More

    ಶಿಕ್ಷಕರಿಗೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ ಎಂದ ನಗರ ಶಾಸಕ ಡಾ.ಶಿವರಾಜ ಪಾಟೀಲ್

    ರಾಯಚೂರು: ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತಾಗಿದ್ದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಕಾಲ ಕಾಲಕ್ಕೆ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಸಲಹೆ ನೀಡಿದರು.

    ಸ್ಥಳೀಯ ಹಾಷ್ಮೀಯಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಶಿಕ್ಷಕರು ಮತ್ತು ಅವರ ಕುಟುಂಬದವರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮಾನಸಿಕ ಮತ್ತು ದೈಹಿಕ ಒತ್ತಡದಲ್ಲಿ ಕೆಲಸ ಮಾಡುವುದರಿಂದ ತಿಳಿಯದೆ ಅನೇಕ ಕಾಯಿಲೆಗಳಿಗೆ ಒಳಗಾಗಿತ್ತಾರೆ. ಒಂದು ಮಗುವನ್ನು ಸಂಭಾಳಿಸುವುದು ಕಷ್ಟಕರವಾಗಿರುವ ಇಂದಿನ ದಿನಮಾನದಲ್ಲಿ ಶಿಕ್ಷಕರು ತರಗತಿಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂಭಾಳಿಸುವುದರ ಜತೆಗೆ ಅವರಿಗೆ ಅಗತ್ಯ ಶಿಕ್ಷಣ ನೀಡುವ ಕೆಲಸವನ್ನು ಮಾಡಬೇಕಾಗಿದೆ. ಇದಕ್ಕೆ ಹೆಚ್ಚಿನ ತಾಳ್ಮೆ, ಆತ್ಮಸ್ಥೈರ್ಯ ಅಗತ್ಯವಾಗಿದೆ.

    ಕಾರಣ ಶಿಕ್ಷಕರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡು ಮಾನಸಿಕ ಒತ್ತಡದಿಂದ ಹೊರಬಂದು ಮಕ್ಕಳಿಗೆ ಉತ್ತಮ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು.

    ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಮಾನಸಿಕ ಒತ್ತಡದಿಂದಾಗಿ ಹೆಚ್ಚಿನ ಕಾಯಿಲೆಗಳು ಬರುತ್ತಿದ್ದು, ಅದರಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುತ್ತಿರುವುದರಿಂದ ಅವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯಗತ್ಯವಾಗಿದೆ ಎಂದರು.

    ಶಿಬಿರದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ದೃಷ್ಟಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಹೃದಯ, ಕ್ಯಾನ್ಸರ್, ಕಿಡ್ನಿಯಲ್ಲಿ ಕಲ್ಲು, ಕಣ್ಣು, ಎಲುಬು, ನರರೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿ ಶಿಕ್ಷಕರಿಗೆ ಹಲವು ಸಲಹೆ, ಚಿಕಿತ್ಸೆಗಳನ್ನು ನೀಡಿದರು.

    ನಗರಸಭೆ ಸದಸ್ಯ ಈ.ಶಶಿರಾಜ, ಡಿಡಿಪಿಐ ವೃಷಭೇಂದ್ರಯ್ಯಸ್ವಾಮಿ, ಡಯಟ್ ಪ್ರಾಚಾರ್ಯ ರಾಮಚಂದ್ರಪ್ಪ ಶಿವಂಗಿ, ಮುಖಂಡರಾದ ಹರೀಶ ನಾಡಗೌಡ, ಶ್ರೀನಿವಾಸರೆಡ್ಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ತಾಲೂಕು ಅಧ್ಯಕ್ಷ ಮಲ್ಲೇಶ ನಾಯಕ, ಪದಾಧಿಕಾರಿಗಳಾದ ರಾಘವೇಂದ್ರ ಗಬ್ಬೂರು, ಗಂಗಪ್ಪ, ಪ್ರಸನ್ನಕುಮಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts