More

    ಡ್ಯಾಂ ಹಿಂಭಾಗದಲ್ಲೇ ತೀರದ ದಾಹ

    ಕಿಚಿಡಿ ಕೊಟ್ರೇಶ ಮರಿಯಮ್ಮನಹಳ್ಳಿ
    ಬೇಸಿಗೆ ಆರಂಭವಾಗಿದ್ದು ಹೋಬಳಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಅಭಾವ ಹೆಚ್ಚಾಗುತ್ತಿದ್ದರೂ ಪಪಂ ಆಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ನಾಲ್ಕೈದು ದಶಕಗಳಿಂದ ಪಟ್ಟಣದ ಕುಡಿವ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ. ನೀರು ಪೂರೈಕೆಗಾಗಿ ಕೋಟ್ಯಂತರ ಹಣ ಖರ್ಚಾದರೂ 30 ಸಾವಿರಕ್ಕೂ ಅಧಿಕ ಜನರು ವಾಸವಿರುವ ಪಟ್ಟಣದ 18 ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. 2016-17 ರಲ್ಲಿ ನಗರೋತ್ಥಾನ ಕುಡಿವ ನೀರಿನ ಯೋಜನೆಯಡಿ ಅಂದಾಜು 1.72 ಕೋಟಿ ರೂ.ವೆಚ್ಚದಲ್ಲಿ ಕೊಳವೆಬಾವಿ, ಪೈಪ್‌ಲೈನ್ ಕಾಮಗಾರಿ, 2 ಲಕ್ಷ ಲೀಟರ್ ಸಾಮರ್ಥ್ಯದ 4 ನೀರಿನ ಸಂಗ್ರಹ ತೊಟ್ಟಿಗಳು ನಿರ್ಮಾಣಗೊಂಡಿವೆ. ಆದರೆ, ಈವರೆಗೂ ತೊಟ್ಟಿಗಳಿಗೆ ನೀರು ತುಂಬಿಸಿಲ್ಲ. ಈಗ ತೊಟ್ಟಿಗಳು ನಿರುಪಯುಕ್ತವಾಗಿವೆ. ಪಟ್ಟಣದಲ್ಲಿನ 6 ಶುದ್ಧ ಕುಡಿವ ನೀರಿನ ಘಟಕಗಳು ಕೂಡ ನಿರುಪಯುಕ್ತವಾಗಿದ್ದು, ಜನರು ಸಮೀಪದ ಹಳ್ಳಿಗಳಿಂದ ನೀರು ತರುವ ಸ್ಥಿತಿ ಎದುರಾಗಿದೆ.

    ಡ್ಯಾಂ ಹಿಂಭಾಗದಲ್ಲೇ ತೀರದ ದಾಹ
    ಡಣಾಪುರ ಗ್ರಾಪಂ ವ್ಯಾಪ್ತಿಯಲ್ಲಿನ ಬಹು ಗ್ರಾಮ ಶುದ್ಧ ಕುಡಿಯುವ ನೀರಿನ ಘಟಕ

    ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಹೊಸಪೇಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ತುಂಗಭದ್ರಾ ಜಲಾಶಯದಿಂದ ಮರಿಯಮ್ಮನಹಳ್ಳಿಗೆ ಪ್ರತ್ಯೇಕ ಜಾಕ್‌ವೆಲ್ ನಿರ್ಮಿಸಲು 72 ಕೋಟಿ ರೂ. ಮಂಜುರು ಮಾಡಿ ಕಾಮಗಾರಿ ನಡೆಸುವುದಾಗಿ ಹೇಳಿದ್ದರು. ಆದರೆ, ಕಾಮಗಾರಿ ಇನ್ನೂ ಶುರುವಾಗಿಲ್ಲ. ಯಾವಾಗ ಶುರುವಾಗುತ್ತದೆ ಎನ್ನುವ ತವಕದಲ್ಲಿದ್ದಾರೆ ಇಲ್ಲಿನ ಜನ.

    114 ಡಣಾಪುರ ಗ್ರಾಪಂನಲ್ಲೂ ತೊಂದರೆ
    ಡಣಾಪುರ ಗ್ರಾಪಂ ವ್ಯಾಪ್ತಿಯ ಹನುಮನಹಳ್ಳಿ, ವ್ಯಾಸನಕೆರೆ, ವೆಂಕಟಾಪುರ, ಹಂಪಿನಕಟ್ಟೆ, ಅಯ್ಯನಹಳ್ಳಿ ಹಾಗೂ ಗಾಳೆಮ್ಮನಗುಡಿ ಗ್ರಾಮಗಳು ಸೇರಿ ಒಟ್ಟಾರೆ 23 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ತುಂಗಾಭದ್ರಾ ನದಿ ಹಿನ್ನೀರಿಗೆ ಈ ಗ್ರಾಪಂ ಹೊಂದಿಕೊಂಡಿದೆ. ಕೂಗಳತೆ ದೂರದಲ್ಲಿ ನದಿ ನೀರಿದ್ದರೂ ಸಮರ್ಪಕ ಕುಡಿವ ನೀರು ಸಿಗುತ್ತಿಲ್ಲ. 2010ರಲ್ಲಿ ಹನುಮನಹಳ್ಳಿ ಗ್ರಾಮದಲ್ಲಿ ಬಹು ಗ್ರಾಮ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣವಾಗಿದ್ದು, ನಿರ್ವಹಣೆ ಕೊರತೆಯಿಂದ ಕುಡಿವ ನೀರು ಸರಬರಾಜು ಯಾವ ಹಳ್ಳಿಗಳಿಗೂ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರನ್ನೇ ಜನ ಆಶ್ರಯಿಸಿದ್ದಾರೆ.

    ಡ್ಯಾಂ ಹಿಂಭಾಗದಲ್ಲೇ ತೀರದ ದಾಹ
    ಮರಿಯಮ್ಮನಹಳ್ಳಿಯ ಪಪಂ ಮುಂದಿನ ನೀರಿನ ತೊಟ್ಟಿ ಬಳಿ ಜನರು ನೀರು ತುಂಬುತ್ತಿರುವುದು.

    ಜಾನುವಾರುಗಳಿಗಿಲ್ಲ ಸಮಸ್ಯೆ
    ಡಣನಾಯಕನಕೆರೆ ಗ್ರಾಪಂ ವ್ಯಾಪ್ತಿಯ ಗೊಲ್ಲರಹಳ್ಳಿ, ಇಂದಿರಗಾಂಧಿನಗರ, ನಂದಿಬಂಡಿ, ದೇವಲಾಪುರ ಗ್ರಾಮ ಸೇರಿ ಒಟ್ಟು 11 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಜನರ ದಾಹ ತೀರಿಸಲು ಹನುಮನಹಳ್ಳಿ ಗ್ರಾಮದಲ್ಲಿ ಬಹು ಗ್ರಾಮ ಶುದ್ಧ ಕುಡಿವ ನೀರಿನ ಘಟಕದಿಂದ 10 ವರ್ಷದ ಹಿಂದೆ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಈವರೆಗೆ ನೀರು ಸರಬರಾಜಾಗಿಲ್ಲ. ಪಾವಗಾಡ ಗ್ರಾಮೀಣ ಕುಡಿವ ನೀರಿನ ಯೋಜನೆಯು ಈ ಗ್ರಾಪಂಗೆ ಅನ್ವಯಿಸದಿರುವುದು ನಿಜಕ್ಕೂ ವಿಪರ್ಯಾಸ. ಡಣನಾಯಕನಕೆರೆ ಗ್ರಾಪಂ ವ್ಯಾಪ್ತಿಯಲ್ಲಿ 4 ಕೆರೆಗಳಿವೆ. ಜಾನುವಾರುಗಳಿಗೆ ಕುಡಿವ ನೀರಿನ ಕೊರತೆ ಇಲ್ಲ. ಆದರೆ, ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.

    ಯೋಜನೆಗೆ ಚಿಲಕನಹಟ್ಟಿ ಗ್ರಾಪಂ ಆಯ್ಕೆ
    ಚಿಲಕನಹಟ್ಟಿ ಗ್ರಾಪಂ ವ್ಯಾಪ್ತಿಯ ತಿಮ್ಮಲಾಪುರ, ಪೋತಲಕಟ್ಟೆ, ತಾಳೆಬಸಾಪುರ ತಾಂಡ, ಹಾರುವನಹಳ್ಳಿ ಗ್ರಾಮ ಸೇರಿ 15 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಇಲ್ಲಿನ ಜನರಿಗೆ ಕೊಳವೆಬಾವಿ ನೀರೇ ಗತಿ. ಮಳೆಗಾಲದಲ್ಲಿ ಹೆಚ್ಚು ಮಳೆಯಾದರೆ ಮಾತ್ರ ಈ ಭಾಗದ ಜನರಿಗೆ ವರ್ಷಪೂರ್ತಿ ಕುಡಿವ ನೀರು ಸಿಗುತ್ತದೆ. ಇಲ್ಲವಾದರೆ ಅಂತರ್ಜಲ ಕೊರತೆಯಿಂದ ನೀರಿಗೆ ಹಾಹಾಕಾರ ಶುರುವಾಗುತ್ತೆ. ಇಲ್ಲಿ4-5 ಕುಡಿಯುವ ನೀರಿನ ತೊಟ್ಟಿಗಳು ನಿರುಪಯುಕ್ತವಾಗಿವೆ. ಸ್ಥಳೀಯ ಗ್ರಾಪಂ ಆಡಳಿತ ನಿರ್ವಹಣೆಗೆ ಮುಂದಾಗದಿರುವುದು ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ಕಾಡಬಹುದು. ಸದ್ಯ ಪಾವಗಾಡ ಗ್ರಾಮೀಣ ಕುಡಿವ ನೀರಿನ ಯೋಜನೆಯಡಿ ಈ ಗ್ರಾಪಂ ಆಯ್ಕೆಯಾಗಿದೆ. ಕಾಮಗಾರಿ ಮುಗಿದ ಬಳಿಕ ತುಂಗಭದ್ರಾ ಜಲಾಶಯದ ನೀರು ಜನರಿಗೆ ಸಿಗುವುದು ಖಚಿತವಾಗಿದೆ.

    ಡ್ಯಾಂ ಹಿಂಭಾಗದಲ್ಲೇ ತೀರದ ದಾಹ
    ಮರಿಯಮ್ಮನಹಳ್ಳಿಯ 11ನೇ ವಾರ್ಡ್‌ನಲ್ಲಿನ ಶುದ್ಧ ಕುಡಿವ ನೀರಿನ ಘಟಕದಲ್ಲಿ ರಾತ್ರಿಯಾದರು ಕಾದು ನೀರು ಒಯ್ಯುತ್ತಿರುವ ಜನರು.

    ಕಾರ್ಯನಿರ್ವಹಿಸದ ಘಟಕಗಳು
    ಜಿ.ನಾಗಲಾಪುರ ಗ್ರಾಪಂ ವ್ಯಾಪ್ತಿಯ ಜಿ.ನಾಗಲಾಪುರ ತಾಂಡಾ, ಗುಂಡಾ, ಗುಂಡಾ ತಾಂಡಾ, ಬ್ಯಾಲಕುಂದಿ, ಗರಗ ಗ್ರಾಮ ಸೇರಿ 16 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಹಳ್ಳಿಗಳಲ್ಲಿ ಕುಡಿನ ನೀರಿನ ಸಮಸ್ಯೆ ಅಧಿಕಾಗಿದೆ. ಸುತ್ತಲೂ ಗುಡ್ಡಗಾಡು ಇದ್ದು, ಜನ ಬೊರ್‌ವೆಲ್ ನೀರನ್ನೇ ಬಳಸುತ್ತಿದ್ದಾರೆ. 10 ವರ್ಷದಲ್ಲಿ ಗ್ರಾಮಕ್ಕೆ 3-4ರಂತೆ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಈ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಈ ಭಾಗದ ಜನರಿಗೆ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕುಡಿವ ನೀರಿನ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಪಾವಗಾಡ ಗ್ರಾಮೀಣ ಕುಡಿವ ನೀರಿನ ಯೋಜನೆ ಅಡಿಯಲ್ಲಿ ಈ ಗ್ರಾಪಂ ಆಯ್ಕೆಯಾಗಿದ್ದು, ಕಾಮಗಾರಿ ಮುಗಿದ ಬಳಿಕ ತುಂಗಭದ್ರಾ ಜಲಾಶಯದ ನೀರು ಗ್ರಾಪಂ ಜನರಿಗೆ ಸಿಗುತ್ತದೆ.

    ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ವರ್ಷಪೂರ್ತಿ ಕುಡಿವ ನೀರಿನ ಸಮಸ್ಯೆ ಇರುತ್ತದೆ. ಬೇಸಿಗೆಯಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚು. ಈ ಹಿಂದೆ ಪಟ್ಟಣದ ಜನ ಕುಡಿವ ನೀರಿಗಾಗಿ ಸಮೀಪದ ಹಳ್ಳಿಗಳಿಗೆ ತೆರಳಬೇಕಿತ್ತು. ಸ್ಥಳೀಯಾಡಳಿತ ಕುಡಿವ ನೀರಿನ ವಿಚಾರದಲ್ಲಿ ಹೀಗೆ ಮುಂದುವರಿದರೆ ಹಿಂದಿನ ಸ್ಥಿತಿ ಎದುರಾಗುತ್ತದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.
    ಡಾ.ಈ.ಯರ‌್ರಿಸ್ವಾಮಿ, 7ನೇ ವಾರ್ಡ್ ನಿವಾಸಿ, ಎಂಎಂ ಹಳ್ಳಿ


    ಡಣನಾಯಕನಕೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಪಾವಗಾಡ ಗ್ರಾಮೀಣ ಕುಡಿವ ನೀರಿನ ಯೋಜನೆಯಲ್ಲಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಮರಿಯಮ್ಮನಹಳ್ಳಿ ಹೋಬಳಿಯ ಮೂರು ಗ್ರಾಪಂಗಳಿಗೆ ತುಂಗಭದ್ರಾ ನೀರಿನ ಯೋಜನೆಯಲ್ಲಿ ನೀರು ಕೊಡಲಾಗುತ್ತಿದ್ದು, ಡಣನಾಯಕನಕೆರೆ ಗ್ರಾಮ ಪಂಚಾಯಿತಿಯನ್ನು ಕೈ ಬಿಡಲಾಗಿದೆ. ಇದು ಸರ್ಕಾರದ ತಾರತಮ್ಯ ಧೋರಣೆಯಾಗಿದೆ.
    ಗುಂಡಾ ಸ್ವಾಮಿ, ಡಣನಾಯಕನಕೆರೆ ಗ್ರಾಪಂ ಸದಸ್ಯ

    ತುಂಗಭದ್ರಾ ಜಲಾಶಯದಿಂದ ಕುಡಿವ ನೀರಿಗಾಗಿ ಈಗಾಗಲೇ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಸರ್ಕಾರಿಂದ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
    ಪಿ.ಫಕೃದ್ಧೀನ್ ಸಾಬ್, ಮರಿಯಮ್ಮನಹಳ್ಳಿ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts