More

    ಮೂರುಸಾವಿರ ಮಠದಲ್ಲಿ ಚಿಂತನ ಮಂಥನ ಸಭೆ, ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

    ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತಾವು ಏಕಾಂಗಿಯಾಗಿ ಯಾವುದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ, ಪ್ರಸ್ತುತ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ವರ್ತಮಾನದ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ಸಲುವಾಗಿ ನಾಡಿನ ಮಠಾಧೀಶರ ಸಭೆಯನ್ನು ನಗರದ ಮೂರುಸಾವಿರ ಮಠದ ಶಿವಾನುಭವ ಮಂಟಪದಲ್ಲಿ ಮಾ. 27ರಂದು ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ವೀರಶೈವ ಲಿಂಗಾಯತ ಅಷ್ಟೇ ಅಲ್ಲ, ಎಲ್ಲ ಸಮಾಜದ ಕಾವಿಧಾರಿಗಳು, ಸನ್ಯಾಸಿಗಳು, ಮಠಾಧೀಶರು ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ. ಮೂರುಸಾವಿರ ಮಠದ ಶ್ರೀಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹಲವು ಮಠಾಧೀಶರು ಪಾಲ್ಗೊಳ್ಳುವರು. ಇದು ಆಂತರಿಕ ಸಭೆಯಾಗಿದ್ದು, ನಂತರದಲ್ಲಿ ಸಭೆಯ ನಿರ್ಣಯಗಳನ್ನು ಬಹಿರಂಗ ಪಡಿಸಲಾಗುವುದು ಎಂದರು.

    ಕರ್ನಾಟಕದಲ್ಲಿ ಹಿಂದೆ ಅನ್ಯಾಯಗಳು ನಡೆದಾಗ, ವೀರಶೈವ ಲಿಂಗಾಯತ ಪ್ರತ್ಯೇಕತೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಂದರ್ಭ ಹೀಗೆ ಹಲವು ಸಂದರ್ಭಗಳಲ್ಲಿ ಮಠಾಧೀಶರು ಒಂದುಗೂಡಿ ಸಮಾಜದ ಅಭಿಪ್ರಾಯ ತಿಳಿಸುವ ಕೆಲಸ ಮಾಡಿದ್ದೇವೆ. ಮಹದಾಯಿ ವಿಚಾರದಲ್ಲಿಯೂ ಹೋರಾಟದ ಜತೆಗೆ ಅಭಿಪ್ರಾಯವನ್ನೂ ಮಂಡಿಸಿದ್ದೇವೆ ಎಂದರು.

    ರಾಜಕೀಯ ಸೇರಿ ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದಾಗ ಮಠಾಧೀಶರು, ಸನ್ಯಾಸಿಗಳು ಧ್ವನಿ ಎತ್ತಿರುವ ಬಗ್ಗೆ ಇತಿಹಾಸದಲ್ಲಿ ಉದಾಹರಣೆಗಳಿವೆ. ಹಾಗಾಗಿ ಇದು ಒಂದು ಸಮಾಜಕ್ಕೆ ಸೀಮಿತವಾದ ಸಭೆಯಲ್ಲ, ಎಲ್ಲ ಮಠಾಧೀಶರು ಭಾಗವಹಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಬಹುದು ಎಂದರು.

    ಉಹಾಪೋಹಕ್ಕೆ ಉತ್ತರಿಸುವುದಿಲ್ಲ:
    ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ವೈಯಕ್ತಿಕವಾಗಿ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯ ಮಠಾಧಿಪತಿಗಳಿಗಿಲ್ಲ. ಇಂತಹ ಊಹಾಪೋಹಗಳಿಗೆ ನಾನು ಉತ್ತರಿಸುವುದಿಲ್ಲ. ಚಿಂತನ ಮಂಥನ ಸಭೆಯಲ್ಲಿ ಈ ವಿಷಯವೂ ಚರ್ಚೆಗೆ ಬರಬಹುದು ಎಂದು ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

    ಜನಪ್ರತಿನಿಧಿಗಳಿಗೆ ಚುನಾವಣೆಯ ಬೆದರಿಕೆ ಹಾಕಿ ಹಣ ಪಡೆಯುವ ಅವಶ್ಯಕತೆ ನಮಗಿಲ್ಲ. ಇಂತಹ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಾಮಾಣಿಕರಿಗೆ ಇಂತಹ ಅಪವಾದ ಸಹಜ. ಅದರಲ್ಲಿಯೂ ನನ್ನ ಮೇಲೆ ಬಹಳ ಆರೋಪಗಳು ಬರುತ್ತವೆ. ಆದರೆ ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಮಠಾಧೀಶರು ಸಮಾಜದ ಮಕ್ಕಳು. ಎಲ್ಲ ಆರೋಪಗಳನ್ನು ಎದುರಿಸುವ ಶಕ್ತಿ ನಮಗಿದೆ ಎಂದರು.

    ರಾಜಕಾರಣಿಗಳಿಗೆ ಅಧಿಕಾರ, ಹಣದ ಮದ ಹೆಚ್ಚಾದಾಗ ಚಾಟಿ ಬೀಸಬೇಕಾಗುತ್ತದೆ. ಆ ಮೂಲಕ ಅವರನ್ನು ಸರಿ ದಾರಿಗೆ ತರುವ ಕೆಲಸವನ್ನು ಮಠಾಧೀಶರು ಮಾಡಲಿದ್ದಾರೆ. ಅದು ಸ್ವಾಮೀಜಿಗಳ ಕರ್ತವ್ಯ ಕೂಡ ಹೌದು ಎಂದು ಹೇಳಿದರು.

    ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸವಣೂರು ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಮಂಟೂರಿನ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಸದಾಶಿವಪೇಟೆಯ ಶ್ರೀಗದಿಗೇಶ್ವರ ಸ್ವಾಮೀಜಿ, ವಿಜಯಪುರದ ಶ್ರೀ ಸಿದ್ಧಲಿಂಗ ದೇವರು, ಬೊಮ್ಮನಳ್ಳಿಯ ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ವಿರೇಶ ಸೊಬರದಮಠ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts