ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?

airindia
Published on

ನವದೆಹಲಿ: ಉಪ್ಪಿನಿಂದ ಹಿಡಿದು ಸಾಫ್ಟ್​ವೇರ್​ವರೆಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಟಾಟಾ ಗುಂಪಿಗೆ ಏರ್​ ಇಂಡಿಯಾದ ಮಾರಾಟ ಫಿಕ್ಸ್​ ಆಗಿರುವ ಬಗ್ಗೆ ಇಂದು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಈ ವರ್ಷಾಂತ್ಯದೊಳಗೆ ಟಾಟಾ ಸನ್ಸ್​ನ ಟಾಲೇಸ್​ ಪ್ರೈವೇಟ್ ಲಿಮಿಟೆಡ್​ ಕಂಪೆನಿಗೆ ಏರ್​ ಇಂಡಿಯಾದ ವರ್ಗಾವಣೆ ಪ್ರಕ್ರಿಯೆಗಳು ಪೂರೈಸಲಿವೆ ಎಂದಿದೆ.

ನಷ್ಟದಲ್ಲಿ ಮುಳುಗಿರುವ ಏರ್​ ಇಂಡಿಯಾದ ಹೂಡಿಕೆಯನ್ನು ಸಂಪೂರ್ಣ ಹಿಂತೆಗೆಯುವ ಸರ್ಕಾರದ ಯೋಜನೆಯಂತೆ ಆಹ್ವಾನಿಸಲಾಗಿದ್ದ ಖರೀದಿಯ ಬಿಡ್​ಗಳಲ್ಲಿ, "ಟಾಟಾ ಗುಂಪಿನ ಟಾಲೇಸ್​ ಕಂಪೆನಿಯ 18,000 ಕೋಟಿ ರೂಪಾಯಿಗಳ ಬಿಡ್​ ಗೆದ್ದಿದೆ. ಈ ನಿಟ್ಟಿನ ವ್ಯವಹಾರವು ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಮುಗಿಯಲಿದೆ" ಎಂದು ಇನ್​ವೆಸ್ಟ್​ಮೆಂಟ್​ ಅಂಡ್​ ಪಬ್ಲಿಕ್​ ಅಸೆಟ್ ಮ್ಯಾನೇಜ್​ಮೆಂಟ್​ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಹೇಳಿದ್ದಾರೆ.

ತನ್ನ ಶೇಕಡ 100 ರಷ್ಟು ಪಾಲನ್ನು ಟಾಟಾ ಕಂಪೆನಿಗೆ ಮಾರುತ್ತಿರುವ ಕೇಂದ್ರ ಸರ್ಕಾರಕ್ಕೆ, 2,700 ಕೋಟಿ ರೂಪಾಯಿ ನಗದು ಲಭಿಸಲಿದೆ ಎನ್ನಲಾಗಿದೆ. ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಿಂದ ಜೆ.ಆರ್.ಡಿ. ಟಾಟಾ ಅವರೇ ಆರಂಭಿಸಿದ್ದ ಏರ್​ ಇಂಡಿಯಾ ಕಂಪೆನಿ ಇದೀಗ ಮರಳಿ ತವರು ಸಂಸ್ಥೆಯ ತೆಕ್ಕೆಗೇ ಸೇರುತ್ತಿದೆ.

ಟಾಟಾ ಕಂಪೆನಿಯ ವಿನ್ನಿಂಗ್ ಬಿಡ್, ಕಂಪೆನಿಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿದ್ದ 12,906 ಕೋಟಿ ರೂಪಾಯಿ ರಿಸರ್ವ್​ ಪ್ರೈಸ್​ಗಿಂತ ಸುಮಾರು 5000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.​ ಏರ್​ ಇಂಡಿಯಾದ ಮಾಲೀಕತ್ವ ಪಡೆಯುತ್ತಿರುವ ಟಾಟಾ ಕಂಪೆನಿ, ಒಂದು ವರ್ಷದ ತನಕ ಎಲ್ಲಾ ನೌಕರರನ್ನೂ ಉದ್ಯೋಗದಲ್ಲಿ ಮುಂದುವರೆಸಬೇಕು. ಎರಡನೇ ವರ್ಷದಿಂದ ವಾಲೆಂಟರಿ ರಿಟೈರ್​ಮೆಂಟ್​ ಸ್ಕೀಮ್​(ವಿಆರ್​ಎಸ್)ನ ಅವಕಾಶ ನೀಡಬಹುದು ಎಂದು ಸರ್ಕಾರ ಷರತ್ತು ವಿಧಿಸಿದೆ.

ಏರ್​ ಇಂಡಿಯಾ ಮತ್ತೆ ಟಾಟಾ ಗುಂಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಟಾಟಾ ಗುಂಪಿನ ಮುಖ್ಯಸ್ಥ ರತನ್ ಟಾಟಾ ಅವರು, ಭಾವುಕವಾದ ಸಂದೇಶವನ್ನು ಟ್ವೀಟ್ ಮಾಡಿದ್ದು, "ವೆಲ್ಕಮ್ ಬ್ಯಾಕ್, ಏರ್ ಇಂಡಿಯ" ಎಂದಿದ್ದಾರೆ. ಏರ್ ಇಂಡಿಯಾ ಪುನರ್​ನಿರ್ಮಾಣಕ್ಕೆ ಮಹತ್ವದ ಪ್ರಯತ್ನ ನಡೆಯಲಿದೆ ಎಂದಿದ್ದು, ಜೆಆರ್​ಡಿ ಟಾಟಾ ಅವರಿರುವ ಹಳೆಯ ಏರ್ ಇಂಡಿಯಾ ವಿಮಾನದ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net