More

    ಅನುದಾನ ಬಿಡುಗಡೆಗೆ ಕ್ರಮ ವಹಿಸಿ

    ರಟ್ಟಿಹಳ್ಳಿ: ರಟ್ಟಿಹಳ್ಳಿ ತಾಲೂಕು ಪಂಚಾಯಿತಿ ವ್ಯಾಪ್ತಿಗೆ 19 ಗ್ರಾಪಂ ಒಳಪಡುತ್ತವೆ. ಹಿರೇಕೆರೂರು ತಾಲೂಕಿಗೆ ಬಿಡುಗಡೆಯಾಗುವ ಅನುದಾನ ರಟ್ಟಿಹಳ್ಳಿ ತಾಲೂಕಿಗೆ ಸಮಾನವಾಗಿ ಹಂಚಿಕೆಯಾಗಬೇಕು. ವಿವಿಧ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ತಾಪಂ ಇಒ ಕೆ.ಸಿ. ಮೋಹನಕುಮಾರ ಸೂಚನೆ ನೀಡಿದರು.

    ಪಟ್ಟಣದ ತಾಪಂನಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಹಿರೇಕೆರೂರು ತಾಲೂಕಿಗೆ ಮಾತ್ರ ಸೀಮಿತಗೊಳಿಸಬೇಡಿ ಎಂದರು.

    ಪಟ್ಟಣದ ತೋಟಗಾರಿಕೆ ಇಲಾಖೆಗೆ ಸೇರಿದ 6 ಎಕರೆ 21 ಗುಂಟೆ ಪ್ರದೇಶವಿದೆ. ಈ ಪ್ರದೇಶದಿಂದ ಸರ್ಕಾರಕ್ಕೆ ಯಾವುದೇ ಆದಾಯ ಇಲ್ಲ. ಹೀಗಾಗಿ ಅದನ್ನು ತಾಲೂಕು ಕಚೇರಿಗಳು ಮತ್ತು ತಾಪಂ ಕಟ್ಟಡ ನಿರ್ವಣಕ್ಕೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಸದಸ್ಯರು ಮನವಿ ಮಾಡಿದರು. ಅಧ್ಯಕ್ಷ ಬಂಗಾರಪ್ಪ ಈಕ್ಕೇರಿ ಅವರು ಠರಾವು ಮಾಡಲು ಆದೇಶಿಸಿದರು.

    ಮಹೇಶ ಗುಬ್ಬಿ ಮಾತನಾಡಿ, ಮಳಗಿ ಗ್ರಾಮದ ರಸ್ತೆಯ ಎರಡೂ ಬದಿ ಕಸದ ರಾಶಿಯೇ ಬಿದ್ದಿದೆ. ದುರ್ವಾಸನೆಯಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಸ ವಿಲೇವಾರಿಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದರು.

    ಪಟ್ಟಣ ಪಂಚಾಯಿತಿ ಅಧಿಕಾರಿ ಮುಖ್ಯಾಧಿಕಾರಿ ಉಮೇಶ ಗುಡ್ಡದ ಪ್ರತಿಕ್ರಿಯಿಸಿ, ಶೀಘ್ರವೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಹೇಮಣ್ಣ ಮುದರೆಡ್ಡೇರ ಮಾತನಾಡಿ, ತಾಲೂಕಿನ ಕಡೂರ, ಕುಡುಪಲಿ, ಬಡಸಂಗಾಪುರ, ಹುಲ್ಲತ್ತಿ ಗ್ರಾಮಗಳಲ್ಲಿ ಬಸ್​ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು ಎಂದರು.

    ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಮಾತನಾಡಿ, ಕೋವಿಡ್- 19 ಹಿನ್ನೆಲೆಯಲ್ಲಿ ಬಸ್ ಸಂಚಾರ ಕಡಿತವಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

    ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಇಂಜಿನಿಯರ್ ವಿಷ್ಣುಕಾಂತ ಜಂಜೇರ ಮಾತನಾಡಿ, ಜವಲಜೀವನ್ ಯೋಜನೆಯಡಿ ಮೊದಲ ಹಂತದಲ್ಲಿ ಮನೆ-ಮನೆಗೆ ನಳ ಸಂಪರ್ಕ ನೀಡುವ ಕಾಮಗಾರಿಯನ್ನು ತಾಲೂಕಿನ ಮೂರು ಗ್ರಾಮಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

    ಅಧ್ಯಕ್ಷ ಬಂಗಾರಪ್ಪ ಈಕ್ಕೇರಿ ಮಾತನಾಡಿ, ನೂತನ ಗ್ರಾ.ಪಂ. ಸದಸ್ಯರಿಗೆ ಫೆ. 15ರಿಂದ ತರಬೇತಿ ನೀಡಬೇಕಿದೆ. ತರಬೇತಿ ನೀಡಲು ಅವಶ್ಯವಿರುವ ಸಾಮಗ್ರಿ ಈವರೆಗೆ ವಿತರಿಸಿಲ್ಲ. ಈ ಬಗ್ಗೆ ಇಒ ಗಮನಹರಿಸಬೇಕು ಎಂದು ಹೇಳಿದರು.

    ಉಪಾಧ್ಯಕ್ಷೆ ಸುಜಾತ ಕೊಟಗಿಮನಿ, ಸದಸ್ಯರಾದ ಮೆಹಬೂಬಸಾಬ ಮುಲ್ಲಾ, ಚಂದ್ರಪ್ಪ ಸಾಸ್ವೆಹಳ್ಳಿ, ರೇವಣಪ್ಪ ಎರೇಹಳ್ಳಿ, ಸುಧಾಪಾಟೀಲ, ಪಿಡಿಒ ಪ್ರಕಾಶ ಸುಂಕಾಪುರ, ಲೆಕ್ಕಾಧಿಕಾರಿ ಪ್ರಾಣೇಶ, ಬಿಇಒ ಎಲ್.ಸಿದ್ದಲಿಂಗಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಂಗಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts