More

    ಒಳ್ಳೆಯ ಕೆಲಸ ಮಾಡುವುದನ್ನು ಮಕ್ಕಳಿಗೂ ಕಲಿಸಿ

    ಶಿವಮೊಗ್ಗ: ಭಗವಂತ ಕೊಟ್ಟ ಸಾಧನ ಶರೀರವನ್ನು ನಾಶವಾಗಲು ಬಿಡಬಾರದು. ಅದಕ್ಕಾಗಿ ನಮ್ಮ ಪ್ರಯತ್ನ ಇರಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.

    ಹೊಳೆಹೊನ್ನೂರಿನಲ್ಲಿ ತಮ್ಮ 28ನೇ ಚಾತುರ್ಮಾಸ್ಯದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
    ದೇಹ ಅನಿತ್ಯ ಎಂಬುದು ಸತ್ಯ. ಒಂದು ನಿಮಿತ್ತ ತಪ್ಪಿಸಿದರೂ ಇನ್ನೊಂದು ನಿಮಿತ್ತದಿಂದ ಹೋಗುತ್ತದೆ. ಆದರೆ ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು. ಶರೀರವನ್ನು ಉಳಿಸಿಕೊಳ್ಳಬೇಕು ಮತ್ತು ಧರ್ಮ ಕಾರ್ಯದಲ್ಲಿ ಅವಸರ ಇರಬೇಕು. ಈ ಉದ್ದೇಶದಿಂದ ವಸುದೇವ, ದೇವಕಿಯನ್ನು ಕಂಸನಿಂದ ರಕ್ಷಣೆ ಮಾಡಲು ಹಲವು ಬಗೆಯ ಪ್ರಯತ್ನ ಮಾಡಿದ ಎಂದರು.
    ಮಕ್ಕಳ ಲಾಲನೆ-ಪಾಲನೆ ಮಾಡುವುದು ಪ್ರತಿ ತಂದೆ, ತಾಯಿಯ ಕರ್ತವ್ಯ. ಮಕ್ಕಳು ಭವಿಷ್ಯದಲ್ಲಿ ಸಜ್ಜನರಾಗುವಂತೆ, ಸಾತ್ವಿಕರಾಗುವಂತಹ ವಾತಾವರಣ ನಿರ್ಮಿಸಬೇಕು. ಇದರರ್ಥ ತಂದೆ-ತಾಯಂದಿರು ಮೊದಲು ಸಜ್ಜನರಾಗಿ, ಧಾರ್ಮಿಕರಾಗಿ, ಪರೋಪಕಾರ, ಸಹಾಯ, ಧಾನ ಧರ್ಮ ಮತ್ತು ಸತ್ಕಾರ ಮಾಡಬೇಕು. ನಿಮ್ಮನ್ನು ನೋಡಿ ಮಕ್ಕಳೂ ಅದನ್ನು ಅನುಸರಿಸುತ್ತಾರೆ. ಹೀಗಾಗಿ ಸತ್ಕಾರ್ಯಗಳನ್ನು ಮಕ್ಕಳ ಎದುರಿಗೆ ಮಾಡಬೇಕು. ಅವರಿಂದಲೂ ಮಾಡಿಸಿ ಕಲಿಸಬೇಕು ಎಂದು ಹೇಳಿದರು.
    ಈ ರೀತಿಯಾಗಿ ಮಕ್ಕಳನ್ನು ರೂಪಿಸಿದರೆ ಅವರಲ್ಲಿ ಒಳ್ಳೆಯ ಚಿಂತನೆ ಸಾಧ್ಯವಾಗುತ್ತದೆ. ಸದಾಚಾರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಒಂದು ಜನ್ಮಕ್ಕಲ್ಲ ಮುಂದಿನ ಜನ್ಮಕ್ಕೂ ಅವರಿಗೆ ನೀವು ಬುತ್ತಿಯನ್ನು ಕಟ್ಟಿಕೊಟ್ಟಂತಾಗುತ್ತದೆ. ಆಗ ನೀವು ನಿಜವಾದ ತಂದೆ-ತಾಯಿ ಎನಿಸುತ್ತೀರಿ ಎಂದರು.
    ಕೊನೆಗಾಲದಲ್ಲಿ ದೇವರ ಚಿಂತನೆ ಮಾಡಿದರೆ ಸಾಕು ಎನ್ನಬೇಡಿ. ಇದು ಅಸಾಧ್ಯ. ಮೊದಲು ಒಳ್ಳೆಯ ಚಿಂತನೆ ಮಾಡಿದ್ದರೆ ಮಾತ್ರ ಕೊನೆಗಾಲದಲ್ಲಿ ಒಳ್ಳೆಯ ಚಿಂತನೆ ಬರಲು ಸಾಧ್ಯ. ಕೆಟ್ಟದ್ದನ್ನು ಕೇಳೋದು, ಕೆಟ್ಟದ್ದನ್ನು ಮಾಡೋದು ಮತ್ತು ಮನಸ್ಸಿನಲ್ಲಿ ಕೆಟ್ಟದ್ದನ್ನೇ ಸದಾ ಚಿಂತನೆ ಮಾಡುತ್ತಿದ್ದರೆ ನಂತರದಲ್ಲಿ ಒಳ್ಳೆಯ ಆಲೋಚನೆ ಬರಲು ಹೇಗೆ ಸಾಧ್ಯ? ಇದರಿಂದ ಉತ್ತಮ ಗತಿ ಸಾಧ್ಯವಿಲ್ಲ. ಜನ್ಮಾಂತರದಲ್ಲೂ ಭ್ರಷ್ಟರಾಗಿ, ನಷ್ಟರಾಗಿ, ದುಷ್ಟರಾಗುತ್ತೇವೆ ಎಂದು ಎಚ್ಚರಿಸಿದರು.
    ಹನುಮಂತಾಚಾರ್ಯ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಉಪಸ್ಥಿತರಿದ್ದರು.

    ಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ
    ಅಧಿಕ ಶ್ರಾವಣ ಮಾಸದ ಅಂಗವಾಗಿ ಶ್ರೀಪಾದರ ಪೂರ್ವಾಶ್ರಮದ ಮಾತೃಶ್ರೀ ರುಕ್ಮಿಣೀಬಾಯಿ ಗುತ್ತಲ ಅವರ ನೇತೃತ್ವದಲ್ಲಿ ಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ನೂರಾರು ಸುವಾಸಿನಿಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts