More

  23ರಂದು ಸ್ವಯಂವರ ಪಾರ್ವತಿ ಯಾಗ

  ರಾಣೆಬೆನ್ನೂರ: ವಾರದಿಂದ ವಾರಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತ ಸಾಗಿರುವ ‘ಸ್ವಯಂವರ ಪಾರ್ವತಿ’ ಯಾಗ ಈ ಬಾರಿ ರಾಣೆಬೆನ್ನೂರಿನ ಸಿದ್ಧೇಶ್ವರ ನಗರದ ಮಿನಿ ವಿಧಾನಸೌಧ ಬಳಿಯಿರುವ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಜ. 23ರಂದು ಆಯೋಜಿಸಲಾಗಿದೆ.

  ಕನ್ನಡದ ನಂ.1 ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ 24*7 ನ್ಯೂಸ್ ಮತ್ತು ಕನ್ನಡ ಮ್ಯಾಟ್ರಿಮೋನಿಯಿಂದ ಹಮ್ಮಿಕೊಂಡಿರುವ ಯಾಗವು ಅಂದು ಬೆಳಗ್ಗೆ 9.30 ಗಂಟೆಗೆ ಆರಂಭವಾಗಲಿದೆ. 11.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

  ಪಾರ್ವತಿ ಮತ್ತು ಪರಮೇಶ್ವರ ಕಳಶ ಸ್ಥಾಪನೆ ಮಾಡಿ, ಭಾವೀ ವಧು ಮತ್ತು ವರರಿಗೆ ಸ್ವಯಂವರ ಮಂತ್ರ ಪಠಣ ಮಾಡಿಸಲಾಗುತ್ತದೆ. ಬಳಿಕ ಅದೇ ಮಂತ್ರವನ್ನು ಉಚ್ಛರಿಸುತ್ತ ಹೋಮ ಮಾಡಿಸಲಾಗುತ್ತದೆ. ವಿವಾಹಕ್ಕೆ ತೊಡಕು ಉಂಟಾಗಿರುವವರ ದೋಷಗಳೆಲ್ಲ ಅಗ್ನಿಯಲ್ಲಿ ದಹಿಸಿ ನಿವಾರಣೆಯಾಗಲಿ ಎಂಬುದು ಇದರ ಉದ್ದೇಶ.

  ಯಾಗದ ಹಿನ್ನೆಲೆ: ಪರಮೇಶ್ವರನೊಂದಿಗೆ ಪಾರ್ವತಿ ಜಗಳವಾಡಿ ಭೂಲೋಕಕ್ಕೆ ಬರುತ್ತಾಳೆ. ಪಾರ್ವತಿಯನ್ನು ಶಿವ ಮರೆತು ಏಕಾಂತಕ್ಕೆ ಹೊರಟು ಹೋಗುತ್ತಾನೆ. ಇದರಿಂದ ಲಯ ಕಾರ್ಯಗಳೆಲ್ಲ ಅಸ್ತವ್ಯಸ್ತವಾಗುತ್ತದೆ. ಪರಿಸ್ಥಿತಿ ಅರಿತ ಋಷಿ ಮತ್ತು ದೇವತೆಗಳು ಶಿವನನ್ನು ಪ್ರಾರ್ಥನೆ ಮೂಲಕ ಎಚ್ಚರಿಸಲು ಪ್ರಯತ್ನಿಸುತ್ತಾರೆ. ಇತ್ತ ಭೂಲೋಕದಲ್ಲಿದ್ದ ಪಾರ್ವತಿ ಶಿವಲಿಂಗ ರಚನೆ ಮಾಡಿ, ತಪಸ್ಸು ಮಾಡುತ್ತಿರುತ್ತಾಳೆ. ಈ ವೇಳೆ ನಾರದರು ಆಗಮಿಸಿ, ಸುಮ್ಮನೆ ತಪಸ್ಸು ಮಾಡಬಾರದು ಎಂದು ತಿಳಿಸಿ ಸ್ವಯಂವರ ಮಂತ್ರ ಉಪದೇಶ ಮಾಡುತ್ತಾರೆ.

  ಈ ಮಂತ್ರವನ್ನು ಪಾರ್ವತಿ ಜಪಿಸಿದಾಗ ಈಶ್ವರ ಎಚ್ಚರವಾಗುತ್ತಾನೆ. ಭೂ ಲೋಕಕ್ಕೆ ಆಗಮಿಸಿದ ಶಿವ, ಪಾರ್ವತಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಮದುವೆಯಾಗದ ಕನ್ಯೆಯರಿಗೆ ಪೂರ್ವ ಜನ್ಮದ ದೋಷಗಳು ಕಲ್ಯಾಣ ಕಾರ್ಯಕ್ಕೆ ತಡೆ ಉಂಟು ಮಾಡುತ್ತವೆ. ಅಂಥವರು ಪಾರ್ವತಿ ಸ್ವಯಂವರ ಹೋಮ ಮಾಡಿಸಿ, ಪ್ರಸಾದ ಸ್ವೀಕರಿಸಿದರೆ ವಿವಾಹವಾಗುತ್ತದೆ ಎಂಬ ನಂಬಿಕೆಯಿದೆ.

  ಯಾಗದಲ್ಲಿ ಪಾಲ್ಗೊಳ್ಳಲು ಸಂರ್ಪಸಿ: ಭಾವಿ ವಧು-ವರರು ಹೆಚ್ಚಿನ ವಿವರಕ್ಕೆ ಮೊ. ಸಂಖ್ಯೆ 7092877888 ಸಂರ್ಪಸಬಹುದು. ಯಾಗದಲ್ಲಿ ಪಾಲ್ಗೊಳ್ಳುವವರು ಭಾವಚಿತ್ರ ಹಾಗೂ ಜಾತಕವನ್ನು ತರುವಂತೆ ಕೋರಲಾಗಿದೆ.

  ಬರುವುದು ಹೇಗೆ…?: ಶ್ರೀ ಸಿದ್ಧೇಶ್ವರ ದೇವಸ್ಥಾನ ರಾಣೆಬೆನ್ನೂರಿನ ಪಿ.ಬಿ. ರಸ್ತೆಯ ಮಿನಿ ವಿಧಾನಸೌಧದ ಎದುರುಗಡೆಯಿದೆ. ಇಲ್ಲಿಗೆ ಬಸ್, ಆಟೋ ವ್ಯವಸ್ಥೆಯಿದೆ. ಹಾವೇರಿ, ಬ್ಯಾಡಗಿ, ಶಿಗ್ಗಾಂವಿ, ಸವಣೂರ ಕಡೆಯಿಂದ ಬಸ್ ಮೂಲಕ ಬರುವವರು ‘ಸಿದ್ಧೇಶ್ವರ ನಗರ’ ಬಸ್ ನಿಲ್ದಾಣದಲ್ಲಿ ಇಳಿದುಕೊಂಡರೆ ಎದುರುಗಡೆ ದೇವಸ್ಥಾನ ಕಾಣುತ್ತದೆ. ಗುತ್ತಲ, ಹರಿಹರ, ಕುಮಾರಪಟ್ಟಣ, ಕವಲೆತ್ತು, ಮಾಕನೂರ, ಹಿರೇಕೆರೂರ, ರಟ್ಟಿಹಳ್ಳಿ, ಮಾಸೂರು, ತುಮ್ಮಿನಕಟ್ಟಿ, ಹಲಗೇರಿ, ಕುಪ್ಪೇಲೂರ ಕಡೆಯಿಂದ ಬರುವವರು ನೇರವಾಗಿ ರಾಣೆಬೆನ್ನೂರ ಬಸ್ ನಿಲ್ದಾಣಕ್ಕೆ ಬಂದರೆ, ಅಲ್ಲಿಂದ ಆಟೋ ಮೂಲಕ 5 ನಿಮಿಷದಲ್ಲಿ ದೇವಸ್ಥಾನ ತಲುಪಬಹುದು. ಬೆಳಗ್ಗೆ 9 ಗಂಟೆಯೊಳಗೆ ದೇವಸ್ಥಾನದ ಆವರಣದಲ್ಲಿರಬೇಕು.

  ಸ್ವಯಂವರ ಪಾರ್ವತಿ ಯಾಗದ ಹೆಸರೇ ಸೂಚಿಸುವಂತೆ ಇದೊಂದು ಮದುವೆ ಪ್ರಕಾರ. ಮದುವೆಯಾಗದ ಹುಡುಗ, ಹುಡುಗಿಯರು ವರಾನ್ವೇಷಣೆ, ಕನ್ಯಾನ್ವೇಷಣೆಯಲ್ಲಿದ್ದಾಗ ದೈವ ಬಲದಿಂದ ಯೋಗ್ಯ ಜೀವನಸಂಗಾತಿ ಹೊಂದುವಂತಾಗಲು ಈ ಯಾಗವು ಅತ್ಯಂತ ಶ್ರೇಷ್ಠವಾಗಿದೆ.

  | ರಾಘವೇಂದ್ರ ಎಸ್. ಕುಲಕರ್ಣಿ, ಅರ್ಚಕರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts