಕಾತಿ ಪಟ್ಟಿಯಲ್ಲಿ (1:1) ಅವಕಾಶ ಕಲ್ಪಿಸಿಕೊಡಬೇಕು. ಈ ಹಿಂದಿನ ಸರ್ಕಾರ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ತೇರ್ಗಡೆ ಪ್ರಮಾಣಪತ್ರ(ಪಿಪಿಸಿ)ವನ್ನು ಪರಿಗಣಿಸಿ ನೇಮಕಾತಿ ಆದೇಶ ನೀಡಿದೆ. ಅದರಂತೆಯೇ ಸಂಬಂಧಿಸಿದ ವಿವಿಗಳ ಘಟಿಕೋತ್ಸವದ ನಂತರ ಘಟಿಕೋತ್ಸವದ ಪ್ರಮಾಣಪತ್ರ ನೀಡುವ ಷರತ್ತಿನೊಂದಿಗೆ ನೇಮಕಾತಿ ಆದೇಶ ನೀಡಬೇಕು. ಇಲ್ಲದಿದ್ದರೆ ಅಭ್ಯರ್ಥಿಗಳ ಪರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಯಾನಾಯ್ಕ, ಉಮಾಮಹೇಶ್ವರ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts