More

    ಮುಖ್ಯಾಧಿಕಾರಿಗೆ ತಹಸೀಲ್ದಾರ್ ನೋಟಿಸ್

    ಶಿಗ್ಗಾಂವಿ: ಪಟ್ಟಣದಲ್ಲಿ ನಡೆಯುತ್ತಿರುವ ವಾರದ ಸಂತೆ ತೆರವುಗೊಳಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಪ್ರಕಾಶ ಕುದರಿ ಅವರು ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ನೋಟಿಸ್ ಜಾರಿ ಮಾಡಿದ ಅಪರೂಪದ ಪ್ರಕರಣ ಬುಧವಾರ ನಡೆದಿದೆ.

    ಕೋವಿಡ್-19 ಸೋಂಕು ಹರಡುವ ಭೀತಿ ಇರುವುದರಿಂದ ಸರ್ಕಾರದ ಆದೇಶದ ಮೇರೆಗೆ ಈ ಹಿಂದಿನ ಲಾಕ್​ಡೌನ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ನ. 30ರ ವರೆಗೆ ವಿಸ್ತರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ, ನೀವು ನಮ್ಮ ಕಚೇರಿಯಿಂದ ಅನುಮತಿ ಪಡೆಯದೆ ಸಂತೆ ನಡೆಯಲು ಅನುಮತಿ ನೀಡಿದ್ದೀರಿ. ಇದರಿಂದಾಗಿ ಕೋವಿಡ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಬುಧವಾರ ಪಟ್ಟಣದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಪೊಲೀಸರ ಸಹಾಯ ಪಡೆದು ತೆರವುಗೊಳಿಸಬೇಕು. ತಪ್ಪಿದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ತಮ್ಮ ಮೇಲೆ ಕಾನೂನು ಕ್ರಮ ಜರುಗಿಸಲು ಮೇಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ನೋಟಿಸ್​ನಲ್ಲಿ ತಿಳಿಸಿದ್ದಾರೆ.

    ಪಟ್ಟಣದ ವ್ಯಾಪಾರಸ್ಥರು ಮತ್ತು ಸ್ಥಳೀಯರು ಬುಧವಾರ ನಡೆಯುವ ವಾರದ ಸಂತೆಯನ್ನು ನಡೆಸಲು ಅನುಮತಿ ಕೊಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರು. ಆದರೆ, ಪುರಸಭೆಯಿಂದ ಸಂತೆ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ರೈತರು, ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಸಂತೆ ನಡೆಸುತ್ತಿದ್ದಾರೆ.

    | ಮಲ್ಲಯ್ಯ ಹಿರೇಮಠ, ಶಿಗ್ಗಾಂವಿ ಪುರಸಭೆ ಮುಖ್ಯಾಧಿಕಾರಿ

    ವಾರದ ಸಂತೆ ವಿಚಾರದಲ್ಲಿ ತಹಸೀಲ್ದಾರ್ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಶಿಗ್ಗಾಂವಿ ಹೊರತುಪಡಿಸಿ ಬಂಕಾಪುರ, ದುಂಡಸಿ, ತಡಸ, ಹುಲಗೂರ ಸೇರಿದಂತೆ ತಾಲೂಕಿನ ಬಹುತೇಕ ಪಟ್ಟಣಗಳಲ್ಲಿ ಸಂತೆ ನಡೆದರೂ ಕ್ರಮಕ್ಕೆ ಮುಂದಾಗಿಲ್ಲ. ಶಿಗ್ಗಾಂವಿ ಸಂತೆ ಮಾತ್ರ ಬಂದ್ ಮಾಡುವುದರಿಂದ ಗ್ರಾಹಕರಿಗೆ ಮಾತ್ರವಲ್ಲದೆ, ತರಕಾರಿ ಬೆಳೆದ ರೈತರಿಗೂ ನಷ್ಟವಾಗುತ್ತಿದೆ. ಇದರಿಂದ ಸಂತೆಯಲ್ಲಿ ಅಗ್ಗದ ಬೆಲೆಗೆ ಸಿಗುತ್ತಿದ್ದ ತರಕಾರಿಗೆ ಉಳಿದ ದಿನಗಳಲ್ಲಿ ದುಪ್ಪಟ್ಟು ಹಣಕ್ಕೆ ಕೊಳ್ಳಬೇಕಾಗಿದೆ. ಇದರಿಂದ ತರಕಾರಿ ಬೆಲೆ ಗಗನಕ್ಕೇರಿದೆ. ಆದ್ದರಿಂದ ತಾಲೂಕು ಆಡಳಿತ ಕೊವೀಡ್ ನಿಯಮಾವಳಿಯಂತೆ ವಾರದ ಸಂತೆಯನ್ನು ನಡೆಸಲು ಅನುಮತಿ ನೀಡಬೇಕು.

    | ಶ್ರೀಕಾಂತ ಬುಳ್ಳಕ್ಕನವರ, ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts