ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಒಂದು ತಿಂಗಳಿಂದ ಕರೊನಾ ಆತಂಕಕ್ಕೆ ಸಿಲುಕಿರುವ ಜಿಲ್ಲೆಯು ಸೋಂಕು ಹರಡದಿರುವಂತೆ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಆದರೆ ಹೊಟ್ಟೆಪಾಡಿಗೆ ಬೆಂಗಳೂರು ಸೇರಿ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳಿಗೆ ತೆರಳಿದ್ದ ಜನತೆ ತಮ್ಮೂರಿಗೆ ಬರತೊಡಗಿದ್ದರಿಂದ ಅಸಲಿ ಆಟ ಈಗ ಶುರುವಾದಂತಾಗಿದೆ.
ದೇಶಕ್ಕೆ ಅಂಟಿರುವ ಈ ಮಹಾಮಾರಿ ಸದ್ಯ ಜಿಲ್ಲೆಗೆ ಕಾಲಿಟ್ಟಿಲ್ಲ, ಕಾಲಿಡುವುದೂ ಬೇಡ. ಯಾದಗಿರಿ ತಾಲೂಕಿನಲ್ಲಿ 27, ಶಹಾಪುರ 19 ಹಾಗೂ ಸುರಪುರ ತಾಲೂಕಿನಲ್ಲಿ 21 ಜನ 27ರವರೆಗೆ ಹೋಮ್ ಕ್ವಾರಂಟೈನ್ನಲ್ಲಿ ಇದ್ದು, ಯಾರಲ್ಲೂ ಸೋಂಕು ಕಾಣಿಸದಿರುವುದು ನೆಮ್ಮದಿ ವಿಚಾರ.
ಆದರೆ ಮೂರು ದಿನಗಳಿಂದ ಗುಳೆ ಹೋದ ಜನ ಪ್ರಾಣ ಉಳಿಸಿಕೊಂಡರೆ ಸಾಕಪ್ಪ ಎಂದು ತಮ್ಮ ತಮ್ಮ ಊರುಗಳಿಗೆ ಗಂಟುಮೂಟೆ ಕಟ್ಟಿಕೊಂಡು ವಾಪಸ್ ಆಗುತ್ತಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ವಾಸವಾಗಿದ್ದ (ತಾತ್ಕಾಲಿಕ) ಜನತೆಗೆ ಕೆಲಸವಿಲ್ಲದೆ ಒಪ್ಪತ್ತಿನ ಊಟವೂ ಸಿಗದ್ದರಿಂದ ಹಳ್ಳಿ ಸೇರುತ್ತಿದ್ದಾರೆ.
ಗುಂಪು ಗುಂಪಾಗಿ ಹಳ್ಳಿಗಳತ್ತ ಧಾವಿಸುತ್ತಿರುವ ಇವರಲ್ಲಿ ಎಷ್ಟು ಜನ ಆರೋಗ್ಯವಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ನೀವು ಊರೊಳಗೆ ಕಾಲಿಡಬೇಡಿ. 14 ದಿನ ನಂತರವೇ ಬನ್ನಿ ಎಂದು ಗ್ರಾಮಸ್ಥರೇ ಗುಳೆ ಜನರನ್ನು ತಾಕೀತು ಮಾಡತೊಡಗಿದ್ದಾರೆ. ಜಿಲ್ಲೆಯ 6 ತಾಲೂಕಿನ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಜನ ಮಹಾನಗರ ಬಿಟ್ಟು ಬಂದು ಸೇರಿಕೊಂಡಿದ್ದಾರೆ.
ಇವರಲ್ಲಿ ಕೆಲವರು ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದು, ಹಗಲು-ರಾತ್ರಿ ನಿದ್ದೆಗೆಟ್ಟಿದ್ದರಿಂದ ಆರೋಗ್ಯದಲ್ಲಿ ಏರು-ಪೇರು ಆಗುತ್ತಿದೆ. ಯಾರಾದರೂ ಸ್ವಲ್ಪ ಕೆಮ್ಮಿದರೂ ಹೆದರಿ ಹೌಹಾರುವಂಥ ಸ್ಥಿತಿ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ ಮುಂದಿನ ಎರಡು ವಾರ ವಾರ್ಪುಟಿಂಗ್ನಲ್ಲಿ ಕೆಲಸ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಿಲ್ಲೆಯ ಎಲ್ಲ ಸಕರ್ಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಇಂದಿನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮೆಡಿಸಿನ್ಗಳನ್ನು ದಾಸ್ತಾನು ಮಾಡಿಕೊಳ್ಳಬೇಕಿದೆ. ಒಟ್ಟಾರೆ, ಗುಳೆ ಜನರಲ್ಲಿ ಸೋಂಕು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವುದೇ ಸದ್ಯದ ಚಾಲೆಂಜ್.