More

    ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿ

    ಮುಂಬೈ: ಕರೊನಾ ಅಬ್ಬರದಿಂದಾಗಿ ಕಳೆದ 11 ತಿಂಗಳಿಂದ ಭಾರತದಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆಗೆ ಭಾನುವಾರ ಚಾಲನೆ ಸಿಗಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿಯೂ ದೇಶೀಯ ಕ್ರಿಕೆಟ್ ಪ್ರಿಯರ ಮನತಣಿಸಲು ಸಜ್ಜಾಗಿದೆ. ಲೀಗ್ ಹಂತದ ಪಂದ್ಯಗಳು ದೇಶದ 6 ಪಂದ್ಯಗಳಲ್ಲಿ ನಡೆಯಲಿವೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಫ್ರಾಂಚೈಸಿಗಳನ್ನು ಗಮನಸೆಳೆಯಲು ಆಟಗಾರರು ಉತ್ತಮ ವೇದಿಕೆ ಇದಾಗಿದೆ.

    * ಕರ್ನಾಟಕಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ತವಕ
    ತವರಿನಲ್ಲಿ ಆಡುತ್ತಿರುವ ಲಾಭ ಪಡೆಯುತ್ತಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ತಮಿಳುನಾಡು ತಂಡವನ್ನು ರೋಚಕವಾಗಿ ಮಣಿಸಿ ಪ್ರಶಸ್ತಿ ಜಯಿಸಿದ್ದ ಕರ್ನಾಟಕ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ. ಪ್ರಮುಖರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ಬಳಗ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಬ್ಯಾಟಿಂಗ್ ವಿಭಾಗಗಕ್ಕೆ ಹೋಲಿಸಿದರೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಕರ್ನಾಟಕ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಅನುಭವಿ ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್, ವಿ.ಕೌಶಿಕ್, ಪ್ರವೀಣ್ ದುಬೆ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದೆ.

    * ಶ್ರೀಶಾಂತ್, ರೈನಾ ವಾಪಸ್
    ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ 7 ವರ್ಷ ನಿಷೇಧದ ಶಿಕ್ಷೆ ಅನುಭವಿಸಿರುವ ಮಾಜಿ ವೇಗಿ ಎಸ್.ಶ್ರೀಶಾಂತ್ ಕೇರಳ ಪರ ಕಣಕ್ಕಿಳಿಯಲು ಸಜ್ಜಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಸುರೇಶ್ ರೈನಾ ತವರು ಉತ್ತರ ಪ್ರದೇಶ ತಂಡದ ಪರ ಆಡಲಿದ್ದಾರೆ.

    * ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರರು
    ಶಿಖರ್ ಧವನ್, ಇಶಾಂತ್ ಶರ್ಮ (ಇಬ್ಬರೂ ದೆಹಲಿ), ಸುರೇಶ್ ರೈನಾ, ಭುವನೇಶ್ವರ್ ಕುಮಾರ್ (ಯು.ಪಿ), ದಿನೇಶ್ ಕಾರ್ತಿಕ್ (ತಮಿಳುನಾಡು), ಇಶಾನ್ ಕಿಶನ್ (ಜಾರ್ಖಂಡ್), ಸಂಜು ಸ್ಯಾಮ್ಸನ್ (ಕೇರಳ), ಸೂರ್ಯಕುಮಾರ್ ಯಾದವ್ (ಮುಂಬೈ).

    * ಹಿರಿಯರಿಗೆ ಸತ್ವ ಪರೀಕ್ಷೆ
    ಐಪಿಎಲ್ ಆಟಗಾರರ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನಸೆಳೆಯುವುದರ ಜತೆಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಕ್ರಿಕೆಟ್ ಸರಣಿಗೆ ಆಯ್ಕೆಯಾಗುವ ದೃಷ್ಟಿಯಿಂದ ಮುಂಬೈ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್, ಇಶಾನ್ ಕಿಶನ್ ಸೇರಿದಂತೆ ಕೆಲ ಆಟಗಾರರಿಗೆ ಈ ಟೂರ್ನಿ ಸವಾಲಾಗಿದೆ. ಅಲ್ಲದೆ, ಇದೇ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ತಯಾರಿಯಾಗಲಿದೆ.

    * 11 ತಿಂಗಳ ಬಳಿಕ ಕ್ರಿಕೆಟ್ ಚಟುವಟಿಕೆ
    ಕರೊನಾ ವೈರಸ್ ಅಬ್ಬರದಿಂದಾಗಿ ಕಳೆದ 11 ತಿಂಗಳಿಂದ ಭಾರತದಲ್ಲಿ ನಿಂತ ನೀರಾಗಿದ್ದ ಕ್ರಿಕೆಟ್ ಚಟುವಟಿಕೆ ಇಂದಿನಿಂದ ಪುನರಾರಂಭಗೊಳ್ಳಲಿದೆ. ಕಳೆದ ಮಾರ್ಚ್ ಮೊದಲ ವಾರದಲ್ಲಿ ಸೌರಾಷ್ಟ್ರ-ಬಂಗಾಳ ನಡುವಿನ ರಣಜಿ ಟ್ರೋಫಿಯೇ ಭಾರತದಲ್ಲಿ ನಡೆದ ಕಡೇ ಪ್ರಮುಖ ಪಂದ್ಯವಾಗಿದೆ.

    * ಯುವಕರಿಗೆ ಸವಾಲು
    ಋತುರಾಜ್ ಗಾಯಕ್ವಾಡ್, ಪ್ರಿಯಂ ಗಾರ್ಗ್, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ದೇವದತ್ ಪಡಿಕಲ್, ರ್ಸ್ರಾಜ್ ಖಾನ್, ಆರ್.ಸಾಯಿ ಕಿಶೋರ್, ಅರ್ಜುನ್ ತೆಂಡುಲ್ಕರ್‌ರಂಥ ಸ್ಟಾರ್ ಯುವ ಪಡೆಗೆ ಗಮನ ಸೆಳೆಯಲು ಸೂಕ್ತ ವೇದಿಕೆ ಲಭಿಸಿದೆ. ಅರ್ಜುನ್ ತೆಂಡುಲ್ಕರ್ ಹೊರತುಪಡಿಸಿ ಉಳಿದವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದು, ಒಂದು ವೇಳೆ ಫ್ರಾಂಚೈಸಿಗಳು ತಂಡದಿಂದ ಬಿಡುಗಡೆ ಮಾಡಿದರೂ ಇತರ ತಂಡಗಳು ಕೊಂಡುಕೊಳ್ಳಲು ಮುಂದೆ ಬರಬಹುದು.

    ಕರ್ನಾಟಕ ತಂಡದ ವೇಳಾಪಟ್ಟಿ
    ಎದುರಾಳಿ, ದಿನಾಂಕ,
    ಜಮ್ಮುಕಾಶ್ಮೀರ, ಜ.10
    ಪಂಜಾಬ್, ಜ.12
    ತ್ರಿಪುರ, ಜ.14
    ರೈಲ್ವೇಸ್, ಜ.16
    ಉತ್ತರ ಪ್ರದೇಶ, ಜ.18

    * 38: ಟೂರ್ನಿಯಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸುತ್ತಿದ್ದು, ತಲಾ 5 ತಂಡಗಳಂತೆ 5 ಎಲೈಟ್ ಗುಂಪುಗಳನ್ನು ರಚಿಸಲಾಗಿದ್ದರೆ, 8 ತಂಡಗಳು ಒಳಗೊಂಡ ಪ್ಲೇಟ್ ಗುಂಪು ರಚಿಸಲಾಗಿದೆ. ದೇಶದ ಆರು ನಗರಗಳಲ್ಲಿ ಪಂದ್ಯಗಳು ನಡೆಯುತ್ತಿವೆ. ಬೆಂಗಳೂರು, ಮುಂಬೈ, ವಡೋದರ, ಇಂದೋರ್, ಕೋಲ್ಕತ, ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ನಾಕೌಟ್ ಹಾಗೂ ಫೈನಲ್ ಪಂದ್ಯಗಳು ಅಹಮದಾಬಾದ್‌ನಲ್ಲಿ ಆಯೋಜಿಸಲಾಗುತ್ತಿದೆ.

    * ಟೂರ್ನಿ ಸ್ವರೂಪ
    5 ಎಲೈಟ್ ಗುಂಪುಗಳು ಹಾಗೂ 1 ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೇರಲಿವೆ. ಹೀಗೆ 6 ತಂಡಗಳು ಎಂಟರಘಟ್ಟಕ್ಕೇರಿದರೆ, ಎಲೈಟ್ ಗುಂಪಿನಲ್ಲಿ ಉತ್ತಮ ರನ್‌ರೇಟ್ ಹೊಂದಿರುವ 2 ತಂಡಗಳು ಮುಂದಿನ ಸುತ್ತಿಗೇರಲಿವೆ.

    ಎಲೈಟ್ ಎ ಗುಂಪು: ಜಮ್ಮುಕಾಶ್ಮೀರ, ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್, ತ್ರಿಪುರ (ಸ್ಥಳ: ಬೆಂಗಳೂರು)

    ಎಲೈಟ್ ಬಿ ಗುಂಪು: ಒಡಿಶಾ, ಬಂಗಾಳ, ಜಾರ್ಖಂಡ್, ತಮಿಳುನಾಡು, ಅಸ್ಸಾಂ, ಹೈದರಾಬಾದ್ (ಸ್ಥಳ: ಕೋಲ್ಕತ)

    ಎಲೈಟ್ ಸಿ ಗುಂಪು: ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಬರೋಡ, ಉತ್ತರಾಖಂಡ್ (ಸ್ಥಳ: ವಡೋದರ)

    ಎಲೈಟ್ ಡಿ ಗುಂಪು: ಸರ್ವೀಸಸ್, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ, ಮಧ್ಯ ಪ್ರದೇಶ, ಗೋವಾ (ಸ್ಥಳ: ಇಂದೋರ್)

    ಎಲೈಟ್ ಇ ಗುಂಪು: ಹರಿಯಾಣ, ಆಂಧ್ರ ಪ್ರದೇಶ, ದೆಹಲಿ, ಮುಂಬೈ, ಕೇರಳ, ಪುದುಚೇರಿ (ಸ್ಥಳ: ಮುಂಬೈ)

    ಪ್ಲೇಟ್ ಗುಂಪು: ಚಂಡೀಗಢ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ (ಸ್ಥಳ: ಚೆನ್ನೈ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts