More

    ಕದಿರೇಗೌಡನಪಾಳ್ಯದಲ್ಲಿ ತಹಸೀಲ್ದಾರ್ ಅಂತ್ಯಕ್ರಿಯೆ ; ಸರ್ವೇ ವೇಳೆ ಹತ್ಯೆಗೀಡಾಗಿದ್ದ ಅಧಿಕಾರಿ

    ತುಮಕೂರು: ಜಮೀನು ಸರ್ವೇಗೆ ವೇಳೆ ಗುರುವಾರ ಹತ್ಯೆಗೀಡಾಗಿದ್ದ ಕೋಲಾರ ಜಿಲ್ಲೆ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಅಂತಿಮ ಸಂಸ್ಕಾರ ಗುಬ್ಬಿ ತಾಲೂಕಿನ ಕದಿರೇಗೌಡನಪಾಳ್ಯದಲ್ಲಿ ಶುಕ್ರವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ ಬಳಿಕ ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದರು. ಹಿಂದು ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

    ಪತ್ನಿ ತವರೂರಲ್ಲಿ ಅಂತ್ಯಕ್ರಿಯೆ: ಬಿ.ಕೆ.ಚಂದ್ರಮೌಳೇಶ್ವರ ಅವರ ಅಂತ್ಯಕ್ರಿಯೆ ಪತ್ನಿ ಹೇಮಲತಾ ತವರೂರು ಕದಿರೇಗೌಡನಪಾಳ್ಯದಲ್ಲಿ ನಡೆದಿದ್ದು, ಕೋಲಾರ ಉಸ್ತುವಾರಿ ಸಚಿವ ಎಚ್.ನಾಗೇಶ್, ಕೋಲಾರ ಸಂಸದ ಎಸ್. ಮುನಿಸ್ವಾಮಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ತುಮಕೂರು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ಉಪವಿಭಾಗಾಧಿಕಾರಿ ವಿ.ಅಜಯ್, ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್‌ಗಳಾದ ಡಾ.ಪ್ರದೀಪ್ ಕುಮಾರ್, ಮೋಹನ್‌ಕುಮಾರ್ ಸೇರಿ ಅಧಿಕಾರಿಗಳು, ಕುಟುಂಬಸ್ಥರು, ಸ್ನೇಹಿತರು ಭಾಗವಹಿಸಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

    ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ: ಪಾರ್ಥಿವ ಶರೀರವನ್ನು ತುಮಕೂರಿನ ಸಿದ್ಧಗಂಗಾ ಬಡಾವಣೆಯಲ್ಲಿರುವ ಚಂದ್ರಮೌಳೇಶ್ವರ ಅವರ ಸ್ವಂತ ನಿವಾಸದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹರಾಜು ಸೇರಿ ಗಣ್ಯರು, ಸ್ನೇಹಿತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

    ಹುಟ್ಟೂರು ಬುಕ್ಕಪಟ್ಟಣ: ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹುಟ್ಟೂರು ಕೊರಟಗೆರೆ ತಾಲೂಕು ಬುಕ್ಕಪಟ್ಟಣ. ಪತ್ನಿ ಹೇಮಲತಾ, ಪುತ್ರ ಪವನ್, ತಾಯಿ ಪಾಪಮ್ಮ ಜತೆ ತುಮಕೂರಿನ ಸಿದ್ಧಗಂಗಾ ಬಡಾವಣೆಯಲ್ಲಿ ವಾಸವಿದ್ದರು. ಪತ್ನಿ ಒತ್ತಾಸೆಯಂತೆ ಅವರ ತವರೂರು ಕದಿರೇಗೌಡನಪಾಳ್ಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts