More

    ಇ-ಶ್ರಮ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

    ಗುಂಡ್ಲುಪೇಟೆ: ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಯೋಜನೆಯು ವರದಾನವಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ನಿರೀಕ್ಷಕ ಆರ್.ನಾರಾಯಣ ಮೂರ್ತಿ ಹೇಳಿದರು.

    ಪಟ್ಟಣದ ತಾಲೂಕು ಆಡಳಿತ ಸೌಧದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಶನಿವಾರ ಆಯೋಜಿಸಿದ್ದ ಇ-ಶ್ರಮ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸಂಘಟಿತ ವರ್ಗಕ್ಕೆ ಸೇರುವ ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ಯೋಜನೆಯಡಿ ಸರ್ಕಾರ ಅಪಘಾತ ವಿಮೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡುತ್ತಿದೆ. ಪತ್ರಿಕಾ ವಿತರಕರು ನಿತ್ಯ ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚಲು ದ್ವಿಚಕ್ರ ವಾಹನಗಳನ್ನೇ ಬಳಸುತ್ತಿದ್ದು, ಈ ಸಂದರ್ಭದಲ್ಲಿ ಅಪಘಾತಕ್ಕೊಳಗಾಗುವ ಪ್ರಕರಣಗಳು ಸಂಭವಿಸುತ್ತಿವೆ. ಕೆಲವೊಮ್ಮೆ ಜೀವಕ್ಕೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂಥವರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಇ-ಶ್ರಮ ಯೋಜನೆ ಆರಂಭಿಸಿ ನೋಂದಾಯಿಸಲಾಗುತ್ತಿದೆ ಎಂದರು.
    ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂಪಾಯಿವರೆಗೆ ವಿಮಾ ಸೌಲಭ್ಯ, ಶಾಶ್ವತ ದುರ್ಬಲತೆಗೆ ಒಳಗಾದರೆ 2 ಲಕ್ಷ ರೂ. ಹಾಗೂ ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಇಲ್ಲವೇ, ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ 1 ಲಕ್ಷ ರೂಪಾಯಿವರೆಗೆ ಆಸ್ಪತ್ರೆ ವೆಚ್ಚವನ್ನು ಮರುಪಾವತಿ ಮಾಡಲಾಗುವುದು ಎಂದರು.

    ಕಾರ್ಮಿಕ ಮಂಡಳಿಯ ಸಿಬ್ಬಂದಿ ಗಣೇಶ್ ಮಾತನಾಡಿ, ಹೃದ್ರೋಗ, ಕಿಡ್ನಿ ಜೋಡಣೆ, ಇಎನ್‌ಟಿ, ನೇತ್ರ, ಕ್ಯಾನ್ಸರ್, ಮೂಳೆ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಗರ್ಭಕೋಶ, ಅಸ್ತಮಾ, ಗರ್ಭಪಾತ, ಪಿತ್ತಕೋಶದ ತೊಂದರೆಗಳು, ಮಿದುಳಿನ ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಅಲ್ಸರ್, ಕಿಡ್ನಿ, ನರರೋಗ ಚಿಕಿತ್ಸೆ, ವ್ಯಾಸ್ಕುಲರ್ ಚಿಕಿತ್ಸೆ, ಅನ್ನನಾಳ, ಕರುಳಿನ ಚಿಕಿತ್ಸೆ ಸಂಬಂಧಿಸಿದಂತೆ ಫಲಾನುಭವಿಗೆ ವೈದ್ಯಕೀಯ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಸಹ ಈ ಯೋಜನೆ ವ್ಯಾಪ್ತಿಗೆ ಬರುತ್ತಿದ್ದಾರೆ. ಫಲಾನುಭವಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ವೈದ್ಯಕೀಯ ಸೌಲಭ್ಯ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ 1 ವರ್ಷದೊಳಗೆ ಇ-ಶ್ರಮ ಪೋರ್ಟಲ್‌ನಲ್ಲಿ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚ ಪಾವತಿಗೆ ಅರ್ಜಿ ಸಲ್ಲಿಸಬೇಕು ಎಂದು ವಿವರ ನೀಡಿದರು.

    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಿರ್ದೇಶಕರಾದ ಚಿಕ್ಕತುಪ್ಪೂರು ಎಂ.ಮಲ್ಲು, ರಂಗೂಪುರ ಸುರೇಶ್, ಸಿದ್ದಪ್ಪ, ಭೈರೇಶ್ ಗಾಣಿಗ್, ಅಂಕಹಳ್ಳಿ ವೀರಭದ್ರಪ್ಪ, ವಿಜಯವಾಣಿ ಪ್ರತಿನಿಧಿಗಳಾದ ಸೋಮಶೇಖರ್, ನಿರ್ಮಲಾ, ಪುಟ್ಟಸ್ವಾಮಿ, ಪ್ರಸಾದ್, ರಾಘವೇಂದ್ರ, ಮಂಜು, ರಾಜನಾಯ್ಕ, ಮಹದೇವಸ್ವಾಮಿ, ವೆಂಕಟೇಶ್, ದೀಪು, ನಿಂಗಪ್ಪ, ಸಿದ್ದರಾಜು, ಪ್ರಸರಣ ವಿಭಾಗದ ಪುಟ್ಟರಾಜು ಸೇರಿದಂತೆ ಹಲವರು ಇದ್ದರು.

    ಉತ್ತಮ ಸ್ಪಂದನೆ: ಮಾಧ್ಯಮ ಪ್ರತಿನಿಧಿಗಳು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ವಿವಿಧ ಪತ್ರಿಕೆಗಳ ಏಜೆಂಟರು ಹಾಗೂ ವಿತರಕರು ಸೇರಿ ಸುಮಾರು 25ಕ್ಕೂ ಹೆಚ್ಚು ಜನರು ಅಭಿಯಾನದಲ್ಲಿ ಭಾಗವಹಿಸಿ ಇ-ಶ್ರಮ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡರು. ಕಾರ್ಮಿಕ ಇಲಾಖೆಯ ನೌಕರ ಶ್ರೀಧರ್, ಎಂ.ಸವಿತಾ ಅವರು ಶನಿವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನೋಂದಣಿ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts