More

    ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಳಾಂತರದಲ್ಲಿ ಪೂರ್ವಾಗ್ರಹ ಪೀಡಿತರಾದ ತೀ.ನ.ಶ್ರೀ: ಮೇಘರಾಜ್ ಆರೋಪ

    ಶಿವಮೊಗ್ಗ: ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಾಪನೆ ಕುರಿತು ಪೂರ್ವಾಗ್ರಹ ಪೀಡಿತರಾಗಿರುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಅವರಿಗೆ ರೈಲ್ವೆ ವ್ಯವಸ್ಥೆ ಬಗ್ಗೆ ಮಾತನಾಡುವ ನೈತಿಕತೇ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
    ತಾಳಗುಪ್ಪಕ್ಕೆ ರೈಲ್ವೆ ಟರ್ಮಿನಲ್ ತಪ್ಪಿದ್ದೇಕೆ ಎಂಬುದನ್ನು ಅವರೇ ಪರಾಮರ್ಶಿಸಬೇಕಾಗಿದೆ. ಟರ್ಮಿನಲ್ ಸ್ಥಾಪನೆಗೆ ತಾಳಗುಪ್ಪದಲ್ಲಿ ಜಾಗ ತಾಂತ್ರಿಕವಾಗಿ ಯೋಗ್ಯವಾಗಿಲ್ಲವೆಂದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ವರದಿ ನೀಡಿದ್ದರ ಪರಿಣಾಮ ಕೋಟೆಗಂಗೂರಿಗೆ ಸ್ಥಳಾಂತರಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
    ರೈಲ್ವೆ ಕ್ಷೇತ್ರದಲ್ಲಿ ಶಿವಮೊಗ್ಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿರುವುದರಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪಾತ್ರ ಹಿರಿದಿದೆ. ಅವರ ಇಚ್ಛಾಶಕ್ತಿ, ಕಾರ್ಯತಾತ್ಪರತೆ ಮತ್ತು ಶ್ರಮತೆಯಿಂದ ಶಿವಮೊಗ್ಗದಿಂದ ಹತ್ತಾರು ರೈಲುಗಳು ಓಡಾಡುವಂತಾಗಿದೆ. ಆದರೆ ಇದನ್ನರಿಯದ ತೀ.ನ.ಶ್ರೀ ಅವರು ಸುಖಾಸುಮ್ಮನೆ ರಾಘವೇಂದ್ರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಧೋರಣೆ ಸರಿಯಲ್ಲ. ಹಾಗಾಗಿ ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
    ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಅವರ ಪಕ್ಷದವರೇ ಸಂಸದರಾಗಿದ್ದಾಗ ಏನು ಕೆಲಸಗಳು ಆಗಿವೆ ಎಂಬುದನ್ನು ಅರಿತುಕೊಳ್ಳಬೇಕು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶಿವಮೊಗ್ಗ-ತಾಳಗುಪ್ಪ ನಡುವಿನ ಯುನಿಗೇಜ್‌ನ್ನು ಬ್ರಾಡ್‌ಗೇಜ್ ಆಗಿ ವಿಸ್ತರಿಸಲಾಯಿತು. ಇಂಟರ್‌ಸಿಟಿಯನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಯಿತು. 30ಕ್ಕೂ ಅಧಿಕ ರೈಲುಗಳು ಓಡಾಡುವಂತಾಗಿದೆ ಎಂದರು.
    ಬೆಂಗಳೂರಿನ ಯಶವಂತಪುರ, ಮೈಸೂರು, ಹುಬ್ಬಳ್ಳಿಯಲ್ಲಿ ಮಾತ್ರ ಇದ್ದ ಕೋಚಿಂಗ್ ಟರ್ಮಿನಲ್‌ನ್ನು ಶಿವಮೊಗ್ಗಕ್ಕೂ ತಂದ ಕೀರ್ತಿ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಪರ್ಕ ಕೊಂಡಿಯಾಗಿ ಜಿಲ್ಲೆಯಲ್ಲಿ 7 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುವಂತೆ ಮಾಡಿದ್ದಾರೆ. ಬೇರೆ ವಿಚಾರಗಳೇ ಇಲ್ಲದೇ ಬಿಜೆಪಿ ಮತ್ತು ರಾಘವೇಂದ್ರ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts