More

    ಟ್ಯಾಂಕರ್ ನೀರು ಪೂರೈಕೆಗೆ ‘ಲಗಾಮು’

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಎರಡು ಟ್ಯಾಂಕರ್ ನೀರು ಒದಗಿಸಿದ ಕಡೆ 10 ಟ್ಯಾಂಕರ್ ಎಂದು ಲೆಕ್ಕ ತೋರಿಸುವುದು, ಗುಣಮಟ್ಟ ಪರಿಶೀಲಿಸದೆ ದೊರೆತ ಕಡೆಯಿಂದ ನೀರು ಪೂರೈಸುವುದು ಇಲ್ಲಿವರೆಗೆ ಅನೇಕ ಕಡೆ ನಡೆದುಕೊಂಡು ಬಂದ ‘ಸಂಪ್ರದಾಯ’. ಇಂತಹ ಅಕ್ರಮಗಳು ನಡೆಯಬಾರದು ಎಂದೇ ಗ್ರಾಮ ಪಂಚಾಯಿತಿಗಳಲ್ಲಿ ಈ ವರ್ಷದಿಂದ ನೀರಿನ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇಡೀ ವ್ಯವಸ್ಥೆಯ ಜವಾಬ್ದಾರಿಯನ್ನು ಗ್ರಾ.ಪಂ. ಮಟ್ಟದಿಂದ ತಹಸೀಲ್ದಾರ್ ಅವರಿಗೆ ವರ್ಗಾಯಿಸಲಾಗಿದೆ.
    ಇಲ್ಲಿವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಟೆಂಡರ್ ಕರೆದು ನೀರು ಪೂರೈಸಲು ಗುತ್ತಿಗೆದಾರನ ನೇಮಿಸುವುದು, ನೀರು ಪೂರೈಸಿದ ಗುತ್ತಿಗೆದಾರನಿಗೆ ಪಿಡಿಒ ಹಣ ಪಾವತಿಸುವುದು ನಡೆಯುತ್ತಿತ್ತು. ಗ್ರಾ.ಪಂ.ಗಳಿಂದ ಬಂದ ಬಿಲ್‌ಗಳನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಪರಿಶೀಲಿಸಿ ತಹಸೀಲ್ದಾರ್‌ಗೆ ನೀಡುತ್ತಿದ್ದರು. ಕಂದಾಯ ಇಲಾಖೆಯಿಂದ ಆಯಾ ಟೆಂಡರ್‌ದಾರರಿಗೆ ಚೆಕ್ ಮೂಲಕ ಬಿಲ್ ಪಾವತಿಸಲಾಗುತ್ತಿತ್ತು. ಗುತ್ತಿಗೆದಾರ ಹಾಗೂ ಅಧಿಕಾರಿ ವರ್ಗ ತೋರಿಸಿದ ಲೆಕ್ಕವೇ ಅಂತಿಮ ಆಗಿರುತ್ತಿತ್ತು.

    ಆ್ಯಪ್ ಆಧಾರಿತ ವ್ಯವಸ್ಥೆ: ಇನ್ನು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೊಬೈಲ್ ಆ್ಯಪ್ ಆಧಾರಿತ ವ್ಯವಸ್ಥೆ ಕುಡಿಯುವ ನೀರಿನ ಪೂರ್ಣ ವ್ಯವಹಾರವನ್ನು ನಿಯಂತ್ರಿಸಲಿದೆ. ಭೂಮಿ ತಂತ್ರಾಂಶದಿಂದಲೇ ನೂತನ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ನೂತನ ಕ್ರಮ ಪ್ರಕಾರ ನೀರು ಪೂರೈಸುವ ಎಲ್ಲ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ. ನೀರು ತುಂಬಿಸುವಾಗ, ವಿತರಿಸುವಾಗ ಫೋಟೊ, ವೀಡಿಯೊ ಚಿತ್ರೀಕರಿಸಿ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು.
    ಜಿಪಿಎಸ್ ಮೂಲಕ ನೀರು ಸಾಗಾಟದ ವಿವರಗಳು ಆ್ಯಪ್‌ನಲ್ಲಿ ದಾಖಲಾಗುತ್ತವೆ. ಟ್ಯಾಂಕರ್ ಚಾಲಕ, ಟ್ಯಾಂಕರ್ ಮಾಲೀಕರ ಮೊಬೈಲ್ ನಂಬರ್ ನೋಂದಾಯಿಸಬೇಕು. ಇದರಿಂದ ಜಲ ಮೂಲ ಹಾಗೂ ಜಲ ಸಾಗಾಟದ ದೂರದ ಬಗ್ಗೆ ಕರಾರುವಕ್ಕಾದ ಮಾಹಿತಿ ಆ್ಯಪ್‌ನಲ್ಲಿ ದಾಖಲಾಗುತ್ತದೆ. ನೀರು ಪೂರೈಕೆಯಾದ ಕೂಡಲೇ ಗುತ್ತಿಗೆದಾರನ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗಬೇಕು. ಟೆಂಡರ್ ಕರೆಯುವಲ್ಲಿಂದ ಎಲ್ಲ ಕೆಲಸಗಳು ತಹಸೀಲ್ದಾರ್ ಮೇಲ್ವಿಚಾರಣೆಯಲ್ಲೇ ನಡೆಯಲಿದೆ.

    ಮುಂದಿನ ಸವಾಲು:
    ಚುನಾವಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಬರ್ಖಾಸ್ತುಗೊಳ್ಳಲಿದೆ. ಚುನಾವಣೆ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡ ತಾತ್ಕಾಲಿಕವಾಗಿ ಬೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇರುತ್ತದೆ. ಪೂರ್ಣ ಪಾರದರ್ಶಕ ವ್ಯವಸ್ಥೆಯಲ್ಲಿ ನೀರು ಪೂರೈಕೆ ಇರುತ್ತದೆ ಎನ್ನುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ನೀರು ಪೂರೈಕೆಗೆ ಗುತ್ತಿಗೆದಾರರು ನಿರಾಸಕ್ತಿ ವಹಿಸಬಹುದು. ಯಾಕೆಂದರೆ ಬೇಸಿಗೆ ಕಾಲದಲ್ಲಿ ನೀರು ಪೂರೈಕೆದಾರರಿಗೆ ಒಳ್ಳೆಯ ಬೇಡಿಕೆ ಇರುತ್ತದೆ. ಕೆಲವು ಗುತ್ತಿಗೆದಾರರು ಜಲ ಮೂಲಗಳ ಗುಟ್ಟನ್ನು ಬಿಟ್ಟುಕೊಡಲು ಸಿದ್ಧರಿರಲಾರರು. ಜಲಮೂಲಗಳು ತಿಳಿದರೆ ಮುಂದಿನ ದಿನಗಳಲ್ಲಿ ಇದೇ ಜಲಮೂಲಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಕೂಡ ಅವಕಾಶವಿರುತ್ತದೆ. ಸಕಾಲದಲ್ಲಿ ನೀರು ಪೂರೈಕೆಯಾಗದಿದ್ದರೆ ನೀರಿನ ಕ್ಷಾಮವಿರುವ ಗ್ರಾಮೀಣ ಭಾಗದ ಕಡೆಯ ನಿವಾಸಿಗಳಿಗೆ ಸಮಸ್ಯೆಯಾಗಬಹುದು.

    ನೀರು ಪೂರೈಕೆ ವ್ಯವಸ್ಥೆಯನ್ನು ಪಾರದರ್ಶಕ ರೀತಿಯಲ್ಲಿ ಮುನ್ನಡೆಸುವಂತೆ ಮೊಬೈಲ್ ಆಪ್ ಆಧಾರಿತ ಟ್ಯಾಂಕ್ ನೀರು ಪೂರೈಕೆ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ನೀರು ಪೂರೈಕೆಯಾಗಿರುವುದನ್ನು ಖಾತರಿಪಡಿಸಲು ನೂತನ ವ್ಯವಸ್ಥೆಯಲ್ಲಿ ಅವಕಾಶವಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರಾಯೋಗಿಕ ಹಂತದಲ್ಲಿ ಕೆಲವು ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಆದರೆ ಭವಿಷ್ಯದಲ್ಲಿ ಇದರಿಂದ ಎಲ್ಲರೂ ಒಳ್ಳೆಯ ಫಲವನ್ನೇ ಪಡೆಯಲಿದ್ದಾರೆ. ಗುತ್ತಿಗೆದಾರರಿಗೂ ಶೀಘ್ರ ಹಣ ಪಾವತಿಯಾಗಲಿದೆ.
    – ಗುರುಪ್ರಸಾದ್, ತಹಸೀಲ್ದಾರ್, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts