More

    ತಡಸ-ಶಿವಮೊಗ್ಗ ಹೆದ್ದಾರಿ ಅವಘಡಗಳ ಕೂಪ

    ಹಾನಗಲ್ಲ: ಪಟ್ಟಣದಲ್ಲಿ ಹಾಯ್ದು ಹೋಗಿರುವ ತಡಸ-ಶಿವಮೊಗ್ಗ ಹೆದ್ದಾರಿಯಲ್ಲಿ ಪ್ರತಿದಿನವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ಈ ರಸ್ತೆಯಲ್ಲಿನ ಉಬ್ಬು-ತಗ್ಗುಗಳು ವಾಹನ ಸವಾರರಿಗೆ ಜೀವಭಯ ಹುಟ್ಟಿಸಿವೆ.
    ಲೋಕೋಪಯೋಗಿ ಇಲಾಖೆ ಅಂಗಸಂಸ್ಥೆಯಾದ ಕೆಶಿಪ್ ತಡಸ-ಶಿವಮೊಗ್ಗ ಹೆದ್ದಾರಿ ಕಾಮಗಾರಿ ನಡೆಸಿದೆ. ಕೆಶಿಪ್ ತಡಸದಿಂದ ಪಟ್ಟಣದ ಹೊಸಬಸ್ ನಿಲ್ದಾಣದವರೆಗೆ ಮತ್ತು ಪಟ್ಟಣದ ರಂಜನಿ ಚಿತ್ರಮಂದಿರದಿಂದ ಶಿವಮೊಗ್ಗದವರೆಗೆ ಹೆದ್ದಾರಿ ನಿರ್ಮಾಣ ಮಾಡಿದೆ. ಆದರೆ, ಪಟ್ಟಣದ ಮಧ್ಯಭಾಗದಲ್ಲಿನ ಸುಮಾರು ಒಂದು ಕಿ.ಮೀ. ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ.
    ಕಾಮಗಾರಿ ಕೈ ಬಿಟ್ಟಿದ್ದೇಕೆ?: ಪಟ್ಟಣದ ಮಧ್ಯದಲ್ಲಿರುವ ಹೆದ್ದಾರಿ ವಿಸ್ತರಿಸಲು ಮುಂದಾದರೆ ನೂರಾರು ವಾಣಿಜ್ಯ ಮಳಿಗೆಗಳು, ಮನೆಗಳ ಮುಂಭಾಗಗಳನ್ನು ನೆಲಸಮ ಮಾಡಬೇಕು. ಇದಕ್ಕಾಗಿ ಮಾಲೀಕರ ಒಪ್ಪಿಗೆಯ ಜತೆಗೆ ಪರಿಹಾರವನ್ನು ವಿತರಿಸಬೇಕು. ಹೀಗಾಗಿ ಕೆಶಿಪ್ ರಸ್ತೆ ಅಗಲೀಕರಣ ಕಾಮಗಾರಿ ಕೈಬಿಟ್ಟಿದೆ. ಆದರೂ, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆ ನಡೆದು ಕಾಮಗಾರಿ ಕೈಗೊಳ್ಳುವ ಅನಿವಾರ್ಯತೆ ಕುರಿತು ಆಸ್ತಿಗಳ ಮಾಲೀಕರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿತ್ತು. ಈ ಸಮಯದಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇಚ್ಛಾಶಕ್ತಿ ತೋರಲಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
    ಜೀವ ಕಳೆದುಕೊಳ್ಳುವ ಜನಸಾಮಾನ್ಯರು: ಸುಧಾರಣೆಯಾಗದೇ ಉಳಿದಿರುವ ಒಂದು ಕಿ.ಮೀ. ರಸ್ತೆಯನ್ನು ಕಳೆದ ಐದಾರು ವರ್ಷಗಳಲ್ಲಿ ಗ್ರಾಮದೇವಿ ಜಾತ್ರೆಯ ಅಂಗವಾಗಿ ಎರಡು ಬಾರಿ ಡಾಂಬರೀಕರಣ ಮಾಡಲಾಗಿದೆ. ಇದಾದ ನಂತರದ ಕೆಲ ದಿನಗಳಲ್ಲೇ ಡಾಂಬರ್ ಹಿಗ್ಗಿ-ಕುಗ್ಗಿದಂತಾಗಿ ರಸ್ತೆಗಳಲ್ಲಿ ಗುಡ್ಡೆಗಳಾಗಿ ಮಾರ್ಪಟ್ಟಿದೆ. ಡಾಂಬರ್ ರಸ್ತೆ ವಿಭಜಕಗಳಿಗೆ ಒದ್ದು ನಿಂತಿವೆ. ಇವು ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕುತ್ತು ತಂದಿಟ್ಟಿವೆ. ಕಳೆದ ಆರು ತಿಂಗಳ ಹಿಂದಷ್ಟೇ ಕಲ್ಲಭಾವಿ ಸಮೀಪದ ರಸ್ತೆಯಲ್ಲಿ ಬಾಲಕಿ ಲಾರಿ ಅಡಿ ಸಿಲುಕಿ ಎರಡೂ ಕಾಲು ಕಳೆದುಕೊಂಡಿದ್ದಾಳೆ. ಮೂರು ದಿನಗಳ ಹಿಂದಷ್ಟೇ ಬೈಕ್ ಅಪಘಾತದಲ್ಲಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಹತ್ತಾರು ಜನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದರೂ, ಈ ರಸ್ತೆಯಲ್ಲಿನ ಉಬ್ಬು-ತಗ್ಗುಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗುತ್ತಿಲ್ಲ.
    5 ಕೋಟಿ ರೂ. ಮಂಜೂರು: 1 ಕಿ.ಮೀ. ರಸ್ತೆಯನ್ನು ಕಾಂಕ್ರೀಟೀಕರಣಕ್ಕೆ ಅಂದಾಜು 10 ಕೋಟಿ ರೂಪಾಯಿ ಅನುದಾನದ ಅಗತ್ಯವಿದ್ದುದರಿಂದ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಕಳೆದ ಫೆಬ್ರವರಿಯಲ್ಲಿ 5 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ಆದರೆ, ಕಾಮಗಾರಿ ಇನ್ನೂ ಆರಂಭಿಸಿಲ್ಲ. ಪ್ರತಿ ಬಾರಿ ಕುಸಿಯುತ್ತಿರುವ ರಸ್ತೆಯ ಸಮಸ್ಯೆಯ ಇತ್ಯರ್ಥಕ್ಕಾಗಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಹಾನಗಲ್ಲ ಬಂದ್‌ಗೆ ಕರೆ: ಪಟ್ಟಣದ ರಸ್ತೆ ನಿರ್ಮಾಣದಲ್ಲಿನ ವಿಳಂಬ ಧೋರಣೆ, ನಿರ್ಲಕ್ಷೃ ಖಂಡಿಸಿ ಮೇ 31ರಂದು ಹಾನಗಲ್ಲ ಬಂದ್‌ಗೆ ಕರೆ ಕೊಡಲಾಗಿದೆ. ಈ ಕುರಿತು ಸೋಮವಾರ ರಾತ್ರಿ ಸಾರ್ವಜನಿಕ ಸಭೆ ನಡೆದಿದೆ. ಅಪಘಾತಗಳ ಗಂಭೀರತೆಯನ್ನು ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸುವ ಉದ್ದೇಶದಿಂದ ಹಾನಗಲ್ಲ ನಗರಾಭಿವೃದ್ಧಿ ವೇದಿಕೆಯಡಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಕುಮಾರೇಶ್ವರ ಮಠದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಸಾರ್ವಜನಿಕರು ಮನವಿ ಅರ್ಪಿಸಲಿದ್ದಾರೆ.

    ಹಾನಗಲ್ಲ ಮಧ್ಯದಲ್ಲಿನ ತಡಸ-ಶಿವಮೊಗ್ಗ ರಸ್ತೆ ಹಾಳಾಗಿ ಸುಮಾರು ವರ್ಷಗಳೇ ಕಳೆದಿವೆ. ಬಹಳಷ್ಟು ಸಾವು-ನೋವುಗಳೂ ಸಂಭವಿಸಿವೆ. ಕಾಟಾಚಾರಕ್ಕೆ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಈ ರಸ್ತೆಯಲ್ಲಿ ಸಾವಿರಾರು ಬೃಹತ್ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಈ ರಸ್ತೆ ಅಗಲಗೊಳಿಸಬೇಕಿದೆ. ಇದ್ದಷ್ಟನ್ನೇ ಕಾಂಕ್ರೀಟ್ ರಸ್ತೆ ಮಾಡುವುದು ಅವೈಜ್ಞಾನಿಕವಾಗುತ್ತದೆ. ರಸ್ತೆ ಅಗಲೀಕರಣವೇ ನಮ್ಮ ಮುಖ್ಯ ಬೇಡಿಕೆಯಾಗಿದೆ.
    I ಮೇಕಾಜಿ ಕಲಾಲ, ನಾಗರಿಕ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts