More

    ದುರ್ನಾತ ಬೀರುತ್ತಿದೆ ಮಸೀದಿ ಬಾವಿ

    • ತಾವರಗೇರಾದ ನಡು ಬಜಾರಿನಲ್ಲಿ ರೋಗ ಭೀತಿ | ಸ್ವಚ್ಛಗೊಳಿಸಲು ಜಿಜ್ಞಾಸೆ
    • ತಾವರಗೇರಾ: ಪಟ್ಟಣದ ಜನತೆಗೆ ನೀರಿನ ಆಸರೆಯಾಗಿದ್ದ ಮಸೀದಿ ಬಾವಿ ಇದೀಗ ನಿರುಪಯುಕ್ತವಾಗಿದ್ದು, ತ್ಯಾಜ್ಯ ಸಂಗ್ರಹ ತಾಣವಾಗಿದೆ. ಬಾವಿಗೆ ಕಾಯಕಲ್ಪ ನೀಡಬೇಕಾ ಅಥವಾ ಮುಚ್ಚಬೇಕಾ ಎಂಬ ಜಿಜ್ಞಾಸೆ ಏರ್ಪಟ್ಟಿದೆ.

    ಹೈದರಾಬಾದ್ ನಿಜಾಮರ ಆಳ್ವಿಕೆಗೂ ಮುನ್ನ ಈ ಬಾವಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಬಾವಿಯ ಕೆಳಗೆ ಇಳಿಯಲು ಮೆಟ್ಟಲುಗಳನ್ನು ಸಹ ಕಟ್ಟಿಸಲಾಗಿದೆ. ಬಾವಿಗೆ ಹೊಂದಿಕೊಂಡಿರುವ ಜಾಮಿಯಾ ಮಸೀದಿಗೆ ನಮಾಜ್ ಸಲ್ಲಿಸಲು ಬರುವ ಮುಸ್ಲಿಮರು ಇದೇ ಬಾವಿಯಲ್ಲಿ ಕೈ-ಕಾಲು, ಮುಖ ತೊಳೆದುಕೊಳ್ಳುತ್ತಿದ್ದರು. ಪಟ್ಟಣಕ್ಕೆ ನಲ್ಲಿ ಮೂಲಕ ನೀರು ಸರಬುರಾಜು ಮಾಡುವುದಕ್ಕೂ ಮುನ್ನ ಊರಿನ ಜನರು ಈ ಬಾವಿಯ ನೀರನ್ನು ಬಳಸುತ್ತಿದ್ದರು. ಆ ಬಳಿಕ ಬಾವಿ ನೀರಿನ ಬಳಕೆ ಕಡಿಮೆ ಆಯಿತು. ಇದೀಗ ನೀರು ಕಾಣದಷ್ಟು ಬಾವಿ ಗಲೀಜು ಸೇರಿದೆ.

    ಗ್ರಾಮ ಪಂಚಾಯಿತಿ ಆಡಳಿತ ಇದ್ದಾಗ ಬಾವಿಯ ನೀರು ಹೊರ ಹಾಕಿ ತ್ಯಾಜ್ಯ ಸ್ವಚ್ಛಗೊಳಿಸಲಾಗಿತ್ತು. ಪಟ್ಟಣದ ನಡು ಬಜಾರಿನಲ್ಲಿರುವ ಬಾವಿಯಲ್ಲಿ ಅಂಗಡಿಯವರು ತ್ಯಾಜ್ಯ ಹಾಕುತ್ತಿರುವುದು, ರಸ್ತೆಯಲ್ಲಿನ ಕಸ ಸಂಗ್ರಹವಾಗಿ ನೀರು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ಒಂಬತ್ತು ವರ್ಷವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬಾವಿಯನ್ನು ಮತ್ತೊಮ್ಮೆ ಸ್ವಚ್ಛಗೊಳಿಸಲಾಗಿತ್ತು. ಈಗ ಮೊದಲಿಗಿಂತ ಹೆಚ್ಚು ಕಸ ಸಂಗ್ರಹವಾಗಿದೆ. ನೀರು ಮಲೀನಗೊಂಡು, ದುರ್ವಾಸನೆ ಬರುತ್ತಿದೆ. ಜನನಿಬಿಡ ಪ್ರದೇಶವಾಗಿರುವುದರಿಂದ ನಿತ್ಯ ನೂರಾರು ಜನ ಬಾವಿ ಮಾರ್ಗವಾಗಿ ಓಡಾಡುತ್ತಾರೆ. ನೀರಿನ ದುರ್ನಾತಕ್ಕೆ ಬೇಸತ್ತಿದ್ದಾರೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ. ಬಾವಿಯ ನೀರು ಉಪಯೋಗಕ್ಕೆ ಸೂಕ್ತವಾಗಿಲ್ಲ. ನಲ್ಲಿ ನೀರು ಸಮರ್ಪಕವಾಗಿ ಬರುತ್ತಿರುವುದರಿಂದ 40 ರಿಂದ 50 ಮೆಟ್ಟಲುಗಳನ್ನು ಇಳಿದು ಗಲೀಜು ನೀರನ್ನು ತರಲು ಯಾರೂ ಹೋಗುವದಿಲ್ಲ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಬಾವಿಯನ್ನು ಮುಚ್ಚಿಸುವದು ಸೂಕ್ತ ಎಂಬ ಅಭಿಪ್ರಾಯಗಳಿವೆ.

    ಪಟ್ಟಣದ ಜಾಮಿಯಾ ಮಸೀದಿ ಪಕ್ಕದಲ್ಲಿರುವ ಬಾವಿಯಲ್ಲಿನ ತ್ಯಾಜ್ಯ ತೆರವುಗೊಳಿಸಲಾಗುವುದು. ಬಾವಿಯಲ್ಲಿನ ಮಲೀನ ನೀರನ್ನು ಕೂಡ ಖಾಲಿ ಮಾಡಿಸಲಾಗುವುದು.
    | ನಬಿಸಾಬ್ ಖುದನವರ ಪಪಂ ಮುಖ್ಯಾಧಿಕಾರಿ, ತಾವರಗೇರಾ

    ಮಸೀದಿ ಬಾವಿಯಲ್ಲಿ ತ್ಯಾಜ್ಯ ತುಂಬಿದೆ. ಇದರಿಂದಾಗಿ ಬಾವಿ ಮುಚ್ಚಬೇಕಾ ಅಥವಾ ಪರ್ಯಾಯವಾಗಿ ಏನಾದರೂ ಮಾಡಬಹುದಾ ಎಂಬುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ಇಷ್ಟರಲ್ಲೇ ಸಭೆ ಕರೆಯಲಾಗುವುದು.
    | ನಾದಿರ್ ಪಾಷಾ ಮುಲ್ಲಾರ ಸದರ್ ಜಾಮಿಯಾ ಮಸೀದಿ, ತಾವರಗೇರಾ

    ಮಸೀದಿ ಬಾವಿಯಲ್ಲಿ ಸ್ವಚ್ಛಗೊಳಿಸಲಾರದಷ್ಟು ತ್ಯಾಜ್ಯ ತುಂಬಿದೆ. ಬಾವಿಯಿಂದ ಹೊರಸೂಸುತ್ತಿರುವ ದುರ್ವಾಸನೆಗೆ ರೋಗ ಹರಡುವ ಸಾಧ್ಯತೆಗಳಿವೆ. ಇದರಿಂದಾಗಿ ಬಾವಿಯನ್ನು ಮುಚ್ಚುವದೇ ಸೂಕ್ತ.
    | ಹಮೀದ್ ಸಾಬ್ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ, ತಾವರಗೇರಾ

    ಪಪಂ ಸಿಬ್ಬಂದಿ ಬಾವಿ ಸ್ವಚ್ಚಗೊಳಿಸಿದರೂ, ಸಾರ್ವಜನಿಕರು ಕಸ ಹಾಕುವುದನ್ನು ಬಿಡುವುದಿಲ್ಲ. ಬಾವಿಯನ್ನು ಮುಚ್ಚುವದೇ ಸೂಕ್ತ.
    | ಜಮೀಲ್ ಸಾಬ್ ಜಹಗೀರದಾರ್ ಸಾಮಾಜಿಕ ಕಾರ್ಯಕರ್ತ, ತಾವರಗೇರಾ

    ಪಟ್ಟಣದ ಜಾಮಿಯಾ ಮಸೀದಿಯ ಪಕ್ಕದಲ್ಲಿರುವ ತೆರೆದ ಹೊಕ್ಕು ತುಂಬುವ ಬಾವಿಯಲ್ಲಿ ತುಂಬಿರುವ ತ್ಯಾಜ್ಯವನ್ನು ತೆಗೆಸಿ, ಸ್ವಚ್ಛ ಮಾಡಿ ಮಲಿನ ನೀರನ್ನು ಖಾಲಿ ಮಾಡಿಸಲು ವ್ಯವಸ್ಥೆ ಮಾಡುತ್ತೇನೆ.
    | ನಬಿಸಾಬ್ ಖುದನವರ ಮುಖ್ಯಾಧಿಕಾರಿ ಪಪಂ, ತಾವರಗೇರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts