More

    ಸರ್ಕಾರಕ್ಕೆ ತೆರಿಗೆ ಟೋಪಿ! ಖಜಾನೆಗೆ 100 ಕೋಟಿ ರೂಪಾಯಿ ನಷ್ಟ

    ರಾಜ್ಯದಲ್ಲಿ ಓಡಾಡುತ್ತಿರುವ 15 ಸಾವಿರಕ್ಕೂ ಹೆಚ್ಚಿನ ಮ್ಯಾಕ್ಸಿ ಕ್ಯಾಬ್ ವಾಹನಗಳು ನಿಯಮ ಉಲ್ಲಂಘಿಸಿ, ಸರ್ಕಾರದ ಖಜಾನೆಗೆ ವಾರ್ಷಿಕ ಕನಿಷ್ಠ 100 ಕೋಟಿ ರೂ. ವಂಚನೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಗರಂ ಆಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿ ಆರ್​ಟಿಒದಲ್ಲಿ ವಿಶೇಷ ತಂಡ ರಚಿಸಿ ಅನಧಿಕೃತ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡುವಂತೆ ಸಾರಿಗೆ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

    12+1 ಸೀಟಿನ ಮ್ಯಾಕ್ಸಿ ಕ್ಯಾಬ್​ಗಳನ್ನು ಅನುಮತಿ ಇಲ್ಲದೆ 20+1ರಿಂದ 25+1 ಸೀಟುಗಳವರೆಗೆ (ಹೆಚ್ಚುವರಿ 8 ಸೀಟು) ಮಾರ್ಪಾಡುಗೊಳಿಸಲಾಗುತ್ತಿದೆ. ಕರ್ನಾಟಕ ಮೋಟಾರು ವಾಹನ ಕಾಯ್ದೆ ಪ್ರಕಾರ 12+1 ಕ್ಕಿಂತ ಹೆಚ್ಚು ಸೀಟುಗಳಿದ್ದರೆ 3 ತಿಂಗಳಿಗೊಮ್ಮೆ 1 ಸೀಟಿಗೆ ಲಕ್ಸುರಿ ವಾಹನ ತೆರಿಗೆ 3500 ರೂ. ಪಾವತಿಸಬೇಕು ಅಥವಾ ಕಾಂಟ್ರಾಕ್ಟ್ ಕ್ಯಾರಿಯೇಜ್​ಗೆ 2500 ರೂ. ಪಾವತಿಸಬೇಕು. ವಾಹನ ನೋಂದಣಿ ವೇಳೆ 12+1 ಸೀಟಿನ ವಾಹನಕ್ಕೆ ಮಾತ್ರ ತೆರಿಗೆ ಪಾವತಿಸಿ, ನಂತರ ಕಾನೂನು ಬಾಹಿರವಾಗಿ ಮಾರ್ಪಾಡುಗೊಳಿಸಿ ಹೆಚ್ಚುವರಿ ಸೀಟುಗಳನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಇದರಿಂದ ತೆರಿಗೆ ವಂಚನೆ ಜತೆಗೆ ಪ್ರಯಾಣಿಕರ ಜೀವಕ್ಕೂ ಅಪಾಯ ಎಂದು ಆರ್​ಟಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಕ್ರಮಗೊಳಿಸಲಿ: ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆ ತೆರಳುವ ವೇಳೆ ಸೀಟುಗಳನ್ನು ತೆರವುಗೊಳಿಸಿ ಹೆಚ್ಚುವರಿ ಸೀಟುಗಳನ್ನು ಹಾಕಲಾಗುತ್ತದೆ. ಕಾನೂನು ಬಾಹಿರವಾಗಿ ಹೆಚ್ಚುವರಿ ಸೀಟುಗಳಾಗಿ (20+1) ಪರಿವರ್ತನೆಗೊಂಡಿರುವ ವಾಹನಗಳನ್ನು ಜಪ್ತಿ ಮಾಡುವ ಬದಲು ಸಕ್ರಮಗೊಳಿಸಲು ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವಿದೆ. ಸಕ್ರಮಗೊಳಿಸಿದರೆ ವಾಹನ ಮಾಲೀಕರಿಗೂ ಅನ್ಯಾಯವಾಗುವುದಿಲ್ಲ. ಸರ್ಕಾರಕ್ಕೂ ತೆರಿಗೆ ಪಾವತಿಯಾಗುತ್ತದೆ ಎಂದು ಕರ್ನಾಟಕ ಮ್ಯಾಕ್ಸಿ ಕ್ಯಾಬ್ ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಭೈರವ ಸಿದ್ದರಾಮು ಹೇಳಿದ್ದಾರೆ.

    ಕಾರ್ಯಾಚರಣೆಗೆ ವಿಶೇಷ ತಂಡ: ಇತ್ತೀಚೆಗೆ ನಡೆದ ಬಜೆಟ್​ಪೂರ್ವ ಸಭೆಯಲ್ಲಿ ಅನಧಿಕೃತ ವಾಹನಗಳ ಓಡಾಟ ವಿಚಾರ ಸಿಎಂ ಗಮನಕ್ಕೆ ಬಂದಿದೆ. ಸಿಎಂ ಸೂಚನೆ ಮೇರೆಗೆ ಆರ್​ಟಿಒ ಹಾಗೂ ಎಆರ್​ಟಿಒ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡುವ ಮೂಲಕ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಉಪ ಸಾರಿಗೆ ಆಯುಕ್ತರು ಹಾಗೂ ಜಂಟಿ ಸಾರಿಗೆ ಆಯುಕ್ತರು ಖುದ್ದಾಗಿ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಬೇಕು. ಮುಂದಿನ 2 ವಾರಗಳವರೆಗೆ ಪ್ರತಿನಿತ್ಯ ಬೆಳಗ್ಗೆ ಕಾರ್ಯಾಚರಣೆ ಕುರಿತ ಮಾಹಿತಿಯನ್ನು ಗ್ರೂಪ್​ನಲ್ಲಿ ಅಪ್​ಡೇಟ್ ಮಾಡಬೇಕು. ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ.

    ಆಯಾ ಪ್ರದೇಶಕ್ಕೆ ಪರ್ವಿುಟ್ ಕೊಡಿ: ನೂತನ ಮೋಟಾರು ವಾಹನ ಕಾಯ್ದೆ 2019ರ ಪ್ರಕಾರ, ಆಯಾ ಪ್ರದೇಶಕ್ಕೆ ತಕ್ಕಂತೆ ಅನುಮತಿ ಕೊಡಲು ಅವಕಾಶವಿದೆ. ಈ ನಿಯಮ ಜಾರಿಗೆ ತಂದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದ್ದರಿಂದ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಾರಿಗೆ ಸಂಘಟನೆಗಳ ಸದಸ್ಯರು, ಆರ್​ಟಿಒ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಹೊಸ ಪದ್ಧತಿ ಜಾರಿಗೊಳಿಸಬೇಕು ಎಂದು ಕೆಲ ಸಾರಿಗೆ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

    ತೆರಿಗೆ ವಂಚನೆ ಹೇಗೆ?

    ಮೋಟಾರು ವಾಹನ ಕಾಯ್ದೆಯ 4 (ಎ) ಪ್ರಕಾರ ಫ್ಲೋರ್ ಏರಿಯಾ 6 ಚದರ ಮೀಟರ್​ಗಿಂತ ಹೆಚ್ಚಿರದಿದ್ದರೆ ಪ್ರತಿ ಸೀಟಿಗೆ 750 ರೂ. ತೆರಿಗೆ ಕಟ್ಟಬೇಕು. ಚಾಲಕ ಮತ್ತು ಕ್ಲೀನರ್ ಹೊರತುಪಡಿಸಿ 12 ಸೀಟಿಗಿಂತ ಹೆಚ್ಚಿರುವ (ಕಾಂಟ್ರಾಕ್ಟ್ ಕ್ಯಾರಿಯೇಜ್) ವಾಹನವಿದ್ದರೆ 5 (ಎ) ಪ್ರಕಾರ 2500 ರೂ. ಪಾವತಿಸಬೇಕು. 12 ಸೀಟಿಗಿಂತ ಹೆಚ್ಚಿರುವ (ಲಕ್ಸುರಿ) ಬಸ್​ಗಳಾದರೆ 3500 ರೂ. ಪಾವತಿಸಬೇಕು. 12ಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ಯುವ ಸ್ಲೀಪರ್ ಕೋಚ್ ವಾಹನವಾದರೆ 3 ಸಾವಿರ ರೂ. ಪಾವತಿಸಬೇಕು. ಮ್ಯಾಕ್ಸಿ ಕ್ಯಾಬ್​ಗಳು 4 (ಎ) ಪ್ರಕಾರ 750 ರೂ. ತೆರಿಗೆ ಪಾವತಿಸಿ ನಂತರ ಹೆಚ್ಚುವರಿ ಸೀಟುಗಳಾಗಿ ವಾಹನವನ್ನು ಮಾರ್ಪಾಡುಗೊಳಿಸಿಕೊಳ್ಳಲಾಗುತ್ತದೆ. 12ಕ್ಕಿಂತ ಹೆಚ್ಚು ಸೀಟುಗಳಾಗಿ ಪರಿವರ್ತನೆಗೊಂಡರೆ ಕಾಂಟ್ರಾಕ್ಟ್ ಕ್ಯಾರಿಯೇಜ್ ವಾಹನವಾದರೆ ಪ್ರತಿ ಸೀಟಿಗೆ 1850 ರೂ.ನಂತೆ 3 ತಿಂಗಳಿಗೆ 20 ಸೀಟಿಗೆ 37 ಸಾವಿರ ರೂ. ಹೆಚ್ಚುವರಿ ಪಾವತಿಸಬೇಕು. ಅಂದರೆ ಮಾರ್ಪಾಡುಗೊಂಡ 1 ಮ್ಯಾಕ್ಸಿ ಕ್ಯಾಬ್​ನಿಂದ ವಾರ್ಷಿಕ 1.48 ಲಕ್ಷ ರೂ. ತೆರಿಗೆ ಖೋತಾ ಆಗುತ್ತಿದೆ. ಲಕ್ಸುರಿ ವಾಹನವಾದರೆ ಪ್ರತಿ ಸೀಟಿಗೆ 2850 ರೂ.ನಂತೆ 3 ತಿಂಗಳಿಗೆ 20 ಸೀಟಿಗೆ 57 ಸಾವಿರ ರೂ. ಹೆಚ್ಚುವರಿ ಪಾವತಿಸಬೇಕು. ಅಂದರೆ ವಾರ್ಷಿಕ 2.28 ಲಕ್ಷ ರೂ. ನಷ್ಟವಾಗುತ್ತಿದೆ.

    ಅಧಿಕೃತ ಎಷ್ಟು, ಅನಧಿಕೃತ ಎಷ್ಟು?

    ರಾಜ್ಯಾದ್ಯಂತ 40 ಸಾವಿರಕ್ಕೂ ಹೆಚ್ಚು ಮ್ಯಾಕ್ಸಿ ಕ್ಯಾಬ್​ಗಳಿವೆ. ಇವುಗಳನ್ನು ಟೆಂಪೋ ಟ್ರಾವಲರ್ ಹಾಗೂ ಮ್ಯಾಕ್ಸಿ ಕ್ಯಾಬ್ ಎಂದು ವರ್ಗೀಕರಿಸಲಾಗುತ್ತದೆ. 7+1, 9+1, 12+1 ವಾಹನಗಳೂ ಇವೆ. ಆರ್​ಟಿಒ ಅಧಿಕಾರಿಗಳು ಹಾಗೂ ವಾಹನ ಮಾಲೀಕರ ಸಂಘಟನೆಗಳು ಹೇಳುವಂತೆ 15 ರಿಂದ 16 ಸಾವಿರ ವಾಹನಗಳು ಕಾನೂನು ಬಾಹಿರವಾಗಿ ಹೆಚ್ಚುವರಿ ಸೀಟುಗಳಾಗಿ ಮಾರ್ಪಾಡುಗೊಂಡು ಓಡಾಡುತ್ತಿವೆ. ಇದರಿಂದ ಸರ್ಕಾರಕ್ಕೆ ಅಂದಾಜು 100 ಕೋಟಿ ರೂ. ಆದಾಯ ಖೋತಾ ಆಗುತ್ತಿದೆ.

    ಹೊರಗೆ ಬಾರದ ವಾಹನ

    ಮಂಗಳವಾರ (ಫೆ.11)ದಿಂದಲೇ ಅನಧಿ ಕೃತ ಮ್ಯಾಕ್ಸಿ ಕ್ಯಾಬ್​ಗಳ ವಿರುದ್ಧ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿ ದ್ದಾರೆ. ಬುಧವಾರ ಬೆಂಗಳೂರಿನ ಯಶವಂತ ಪುರ ವಿಭಾಗದಲ್ಲಿ 3, ರಾಜಾಜಿನಗರ ವಿಭಾಗ ದಲ್ಲಿ 10 ಸೇರಿ ಎಲ್ಲ ವಿಭಾಗಗಳಲ್ಲೂ ಕೇಸ್ ದಾಖಲಿಸಲಾಗುತ್ತಿದೆ. ಆದರೆ, ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಾಹನಗಳನ್ನು ಹೊರಗೆ ತೆಗೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

    ಅನನುಕೂಲ ಏನು?
    1. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 100 ಕೋಟಿ ರೂ.ಗೂ ಹೆಚ್ಚಿನ ನಷ್ಟ
    2. ವಾಹನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೀಟು ಅಳವಡಿಕೆಯಿಂದ ಅಪಘಾತ ಸಂಭವ
    3. ಅಪಘಾತವಾದರೆ ವಾಹನ ಮಾಲೀಕ, ಪ್ರಯಾಣಿಕ ಇಬ್ಬರಿಗೂ ವಿಮೆ ಸಿಗುವುದಿಲ್ಲ
    4. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಇಂಥ ವಾಹನಗಳ ಸಂಚಾರ ಜಾಸ್ತಿ

    ಕೀರ್ತಿನಾರಾಯಣ ಸಿ. ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts