More

    ಪರ್ಸನಲ್​ ಫೈನಾನ್ಸ್​ನ ಪ್ರಮುಖ ಅಸ್ತ್ರ ಎಸ್​ಡಬ್ಲ್ಯುಪಿ

    ನಾಗರಾಜ ಬಿ.ಜಿ. (ಮ್ಯೂಚುವಲ್​ ಫಂಡ್​ ಡಿಸ್ಟ್ರಿಬ್ಯೂಟರ್)

    ನಿರಂತರ- ನಿಯಮಿತ ಆದಾಯ ನಿಶ್ಚಿತಪರ್ಸನಲ್​ ಫೈನಾನ್ಸ್​ (ವೈಯಕ್ತಿಕ ಹಣಕಾಸು) ಲೋಕದಲ್ಲಿ ಸಿಸ್ಟಮೆಟಿಕ್ ವಿತ್​ಡ್ರಾವಲ್​ ಪ್ಲಾನ್​ (ಎಸ್​ಡಬ್ಲ್ಯುಪಿ- ವ್ಯವಸ್ಥಿತ ವಾಪಸಾತಿ ಯೋಜನೆ) ಒಂದು ಅತ್ಯಂತ ಪ್ರಮುಖ ಸಾಧನ. ವ್ಯಕ್ತಿಗಳು ತಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ತನ್ಮೂಲಕ ನಿಯಮಿತವಾಗಿ ಆದಾಯ ಸೃಷ್ಟಿಸಿಕೊಳ್ಳಲು ಇದು ಬಹಳ ಅನುಕೂಲಕಾರಿ.

    ಹಾಗಿದ್ದರೆ ಏನಿದು ಎಸ್​ಡಬ್ಲ್ಯುಪಿ?:
    ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಈ ಎಲ್ಲಾ ಹಣವನ್ನು ಒಂದೇ ಬಾರಿಗೆ ಹಿಂದಕ್ಕೆ ಪಡೆಯುವುದು ಅಥವಾ ಸಂಪೂರ್ಣ ಅಲ್ಲಿಯೇ ಬಿಟ್ಟುಬಿಡುವುದು ಒಂದಿಷ್ಟು ರಿಸ್ಕಿ ಆಗುತ್ತದೆ. ಇದರ ಬದಲಾಗಿ ನೀವು ಎಸ್​ಡಬ್ಲ್ಯುಪಿ ಆಯ್ಕೆ ಮಾಡಬಹುದು. ನಿಯಮಿತವಾಗಿ ಕಾಲಕಾಲಕ್ಕೆ ಅಂದರೆ, ಮಾಸಿಕವಾಗಿ ಇಲ್ಲವೇ ತ್ರೈಮಾಸಿಕವಾಗಿ ಅಥವಾ ವಾರ್ಷಿಕವಾಗಿ ನಿಮ್ಮ ಹೂಡಿಕೆಗಳಿಂದ ಒಂದಿಷ್ಟು ಹಣ ಹಿಂದೆಗೆದುಕೊಳ್ಳುತ್ತೀರಿ. ಈ ರೀತಿ ಕಾಲಕಾಲಕ್ಕೆ ನೀವು ಎಷ್ಟು ಹಣ ಹಿಂಪಡೆಯಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಲು ಎಸ್​ಡಬ್ಲ್ಯುಪಿ ಅವಕಾಶ ಕಲ್ಪಿಸುತ್ತದೆ.

    ಎಸ್​ಡಬ್ಲ್ಯುಪಿಯ ಮೊದಲ ಪ್ರಯೋಜನವೆಂದರೆ ಇದು ನಿಮಗೆ ಒಂದು ಆಂದಾಜಿಸಬಹುದಾದ ಇನ್​ಕಂ ಸೋರ್ಸ್​ (ಆದಾಯದ ಮೂಲ) ಒದಗಿಸುತ್ತದೆ. ಇದು ನಿಮ್ಮ ಹೂಡಿಕೆಯಿಂದಾಗಿ ಭತ್ಯೆ ಅಥವಾ ವೇತನ ರೀತಿಯ ಲಾಭ ನೀಡುವಂತಿರುತ್ತದೆ. ಬಿಲ್‌ ಪಾವತಿ, ದಿನಸಿ ಖರೀದಿ ಅಥವಾ ಯಾವುದೇ ಇತರ ಹಣಕಾಸಿನ ಬದ್ಧತೆಗಳಿಗೆ ಅನುಗುಣವಾಗಿ ನಿಮ್ಮ ನಿಯಮಿತ ವೆಚ್ಚಗಳನ್ನು ಸರಿದೂಗಿಸಲು ನೀವು ಈ ಹಣ ಬಳಸಬಹುದು. ಈ ನಿಯಮಿತ ಆದಾಯವು ನಿವೃತ್ತಿಯ ಸಮಯದಲ್ಲಿ ಹೆಚ್ಚು ಸಹಾಯಕವಾಗಬಹುದು. ಏಕೆಂದರೆ, ಇದು ಪಿಂಚಣಿಯಂತಹ ಇತರ ಆದಾಯದ ಮೂಲಗಳಿಗೆ ಪೂರಕವಾಗಿ ಹಣ ಒದಗಿಸುತ್ತದೆ.

    ಮತ್ತೊಂದಿಷ್ಟು ಪ್ರಯೋಜನಗಳು:
    ಎಸ್​ಡಬ್ಲ್ಯುಪಿಯು ಇನ್ನೂ ಅನೇಕ ಗಮನಾರ್ಹ ಪ್ರಯೋಜನಗಳನ್ನು ಹೊಂದಿದೆ. ಒಂದಿಷ್ಟು ಹಣ ಹಿಂತೆಗೆದುಕೊಂಡ ನಂತರವೂ ಉಳಿದ ಹೂಡಿಕೆಯು ನಿಮಗಾಗಿ ಕೆಲಸ ಮಾಡುತ್ತಿರುತ್ತದೆ ಹಾಗೂ ಕಾಲಾನಂತರದಲ್ಲಿ ಬೆಳೆಯುತ್ತದೆ. ಒಂದಿಷ್ಟು ಹಣ ಹಿಂತೆಗೆದುಕೊಳ್ಳುವುದು ಮತ್ತು ಮತ್ತಷ್ಟು ಹೂಡಿಕೆಗೆ ಬಿಡುವುದರ ನಡುವೆ ಸಮತೋಲನ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ. ನೀವು ನಿಯಮಿತವಾಗಿ ನಿಗದಿತ ಮೊತ್ತವನ್ನು ಹಿಂತೆಗೆದುಕೊಂಡಾಗ, ಅದು ಬಜೆಟ್‌ಗೆ ಅಂಟಿಕೊಳ್ಳುವಂತೆ ಹಾಗೂ ಅನಗತ್ಯವಾಗಿ ಹೆಚ್ಚು ಖರ್ಚು ಮಾಡದಂತೆ ಪ್ರೇರೇಪಿಸುತ್ತದೆ.

    ನೆನಪಿಟ್ಟುಕೊಳ್ಳಬೇಕಾದ ಸಂಗತಿಗಳು:
    ಆದರೂ ಎಸ್​ಡಬ್ಲ್ಯುಪಿಯಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ನೀವು ಹಿಂತೆಗೆದುಕೊಳ್ಳುವ ಮೊತ್ತವನ್ನು ಎಚ್ಚರಿಕೆಯಿಂದ ಲೆಕ್ಕಹಾಕಬೇಕು. ಅಲ್ಲದೆ, ನಿಮ್ಮ ಹೂಡಿಕೆಗಳನ್ನು ಬೇಗನೆ ಖಾಲಿ ಮಾಡಬಾರದು. ಇದು ನಿಮ್ಮ ಹಣಕಾಸಿನ ಅಗತ್ಯತೆಗಳು ಮತ್ತು ನಿಮ್ಮ ಹೂಡಿಕೆಗಳ ಸಾಮಥ್ರ್ಯದ ನಡುವಿನ ಸಮತೋಲನ ಪ್ರಕ್ರಿಯೆಯಾಗಿದೆ. ಅಲ್ಲದೆ, ನಿಮ್ಮ ಹೂಡಿಕೆಗಳ ಫರ್ಪಾಮೆನ್ಸ್​ ಕೂಡ ನೀವು ಎಷ್ಟು ಸಮಯದವರೆಗೆ ಸುಸ್ಥಿರವಾಗಿ ಹಣ ಹಿಂಪಡೆಯಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

    ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯವಸ್ಥಿತ ಹೂಡಿಕೆ ಹಣ ಹಿಂತೆಗೆದುಕೊಳ್ಳುವ ಈ ಯೋಜನೆಯು ನಿಮ್ಮ ಹೂಡಿಕೆಗಳಿಂದ ಸ್ಥಿರವಾದ ಆದಾಯದ ಯೋಜನೆ ರೂಪಿಸಿಕೊಳ್ಳಲು ಒಂದು ಉಪಯುಕ್ತ ಮಾರ್ಗವಾಗಿದೆ. ಇದು ನಿಮ್ಮ ಹಣಕಾಸು ನಿರ್ವಹಣೆ ಸುಲಭಗೊಳಿಸುತ್ತದೆ. ನಿಮ್ಮ ಜೀವನದಲ್ಲಿ ಆರ್ಥಿಕ ಭದ್ರತೆಗೆ ನೆರವಾಗುತ್ತದೆ. ಇಲ್ಲಿ ನೀವು ನಿಮ್ಮ ಹೂಡಿಕೆಗಳಿಂದ ನಿಯಮಿತವಾಗಿ ಗಳಿಸುತ್ತೀರಿ. ಜತೆಜತೆಗೆ ಉಳಿದ ಹೂಡಿಕೆಗಳಿಂದ ಲಾಭ ಬೆಳೆಯುತ್ತಲೇ ಇರುತ್ತದೆ. ನೀವು ಎಸ್​ಡಬ್ಲ್ಯುಪಿ ಹೂಡಿಕೆ ಮಾಡುವುದನ್ನು ಆಲೋಚಿಸುತ್ತಿದ್ದರೆ, ನಿಮ್ಮ ನಿರ್ದಿಷ್ಟ ಅಗತ್ಯತೆ ಮತ್ತು ಗುರಿಗಳಿಗೆ ಅನುಗುಣವಾಗಿ ಯೋಜನೆ ರೂಪಿಸಲು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಈಗಲೇ ಹೆಜ್ಜೆ ಹಾಕಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts