More

    ಟೇಕ್ ಆಫ್ ಹಂತದಲ್ಲಿ ಮುಂಗಾರು ಬೆಳೆ ಸಮೀಕ್ಷೆ : ಶೇ. 0.33 ಸಾಧನೆ

    ಕೋಲಾರ: 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ರೈತರೇ ಮೊಬೈಲ್‌ನಲ್ಲಿ ಬೆಳೆಯ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರಕ್ರಿಯೆ ಚುರುಕುಗೊಳ್ಳಬೇಕಿದೆ.
    ಜಿಲ್ಲೆಯಲ್ಲಿ 1.03 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ, 19,000 ಹೆಕ್ಟೇರ್‌ನಲ್ಲಿ ರೇಷ್ಮೆ ಹಾಗೂ 97,900 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಹಣ್ಣು, ತರಕಾರಿ, ಹಿಪ್ಪುನೇರಳೆ ತೋಟ ಹಾಗೂ ಕೃಷಿ ಬೆಳೆ ಸಮೀಕ್ಷೆಗೆ ಒಳಪಡಿಸಬೇಕಿದೆ.

    7.77 ಲಕ್ಷ ತಾಕು: ಜಿಲ್ಲೆಯಲ್ಲಿ ಒಟ್ಟು 7,77,361 ತಾಕುಗಳನ್ನು ಬೆಳೆ ಸಮೀಕ್ಷೆಗೆ ಗುರುತಿಸಿ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ರೈತರು ಸ್ವತಃ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕಿದ್ದು, ಖಾಸಗಿ ನಿವಾಸಿಗಳ ಸಹಕಾರ ಪಡೆಯಬಹುದು.
    ಮಂದಗತಿಯಲ್ಲಿ: ಜಿಲ್ಲೆಯಲ್ಲಿ ಮುಂಗಾರಿಗೆ 83,446 ಹೆಕ್ಟೇರ್ (ಶೇ.85) ಪ್ರದೇಶದಲ್ಲಿ ರಾಗಿ, ತೊಗರಿ ಇನ್ನಿತರ ಬೆಳೆ ಬಿತ್ತನೆಯಾಗಿದೆ. ಸಾವಿರಾರು ಹೆಕ್ಟೇರ್‌ನಲ್ಲಿ ತೋಟಗಾರಿಕೆ, ಹಿಪ್ಪುನೇರಳೆ ಬೆಳೆದು ನಿಂತಿದೆ. ಬೆಳೆ ಸಮೀಕ್ಷೆ ಆರಂಭಗೊಂಡು ಮೂರು ವಾರಗಳಾಗುತ್ತ ಬಂದಿದೆ. ಆದರೆ ಆ.21ರವರೆಗೆ 2,588 ತಾಕುಗಳಲ್ಲಷ್ಟೇ ರೈತರು ಬೆಳೆ ಸಮೀಕ್ಷೆ ಮಾಡಿದ್ದು, ಶೇ.0.33 ಮಾತ್ರ ಸಾಧನೆಯಾಗಿದೆ.

     

    ಆ.31 ಕೊನೇ ದಿನ: ರೈತರು ಸಮೀಕ್ಷೆ ಮಾಡಿಕೊಳ್ಳಲು ಆ.31ರವರೆಗೆ ಕಾಲಾವಕಾಶ ನೀಡಲಾಗಿದ್ದು, ಶೇ.1 ಸಾಧನೆಯೊಂದಿಗೆ ಮಂದಗತಿಯಲ್ಲಿ ಸಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸುತ್ತಿದ್ದಾರೆ. ಆದರೂ ಚುರುಕುಗೊಂಡಿಲ್ಲ.

     

    ಬೆಳೆ ಸಮೀಕ್ಷೆ ಹೇಗೆ: ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಓಜ್ಟಜ್ಛಿ ಇ್ಟಟ ಖ್ಠ್ಟಛಿ ಅ 2021- 22 ಅನ್ನು ಗೂಗಲ್ ಪ್ಲೇ-ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಆರ್ಥಿಕ ವರ್ಷ, ಋತು ದಾಖಲಿಸಿ ನಂತರ ಆಧಾರ್ ಕ್ಯೂ ಆರ್ ಕೋಡ್ ಮೂಲಕ ಅಥವಾ ಆಧಾರ್‌ನಲ್ಲಿರುವಂತೆ ಮಾಹಿತಿ ದಾಖಲಿಸಬೇಕು. ಮೊಬೈಲ್ ಸಂಖ್ಯೆ, ಒಟಿಪಿ ನಮೂದಿಸಿ ಸಕ್ರಿಯಗೊಳಿಸಿ ಸರ್ವೇ ನಂಬರ್‌ಗಳಡಿ ರೇಖೆಯೊಳಗೆ ನಿಂತು ಬೆಳೆ ವಿವರ ದಾಖಲಿಸಿ ಫೋಟೋ ತೆಗೆದು ಮಾಹಿತಿ ಅಪ್‌ಲೋಡ್ ಮಾಡಬೇಕು.

    ಅಗತ್ಯವೇನು: ಬೆಳೆ ಹಾನಿ, ಪರಿಹಾರ, ಬೆಳೆ ವಿಮೆ, ಪಹಣಿಯಲ್ಲಿ ಬೆಳೆ ನಮೂದಿಸಲು, ಬೆಳೆ ವಿಮೆ ಯೋಜನೆಯ ತಾಕು ಹಂತದ ಬೆಳೆ ಪರಿಶೀಲನೆಗೆ, ಬೆಳೆ ಕಟಾವು ಪ್ರಯೋಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹರನ್ನು ಗುರುತಿಸಲು, ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಾತಿಗೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಫ್‌ನಡಿ ಸಹಾಯಧನ ಪಡೆಯಲು ಬೆಳೆ ಸಮೀಕ್ಷೆ ನೆರವಾಗುತ್ತದೆ.

    ಮುಂದಿದೆ ಕರೊನಾತಂಕ: ಕರೊನಾ ಮೊದಲ ಹಾಗೂ ಎರಡನೇ ಅಲೆಯ ಕಾಲಘಟ್ಟದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ರೈತ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದರಿಂದ ಸರ್ಕಾರ ಪರಿಹಾರ ಘೋಷಿಸಿ ಬೆಳೆ ಸಮೀಕ್ಷೆ ಆಧಾರದಲ್ಲೇ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಿದೆ. ಹಾಲಿ ಇರುವ ಬೆಳೆ ಒಂದೆರಡು ತಿಂಗಳಿಗೆ ಕಟಾವಿಗೆ ಬರಬಹುದು. ಕರೊನಾ 3ನೇ ಅಲೆಯಲ್ಲಿ ಲಾಕ್‌ಡೌನ್ ಆದರೆ ರೈತ ಸಂಕಷ್ಟ ಅನುಭವಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ರೈತನಿಗೆ ಊರುಗೋಲಾದೀತು.

     

    ಜಿಲ್ಲೆಯಲ್ಲಿ ಕಳೆದ ವರ್ಷ 7.77 ಲಕ್ಷ ತಾಕುಗಳ ಪೈಕಿ 5 ಲಕ್ಷಕ್ಕೂ ಅಧಿಕ ತಾಕುಗಳನ್ನು ರೈತರೇ ಸಮೀಕ್ಷೆ ಮಾಡಿದ್ದರು. ಈ ಸಾಲಿನಲ್ಲಿ 2,500ಕ್ಕೂ ಅಧಿಕ ತಾಕುಗಳ ಸಮೀಕ್ಷೆ ಮುಗಿಸಿದ್ದಾರೆ. ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಖಾಸಗಿ ನಿವಾಸಿಗಳಿಗೆ ಆ್ಯಪ್ ಬಿಡುಗಡೆ ಮಾಡಿದ ನಂತರ ಉಳಿಕೆ ತಾಕುಗಳನ್ನು ಅವರ ಮೂಲಕ ಸಮೀಕ್ಷೆ ಪೂರ್ಣಗೊಳಿಸಲಾಗುವುದು.
    ವಿ.ಡಿ.ರೂಪದೇವಿ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts