More

    ತಲಪಾಡಿ ಟೋಲ್ ದರ ಹೆಚ್ಚಳ ಸಾಧ್ಯತೆ

    ಮಂಗಳೂರು: ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕೊನೆಗೂ ಮುಗಿದು, ಸಂಚಾರಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ತಲಪಾಡಿ ಟೋಲ್‌ಗೇಟ್‌ನಲ್ಲಿ ಶೀಘ್ರ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸುಗಮ ಸಂಚಾರ ಜತೆ ಟೋಲ್ ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ.

    ಈವರೆಗೆ ಮುಗಿದಿರುವ ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದೆವು. ಈಗ ಎರಡು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿವೆ. ಅದರಂತೆ ಟೋಲ್ ಸಂಗ್ರಹ ಮೊತ್ತವೂ ಹೆಚ್ಚಲಿದೆ ಎಂದು ಮಂಗಳೂರು ವಿಭಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶಿಶುಮೋಹನ್ ವಿಜಯವಾಣಿಗೆ ತಿಳಿಸಿದ್ದಾರೆ.

    *ಸಾರ್ವಜನಿಕರ ಆಕ್ಷೇಪ: ತೊಕ್ಕೊಟ್ಟು, ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಮುಗಿದು ವಾಹನ ಸಂಚಾರ ಆರಂಭಗೊಂಡಿದೆ. ಆದರೆ ಕೆಳಗಿನ ರಸ್ತೆಯ ಸಮರ್ಪಕ ಡಾಂಬರೀಕರಣ, ಸಂಪೂರ್ಣ ಸರ್ವಿಸ್ ರಸ್ತೆ ಮತ್ತು ಮಳೆ ನೀರು ಹರಿಯುವ ಚರಂಡಿ ಕಾಮಗಾರಿ ಇನ್ನೂ ಆಗಿಲ್ಲ. ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕವೇ ಟೋಲ್ ಶುಲ್ಕ ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
    ಸರ್ವೀಸ್ ರಸ್ತೆ, ಚರಂಡಿ ಕಾಮಗಾರಿ ಶೀಘ್ರದಲ್ಲಿ ಆರಂಭಗೊಂಡು ಪೂರ್ಣಗೊಳ್ಳಲಿದೆ. ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಂಡ ಬಳಿಕ ಟೋಲ್ ಶುಲ್ಕ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಟೋಲ್ ಶುಲ್ಕ ನಿಗದಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಿಸಿದ ಹೆದ್ದಾರಿಯ ಯಾವುದೇ ಕಾಮಗಾರಿ ಮುಗಿದ ಬಳಿಕ ಅದು ಟೋಲೇಬಲ್ ಲೆಂತ್‌ನಲ್ಲಿ ಬರಲಿದೆ. ಇದು ತಲಪಾಡಿಗೆ ಮಾತ್ರ ಸೀಮಿತವಾಗಿಲ್ಲ. ಈಗಿನ ಲೆಕ್ಕಾಚಾರ ಪ್ರಕಾರ, ಸಾಸ್ತಾನದ ಟೋಲ್ ಪ್ಲಾಝಾದಲ್ಲಿ ಕುಂದಾಪುರ ಮೇಲ್ಸೇತುವೆ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಟೋಲೇಬಲ್ ಲೆಂತ್‌ನಲ್ಲಿ ಸೇರಿಸಿಲ್ಲ. ಮೇಲ್ಸೇತುವೆ ಕಾಮಗಾರಿ ಮುಗಿದ ತಕ್ಷಣ, ಅಲ್ಲೂ ಟೋಲ್ ಶುಲ್ಕ ಮೊತ್ತ ಹೆಚ್ಚಲಿದೆ.
    ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ತಲಪಾಡಿ, ಬಿ.ಸಿ.ರೋಡ್, ಸುರತ್ಕಲ್, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಪಾವತಿಸಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಶಿರೂರಿನಲ್ಲೂ ಹೊಸ ಟೋಲ್ ಆರಂಭಗೊಂಡು ಅಲ್ಲೂ ಹಣ ಪಾವತಿಸಿ ಪ್ರಯಾಣಿಸಬೇಕಿದೆ.

    ಸುರತ್ಕಲ್‌ನಲ್ಲಿ ಇರ್ಕಾನ್ ಕಂಪನಿ ಅಳವಡಿಸಿರುವ ಟೋಲ್‌ನಲ್ಲಿ ಗುತ್ತಿಗೆದಾರರು ಕಾರು, ಜೀಪು ಮತ್ತಿತರ ಲಘು ವಾಹನಗಳ ಏಕಮುಖ ಸಂಚಾರಕ್ಕೆ 25 ರೂ. ಮತ್ತು ದ್ವಿಮುಖ ಸಂಚಾರಕ್ಕೆ ದುಬಾರಿ 80 ರೂ. ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಹೆಜಮಾಡಿ ಮತ್ತು ತಲಪಾಡಿಯ ನವಯುಗ ಕಂಪನಿಯ ಟೋಲ್ ಪ್ಲಾಜಾದಲ್ಲಿ 55 ರೂ. ವಸೂಲಿ ನಡೆಯುತ್ತಿದೆ.

    ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಮುಕ್ತಗೊಂಡ ಬಳಿಕ ಟೋಲೇಬಲ್ ಲೆಂತ್ ಹೆಚ್ಚಾಗಿದೆ. ಅದೇ ಪ್ರಕಾರ ಟೋಲ್ ಶುಲ್ಕ ಕೂಡಾ ಹೆಚ್ಚಲಿದೆ. ಶುಲ್ಕ ಎಷ್ಟು ಹೆಚ್ಚಳವಾಗುತ್ತದೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
    ಶಿಶುಮೋಹನ್
    ಯೋಜನಾ ನಿರ್ದೇಶಕರು, ರಾ.ಹೆ.ಪ್ರಾಧಿಕಾರ, ಮಂಗಳೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts