More

    ಧರ್ಮದರ್ಶನ: ವಾಹನ ಚಾಲನೆಯಲ್ಲಿ ಇರಲಿ ಎಚ್ಚರ…

    ಧರ್ಮದರ್ಶನ: ವಾಹನ ಚಾಲನೆಯಲ್ಲಿ ಇರಲಿ ಎಚ್ಚರ...

    ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಚಾಲನಾ ನಿಯಮಗಳನ್ನು ಅರಿತುಕೊಂಡ ಚಾಲಕನಿಂದ ಮಾನವನ ದೌರ್ಬಲ್ಯದಿಂದ ಉಂಟಾಗುವ ಅಪಘಾತಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ದುರ್ಲಭವಾದ ಈ ಮನುಷ್ಯಶರೀರವನ್ನು ಅಪಘಾತಕ್ಕೆ ಒಡ್ಡಿಕೊಳ್ಳದೇ ಎಲ್ಲರೂ ಜಾಗರೂಕತೆಯಿಂದ ವ್ಯವಹರಿಸಬೇಕು.

    ಆಯಃ ಪ್ರಸರತಿ ಭಿನ್ನಘಟಾದಿವ ಅಂಭಃ

    ಲೋಕಃ ತಥಾಪಿ ಅಹಿತಮಾಚರತೀತಿಚಿತ್ರಮ್

    ‘ತೂತು ಬಿದ್ದ ಕೊಡದಿಂದ ನೀರು ಸೋರಿ ಹೋಗುವಂತೆ ಪ್ರತಿದಿನವೂ ಆಯುಷ್ಯವು ಸೋರುತ್ತ ಹೋಗುವುದು. ಆದರೂ ಜನರು ಅಹಿತವಾದದ್ದನ್ನೇ ಮಾಡುತ್ತ ಹೋಗುವುದು ವಿಚಿತ್ರವಾಗಿದೆ’ ಎಂದು ಭರ್ತೃಹರಿಯು ‘ವೈರಾಗ್ಯ ಶತಕ’ದಲ್ಲಿ ಹೇಳುತ್ತಾನೆ.

    ‘ಪ್ರತಿದಿನವೂ ತಮ್ಮ ಆಯುಷ್ಯವು ಕಡಿಮೆಯಾಗುತ್ತ ಹೋಗುವುದನ್ನು ಯಾರಿಗೂ ತಡೆಯುವುದು ಆಗುವುದಿಲ್ಲ. ಆದರೆ ಪ್ರತಿದಿನದ ಆಯುಷ್ಯ ವನ್ನು ಸದುಪಯೋಗ ಮಾಡಿಕೊಳ್ಳುವುದು ಅವರವರ ಕೈಯಲ್ಲಿದೆ’

    (ಪೊ›. ಕೆ. ಟಿ. ಪಾಂಡುರಂಗಿ ಅವರ ‘ವಿಚಾರ ಜ್ಯೋತಿ’ ಸಂಗ್ರಹದಿಂದ)

    ಇತ್ತೀಚೆಗೆ ಪತ್ರಿಕೆಗಳಲ್ಲಿ ಅಪಘಾತದ ವಿಷಯಗಳು ಬಿತ್ತರಗೊಂಡಿದ್ದನ್ನು ನೋಡಿ ನಮಗೆಲ್ಲರಿಗೂ ಆಶ್ಚರ್ಯ ಉಂಟಾಯಿತು. ಯಾಕೆಂದರೆ ಲಾಕ್​ಡೌನ್ ಸಮಯದಲ್ಲಿ ಪ್ರಯಾಣಿಕರು ವಾಹನವನ್ನು ಬಳಸುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಮತ್ತು ರಸ್ತೆಗಳೆಲ್ಲವೂ ಖಾಲಿ ಇರುವಾಗಲೂ ಅಪಘಾತಗಳು ಹೇಗೆ ಆಗುತ್ತವೆ ಎಂಬುದು ಯಕ್ಷಪ್ರಶ್ನೆ. ಜನದಟ್ಟಣೆ, ವಾಹನ ಸಂಚಾರ ದಟ್ಟಣೆ ಇದ್ದರೂ-ಇಲ್ಲದಿದ್ದರೂ ಅಪಘಾತಗಳು ನಡೆಯುತ್ತಿರುವುದು ನಿತ್ಯಸತ್ಯ. ಮೊದಲೆಲ್ಲ ಪತ್ರಿಕೆಗಳಲ್ಲಿ ವಾಹನ ಅಪಘಾತಗಳ ಸುದ್ದಿ ನಿತ್ಯವೂ ಬಂದಾಗ, ಈ ವಿಷಯ ಮಾಮೂಲಿನಂತೆ ಎಂದು ಮುಂದಿನ ಪುಟಕ್ಕೆ ಓದಲು ಹೋಗುತ್ತಿದ್ದೆವು. ಅಪಘಾತದಲ್ಲಿ ಯಾರಾದರೂ ಸತ್ತರೆ, ದೊಡ್ಡದಾಗಿ ವರದಿಯಾಗುತ್ತದೆ. ಅಪಘಾತವಾಗಿ ಒಂದು ವಾರ ಅಥವಾ ಹದಿನೈದು ದಿನದ ಬಳಿಕ ಯಾರಾದರೂ ಸತ್ತರೆ ಅದು ವರದಿಯಾಗುವುದಿಲ್ಲ. ಯಾಕೆಂದರೆ ಆಸ್ಪತ್ರೆಯ ಒಳಗೆ ಸಾವು ಸಂಭವಿಸಿರುವುದರಿಂದ ಅವರ ಬಂಧುಗಳಿಗೆ ಮತ್ತು ಕುಟುಂಬಕ್ಕೆ ಮಾತ್ರ ಅದು ತಿಳಿದು ನೋವಾಗುತ್ತದೆ.

    ಈ ಲಾಕ್​ಡೌನ್ ಸಮಯದಲ್ಲಿಯೂ ಯಾಕೆ ಹೀಗಾಗುತ್ತದೆ? ಅನಿರೀಕ್ಷಿತವಾಗಿ ಅಪಘಾತವಾಗುವುದಕ್ಕೂ, ಅಪೇಕ್ಷಿತ ಅಪಘಾತಗಳು ಆಗುವುದಕ್ಕೂ ವ್ಯತ್ಯಾಸಗಳಿವೆ. ಉದಾಹರಣೆಗೆ ಅಜಾಗರೂಕತೆ, ಅತಿವೇಗ ಮತ್ತು ಕುಡಿದು ವಾಹನ ಚಲಾಯಿಸುವುದು ಮುಂತಾದ ಕಾರಣಗಳಿಂದ ಅಪಘಾತಗಳಾಗುವುದು ಒಂದು ರೀತಿಯಲ್ಲಿ ಚಾಲಕರ ತಪ್ಪಿನಿಂದಾಗುವಂಥವು. ಎಚ್ಚರಿಕೆ ಮತ್ತು ಪ್ರಯತ್ನದಿಂದಾಗಿ ಇಂತಹ ಅಪಘಾತಗಳನ್ನು ತಪ್ಪಿಸಬಹುದು. ಇನ್ನು ಎಷ್ಟೋ ಸಲ ತಮ್ಮ ಅಚಾತುರ್ಯದಿಂದ ಉಂಟಾದ ಅಪಘಾತಗಳಿಗೆ ಹಣೆಬರಹವೆಂದೋ, ದುರದೃಷ್ಟವೆಂದೋ ಬೇರೆಯವರನ್ನು ನಿಂದಿಸುವ ಕೆಲಸವನ್ನೂ ಮಾಡುತ್ತಾರೆ.

    ಮುಖ್ಯವಾಗಿ ಈಗಿನ ಆಧುನಿಕ ವಾಹನಗಳು ಅತ್ಯುತ್ತಮ ಗುಣಮಟ್ಟದವುಗಳಾಗಿವೆ. ನನ್ನ ಅನುಭವದಲ್ಲಿ ಹೇಳುವುದಾದರೆ, ಸುಮಾರು 1968 ನೇ ಇಸವಿಯಲ್ಲಿ ನನಗೆ ಪ್ರಬುದ್ಧ ವಯಸ್ಸಾಗಿತ್ತು. ವಾಹನಗಳ ಬಗ್ಗೆ ಕುತೂಹಲ, ಆಸಕ್ತಿ ಇದ್ದುದರಿಂದ ಆಗಲೇ ಆಸೆಯ ಕಣ್ಣುಗಳಿಂದ ವಾಹನಗಳನ್ನು ಅವಲೋಕಿಸುತ್ತಿದ್ದೆ. ಅವುಗಳ ಸೂಕ್ಷ್ಮತೆಯನ್ನು ಅರಿತುಕೊಳ್ಳುವ ಅಭ್ಯಾಸ ಮಾಡುತ್ತಿದ್ದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವುದಕ್ಕಿಂತ ಹಿಂದೆ ಹೆಚ್ಚಾಗಿ ವಿದೇಶಿ ವಾಹನಗಳು ಇದ್ದವು. ಆ ಬಳಿಕ ಅಂಬಾಸಿಡರ್, ಫಿಯೆಟ್ ಮತ್ತು ಸ್ಟಾ್ಯಂಡರ್ಡ್ ಎಂಬ ಮೂರು ಕಂಪನಿಗಳು ಮಾತ್ರ ಸ್ವದೇಶೀ ವಾಹನವನ್ನು ತಯಾರಿಸುತ್ತಿದ್ದವು. ಸ್ಕೂಟರ್​ಗಳಲ್ಲಿ ಎರಡು ಮೂರು ಕಂಪನಿಗಳು ಮಾತ್ರ ಇದ್ದವು. ಅವು ಕೂಡ ಬಹಳ ಅಪರೂಪಕ್ಕೆ ಕಾಣಲು ಸಿಗುತ್ತಿತ್ತು. ಅಂಬಾಸಿಡರ್ ಕಾರನ್ನು ಬುಕ್ ಮಾಡಿದರೆ ಅದು ಕೈಸೇರಲು ಆರರಿಂದ ಹತ್ತು ವರ್ಷ ಕಾದದ್ದೂ ಇದೆ. ಸ್ಕೂಟರನ್ನು ಪಡೆಯಲು ಎಂಟರಿಂದ ಹನ್ನೆರಡು ವರ್ಷಗಳ ಕಾಲ ಕಾಯಬೇಕಿತ್ತು. ಆ ಕಾಲದಲ್ಲಿ ವಾಹನಗಳ ಸಂಖ್ಯೆ, ಸರಬರಾಜು ಮತ್ತು ಬಳಕೆಯೂ ಕಡಿಮೆಯಿತ್ತು. ಮತ್ತು ವಾಹನ ಚಲಾಯಿಸುವವರು ಬಹಳ ಜಾಗರೂಕತೆಯಿಂದ, ಶಿಸ್ತಿನಿಂದ ಚಲಾಯಿಸುತ್ತಿದ್ದರು.

    ಸಾಮಾನು ಸರಂಜಾಮುಗಳನ್ನು ಸಾಗಿಸಲು ದೊಡ್ಡ ವಾಹನ ಅಂದರೆ ಲಾರಿಗಳನ್ನು ಬಳಸುತ್ತಿದ್ದರು. ಜನರನ್ನು ಕೊಂಡೊಯ್ಯುವುದಕ್ಕೆ ಮೆಟಾಡೋರ್ ವ್ಯಾನ್​ಗಳು, ಈಗಿನ ಟೆಂಪೊ ಟ್ರಾವೆಲ್ಲರ್​ನಂತಹ ವಾಹನಗಳು ಇದ್ದವು. ಬೆರಳೆಣಿಕೆಯಷ್ಟು ಬಸ್ಸುಗಳು ಸಂಚರಿಸುತ್ತಿದ್ದವು.

    ಆ ಕಾಲದಲ್ಲಿ ವಾಹನಗಳನ್ನು ವರ್ಷಕ್ಕೆ ಎರಡು ಬಾರಿ ಆರ್​ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ಕಚೇರಿಗೆ ತೆಗೆದುಕೊಂಡು ಹೋಗಿ ಓಡಾಟಕ್ಕೆ ಕ್ಷಮತೆ ಹೊಂದಿವೆಯೇ ಎಂದು ಪರೀಕ್ಷೆ ಮಾಡಿಸಬೇಕಾಗುತ್ತಿತ್ತು. ಅಲ್ಲಿ ಅಧಿಕಾರಿಗಳು ವಾಹನದ ಸ್ಥಿತಿ (ಕಂಡೀಶನ್), ಬ್ರೇಕ್, ಗೇರು ಕ್ಲಚ್ಚು ಮುಂತಾದವುಗಳನ್ನು ಪರಿಶೀಲಿಸುತ್ತಿದ್ದರು. ಮುಖ್ಯವಾಗಿ ಸ್ಟೇರಿಂಗ್, ಲೈಟುಗಳು ಸರಿಯಾಗಿ ಕೆಲಸ ಮಾಡುತ್ತವೆಯೇ ಇತ್ಯಾದಿಯನ್ನು ಪರೀಕ್ಷೆ ಮಾಡಿ ಚಾಲನಾ ಅರ್ಹತೆಯ ಬಗ್ಗೆ ಪ್ರಮಾಣಪತ್ರ ಕೊಡುತ್ತಿದ್ದರು. ಅದು ಪಡೆಯದೆ ಇದ್ದರೆ ಚಲಾವಣೆಗೆ ವಾಹನಗಳು ಅರ್ಹವಾಗುತ್ತಿರಲಿಲ್ಲ.

    ಆಗ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹಳೆಯ ಎರಡು ಲಾರಿಗಳಿದ್ದವು. ನಮ್ಮ ಚಾಲಕರು, ‘ಸ್ವಾಮಿ! ವಾಹನ ತಪಾಸಣೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಆದಷ್ಟು ಬೇಗ ರಿಪೇರಿ ಮಾಡಿಸಬೇಕು’ ಎಂಬುದಾಗಿ ಹೇಳುತ್ತಿದ್ದರು. ಆ ಕಾಲದಲ್ಲಿ ತಪಾಸಣೆ ಅಷ್ಟು ಕಟ್ಟುನಿಟ್ಟು ಇದ್ದುದರಿಂದ ವಾಹನ ಚಾಲಕರು ಎಚ್ಚರದಿಂದಿರುತ್ತಿದ್ದರು. ವಾಹನದ ಬಣ್ಣ ಮಾಸಿದ್ದರೆ ಅದನ್ನು ಸರಿಮಾಡಿಸುತ್ತಿದ್ದರು.

    ಕಾಲಕ್ರಮೇಣ ಹೊಸ ತಂತ್ರಜ್ಞಾನಗಳ ಅನ್ವೇಷಣೆಯಾಯಿತು. ವಾಹನದ ಗುಣಮಟ್ಟ ಉತ್ತಮವಾಗುತ್ತಾ ಹೋಯಿತು. ವರ್ಷಾನುಗಟ್ಟಲೆ ಕಳೆದರೂ ಕಾರು ಸ್ವಿಚ್ ಹಾಕಿದ ತಕ್ಷಣ ಪ್ರಾರಂಭವಾಗುತ್ತದೆ. ಅಲ್ಲದೆ ಈಗಿನ ವಾಹನಗಳಿಗೆ ಬೇರೆ ಯಾವುದೇ ಪರಿಶೀಲನೆ ಅಷ್ಟು ಅಗತ್ಯವಿಲ. ಯಾವಾಗಲೊಮ್ಮೆ ಆಯಿಲ್ ಪರಿಶೀಲನೆಯನ್ನು ಸರ್ವಿಸ್​ನವರೇ ಮಾಡುತ್ತಾರೆ. ನಮ್ಮ ವಾಹನದ ಪೂರ್ಣ ಇತಿಹಾಸ ಈಗಿನ ಸಾಫ್ಟ್​ವೇರ್​ನಲ್ಲಿ ಸಿಗುತ್ತದೆ. ಸುಮಾರು 40 ವರ್ಷಕ್ಕೆ ಹಿಂದೆ ಜಾಹೀರಾತೊಂದು ಬರುತ್ತಿತ್ತು. ‘ನೀರು, ಆಯಿಲ್ ಚೆಕ್ ಮಾಡದೆ ಗ್ರೀಸ್ ಹಾಕದೆ ಓಡಿಸುವಂತಹ ವಾಹನವನ್ನು ನಾವು ಸಿದ್ಧ ಮಾಡುತ್ತಿದ್ದೇವೆ. ವಾಹನವನ್ನು ತೆಗೆದುಕೊಂಡು ಮೊದಲ ಹತ್ತು ಸಾವಿರ ಕಿಲೋಮೀಟರ್​ಗೊಮ್ಮೆ ನಮ್ಮ ಶೋರೂಮ್ೆ ಬಂದು ಪರೀಕ್ಷೆ ಮಾಡಿಸಿ ಮತ್ತೆ ಒಂದು ವರ್ಷ ಯಾ ಒಂದು ಲಕ್ಷ ಕಿ.ಮೀ. ಒಳಗಡೆ ಬಂದು ಪರಿಶೀಲನೆ ಮಾಡಿದರೆ ಸಾಕು’ ಎಂಬ ಮರ್ಸಿಡಿಸ್ ಕಾರ್​ನವರ ಜಾಹೀರಾತು ಅದು.

    ಈಗಿನ ವಾಹನಗಳಲ್ಲಿ ಹೆಡ್​ಲೈಟ್ ಯಾವಾಗಲೂ ಉರಿಯುವಂತಹ ವ್ಯವಸ್ಥೆಯೂ ಇದೆ. ಮೊದಲೆಲ್ಲಾ ವಾಹನದ ಲೈಟನ್ನು ಆನ್-ಆಫ್ ಮಾಡಲು ವ್ಯವಸ್ಥೆ ಇರುತ್ತಿತ್ತು. ಈಗ ಸವೋಚ್ಚ ನ್ಯಾಯಾಲಯದ ತೀರ್ವನದಂತೆ ಯಾವಾಗಲೂ ಅಂದರೆ ಹಗಲಿನಲ್ಲೂ ಹೆಡ್​ಲೈಟ್ ಉರಿಯುತ್ತಿರಬೇಕು. ವಿದೇಶಗಳಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆಯೇ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ವ್ಯವಸ್ಥೆ ಉತ್ತಮವಾದದ್ದು, ವಿಶೇಷವಾಗಿ ಅಪಘಾತ ತಡೆಯುವುದಕ್ಕೆ ಅನುಕೂಲ. ಮುಂದಿನಿಂದ ಬರುತ್ತಿರುವ ವಾಹನವನ್ನು ಬಹಳ ದೂರದಿಂದಲೇ ಗುರುತಿಸಬಹುದು ಹಾಗೆಯೇ ಹಿಂದುಗಡೆ ಬರುತ್ತಿರುವ ವಾಹನವು ಎಷ್ಟು ಅಂತರದಲ್ಲಿದೆ ಎಂಬುದನ್ನು ನಿರ್ಣಯಿಸುವುದಕ್ಕೆ ಇದು ಅನುಕೂಲವಾಗುತ್ತದೆ. ಆದರೆ ಭಾರತೀಯ ಸಂಚಾರ ವ್ಯವಸ್ಥೆಯಲ್ಲಿ ಈ ಲೈಟನ್ನು ಬಳಕೆ ಮಾಡುವ ಉದ್ದೇಶ ಏನು ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಹಲವು ದ್ವಿಚಕ್ರ ವಾಹನ ಚಾಲಕರು ಕತ್ತಲಾದ ಬಳಿಕವೂ ಲೈಟ್ ಉರಿಸುವುದಿಲ್ಲ. ಲೈಟ್ ಆನ್ ಆದರೆ ಬ್ಯಾಟರಿ ಖರ್ಚಾಗುತ್ತದೆ ಎಂಬುದು ಕೆಲವರ ಆಲೋಚನೆ. ಆದರೆ ವಾಹನದಲ್ಲಿ ಬ್ಯಾಟರಿ ಚಾರ್ಜ್ ಆಗುವುದರಿಂದ ಆ ಭಯವಿಲ್ಲ. ಆದ್ದರಿಂದ ವಾಹನ ಚಾಲಕರಿಗೆ ಸರಿಯಾದ ತಿಳಿವಳಿಕೆ ನೀಡಿ, ಅಪಘಾತಗಳನ್ನು ನಿಯಂತ್ರಿಸಬೇಕು.

    ಒಮ್ಮೆ ನಾವು ಒಂದು ಹೊಸ ವಾಹನ ಖರೀದಿ ಮಾಡಿದೆವು. ಅದರಲ್ಲಿ ಶಾಶ್ವತವಾಗಿ ಲೈಟ್ ಉರಿಯುತ್ತಲೇ ಇರುವ ವ್ಯವಸ್ಥೆ ಇತ್ತು. ಇಲ್ಲಿಂದ ಬೆಂಗಳೂರಿಗೆ ಹೋಗಬೇಕಾದರೆ ಸುಮಾರು ಐವತ್ತು-ಅರವತ್ತು ಜನ ಎದುರಿನಿಂದ ಬರುವ ವಾಹನದವರು ‘ನಿಮ್ಮ ವಾಹನದ ಲೈಟ್ ಉರಿಯುತ್ತಿದೆ’ ಎಂಬುದಾಗಿ ಕೈ ಸನ್ನೆಯ ಮುಖಾಂತರ ಹೇಳುತ್ತಿದ್ದರು. ಆಗ ನಮ್ಮ ವಾಹನ ಚಾಲಕ ಮುಜುಗರಕ್ಕೆ ಒಳಗಾಗಿ, ‘ಸ್ವಾಮಿ! ಲೈಟನ್ನು ತೆಗೆಸಿಬಿಡಲೇ?’ ಎಂದು ಪ್ರಶ್ನಿಸಿದ. ‘ಬೇಡ. ಮುಂದೆ ಇದು ಎಲ್ಲರಿಗೂ ಅಭ್ಯಾಸವಾಗಲಿ’ ಎಂಬುದಾಗಿ ಹೇಳಿದ್ದೆ.

    ಅಪಘಾತರಹಿತವಾಗಿ ವಾಹನ ಓಡಿಸಬೇಕಾದರೆ ಚಾಲಕರು ನಿಯಮಗಳ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿರಬೇಕು. ‘ಅತಿ ಸರ್ವತ್ರ ವರ್ಜಯೇತ್’ ಎಂಬಂತೆ ಅತ್ಯಂತ ವೇಗದ ಚಾಲನೆ ಒಳ್ಳೆಯದಲ್ಲ. ಅದರೊಂದಿಗೆ ರಸ್ತೆ ನಿಯಮಗಳನ್ನು ಪಾಲಿಸಬೇಕು. ಸರ್ಕಾರ ಈ ದಿಸೆಯಲ್ಲಿ ತೀವ್ರವಾದ ಎಚ್ಚರಿಕೆ ವಹಿಸಬೇಕು ಮತ್ತು ಅಪಘಾತವಾದಾಗ ಏಕಾಯಿತು ಎಂಬ ಮೂಲಾಂಶವನ್ನು ಶೋಧಿಸಬೇಕು. ಅಪಘಾತ ಮಾಡದೆ ಇದ್ದ ಹಾಗೆ ಮತ್ತು ಅಪಘಾತರಹಿತ ಚಾಲಕರನ್ನು ಪ್ರೋತ್ಸಾಹಿಸುವ ಮಾರ್ಗೇಪಾಯಗಳನ್ನು ಕಂಡುಹಿಡಿಯಬೇಕು. ಚಾಲಕರು ತಪ್ಪೆಸಗಿದರೆ ಅವರನ್ನು ತೀವ್ರವಾಗಿ ದಂಡಿಸುವ ವ್ಯವಸ್ಥೆ ಬರಬೇಕು. ಹಾಗೆಯೇ ತಮ್ಮ ತಪ್ಪಿಲ್ಲದೆ ಅಪಘಾತದಲ್ಲಿ ನೋವುಂಡವರಿಗೆ ಸಹಾಯ ನೀಡಬೇಕು.

    ಎಷ್ಟೋ ಜನರು ಅಪಘಾತದಿಂದ ಸಮಸ್ಯೆಗೆ ಒಳಗಾಗಿ ಶ್ರೀಕ್ಷೇತ್ರಕ್ಕೆ ಬರುತ್ತಾರೆ. ಆಸ್ಪತ್ರೆಯ ಬಿಲ್ ಭರಿಸಲು ಸಾಧ್ಯವಾಗದಷ್ಟು ಆಗಿರುತ್ತದೆ. ಅಕಸ್ಮಾತ್ ತಲೆಗೆ ಪೆಟ್ಟು ಬಿದ್ದು ಮಿದುಳಿಗೆ ತೊಂದರೆಯಾಗಿದ್ದರೆ ಬಹುದೊಡ್ಡ ಸಮಸ್ಯೆ. ಅಂತಹ ವ್ಯಕ್ತಿಯ ಕುಟುಂಬ ಆರ್ಥಿಕ ಮುಗ್ಗಟ್ಟಿನಿಂದ ಕೊರಗಬೇಕಾಗಬಹುದು. ನನಗೆ ತಿಳಿದ ಒಂದು ಪ್ರಸಂಗ. ಲಾಕ್​ಡೌನ್ ಸಂದರ್ಭದಲ್ಲಿ ಸ್ಕೂಟರಿಗೆ ಬೈಕ್ ಡಿಕ್ಕಿ ಹೊಡೆಯಿತು. ಆಸ್ಪತ್ರೆಯಲ್ಲಿ ಎಂಟು ಗಂಟೆಗೂ ಮಿಕ್ಕಿ ನಾಲ್ಕು ಮಂದಿ ವಿಶೇಷ ತಜ್ಞ ವೈದ್ಯರು ಚಿಕಿತ್ಸೆ ನೀಡಿ ಯಮಲೋಕದ ಬಾಗಿಲಿನಿಂದ ಹಿಂದೆ ಕರೆದುಕೊಂಡರು. ಬಿಲ್ ಕೇವಲ ಹತ್ತು ಲಕ್ಷ ರೂಪಾಯಿ! ಹಾಗಾಗಿ ಆಸ್ಪತ್ರೆಯ ಬಿಲ್ಲುಗಳಿಗೆ ವಿಮಾ ಕಂಪನಿಯವರು ತಕ್ಷಣ ಪರಿಹಾರ ಒದಗಿಸಬೇಕು. ಆಸ್ಪತ್ರೆಯ ಚಿಕಿತ್ಸೆ ಪೂರ್ಣವಾಗುವವರೆಗೆ ಕಾಯದೆ ಅಂದಾಜು ಖರ್ಚನ್ನು ತರಿಸಿಕೊಂಡು ಅದಕ್ಕೆ ಪರಿಹಾರ ಒದಗಿಸುವುದು ಉತ್ತಮ. ಇಂತಹ ಅನೇಕ ಸೃಜನಾತ್ಮಕವಾದ ಪರಿಹಾರಗಳನ್ನು ಕಂಡುಕೊಂಡರೆ ಮಾತ್ರ ವಾಹನದ ಅಪಘಾತ ಮತ್ತು ಅದರಿಂದ ಆಗುವ ಹಾನಿಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

    ಇತ್ತೀಚೆಗೆ ಕೇಂದ್ರ ಸರ್ಕಾರ ವಾಹನ ಸಂಚಾರದ ನಿಯಮಾವಳಿ ಪ್ರಕಟಿಸಿ, ತಪ್ಪು ಮಾಡಿದವರಿಗೆ ದಂಡನೆಯ ವಿವರ ಕೊಟ್ಟಿತು. ಈ ಮಾಹಿತಿಯನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಹಾಗೂ ನೇತ್ರಾವತಿ ನದೀತೀರದಲ್ಲಿ ದೊಡ್ಡ ಬೋರ್ಡ್​ನಲ್ಲಿ ಪ್ರಕಟಿಸಲಾಗಿದೆ. ಅದನ್ನು ಓದುವ ಆಸಕ್ತಿಯಾಗಲಿ, ಕುತೂಹಲವಾಗಲಿ ವಾಹನ ಬಳಕೆದಾರರಲ್ಲಿ ಕಂಡುಬರುತ್ತಿಲ್ಲ. ಅಂತೂ ಈ ಕಾನೂನುಗಳು ಜಾರಿಯಾದರೆ ಉತ್ತಮ. ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಚಾಲನಾ ನಿಯಮಗಳನ್ನು ಅರಿತುಕೊಂಡ ಚಾಲಕನಿಂದ ಮಾನವನ ದೌರ್ಬಲ್ಯದಿಂದ ಉಂಟಾಗುವ ಅಪಘಾತಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ‘ಜಂತೂನಾಂ ನರಜನ್ಮ ದುರ್ಲಭಂ’ ಎಂಬಂತೆ ದುರ್ಲಭವಾದ ಈ ಮನುಷ್ಯಶರೀರವನ್ನು ಮತ್ತು ಮನುಷ್ಯಜನ್ಮವನ್ನು ಅಪಘಾತಕ್ಕೆ ಒಡ್ಡಿಕೊಳ್ಳದೇ ಎಲ್ಲರೂ ಜಾಗರೂಕತೆಯಿಂದ ವಾಹನದೊಂದಿಗೆ ವ್ಯವಹರಿಸಬೇಕು ಎಂಬುದು ನನ್ನ ಕೋರಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts