More

    ಹರಾಜು ಅಧೀಕ್ಷಕನ ಅಮಾನತಿಗೆ ಪಟ್ಟು


    ಮೈಸೂರು : ತಂಬಾಕು ಬೆಳೆಗಾರನಿಗೆ ಶೂ ತೋರಿಸಿ ಅವಮಾನಿಸಿರುವ ಹನಗೋಡು ಹೋಬಳಿಯ ಚಿಲ್ಕುಂದ ಹರಾಜು ಮಾರುಕಟ್ಟೆ ಅಧೀಕ್ಷಕ ಬ್ರಿಜ್‌ಭೂಷಣ್ ಅವರನ್ನು ಅಮಾನತು ಮಾಡಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.


    ಹನಗೋಡು ಹೋಬಳಿಯ ಚಿಲ್ಕುಂದ ಹರಾಜು ಮಾರುಕಟ್ಟೆ ಪ್ರಾಂಗಣದಲ್ಲಿ ಕ್ರಾಪ್ ಕಮಿಟಿ ಅಧ್ಯಕ್ಷ ಎ.ಜೆ.ಕಾಳೇಗೌಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ರೈತ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.


    ಮಾರುಕಟ್ಟೆ ಅಧೀಕ್ಷಕ ಬ್ರಿಜ್‌ಭೂಷಣ್ ವಿರುದ್ಧ ತನಿಖೆ ನಡೆಸಿ ತಕ್ಷಣವೇ ಅಮಾನತುಗೊಳಿಸಬೇಕು. ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಕೆಲಸ ನಿರ್ವಹಿಸದಂತೆ ನಿರ್ಬಂಧಿಸಬೇಕು. ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.


    ರೈತ ಮುಖಂಡರ ಅಭಿಪ್ರಾಯ ಪಡೆದು ಮಾತನಾಡಿದ ಕ್ರಾಪ್ ಕಮಿಟಿ ಅಧ್ಯಕ್ಷ ಎ.ಜೆ.ಕಾಳೇಗೌಡ ಮಾತನಾಡಿ, ಬ್ರಿಜ್‌ಭೂಷಣ್ ರೈತರ ಕ್ಷಮೆ ಯಾಚಿಸಬೇಕು. ಈ ಬಗ್ಗೆ ಇಂದೇ ಕ್ರಮ ಜರುಗಿಸುವ ಜತೆಗೆ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣರಾವ್ ಅವರಿಗೆ ಮನವಿ ಸಲ್ಲಿಸಿದರು.


    ಮನವಿ ಸ್ವೀಕರಿಸಿದ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣರಾವ್ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದೆಂದು ಭರವಸೆ ನೀಡಿದರು.


    ಇದಕ್ಕೂ ಮುನ್ನ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ರೈತನಿಗೆ ಶೂ ತೋರಿಸುವ ಮೂಲಕ ರೈತ ಸಮೂಹಕ್ಕೆ ಅವಮಾನ ಮಾಡಿದ್ದಾರೆ. ಇಂತಹವರ ಮೇಲೆ ಕ್ರಮವಾಗಲೇಬೇಕು. ನಮ್ಮ ಬೇಡಿಕೆಯನ್ನು ತಕ್ಷಣವೇ ಈಡೇರಿಸದಿದ್ದಲ್ಲಿ ರೈತರು ಮತ್ತೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.


    ಮುಖಂಡರಾದ ಅಗ್ರಹಾರ ರಾಮೇಗೌಡ, ಚಂದ್ರೇಗೌಡ, ರವಿಕುಮಾರ್, ಮಂಜುನಾಥ್, ಪಿ.ಪಿ.ಸ್ವಾಮಿಗೌಡ, ಮರೀಗೌಡ, ವೆಂಕಟೇಶ್, ಬೀರೇಗೌಡ, ಕುಪ್ಪೆ ನವೀನ್‌ಕುಮಾರ್, ದೇವರಾಜ್, ಶಿವಣ್ಣ, ಶಿವಬಸಪ್ಪ, ವಿಷಕಂಠಪ್ಪ, ಪ್ರಭಾಕರರಾಧ್ಯ, ಶಿವಣ್ಣ, ಮೋದೂರು ಶಿವಣ್ಣೇಗೌಡ, ನಿಲುವಾಗಿಲು ಪ್ರಭಾಕರ್, ಕೆ.ಬಿ.ಜಯಣ್ಣ ಇತರರಿದ್ದರು.

    ತಂಬಾಕು ಮಂಡಳಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ದಿನೇಶ್, ವಿಕ್ರಂರಾಜ್ ಘಟನೆಯನ್ನು ಖಂಡಿಸಿ, ಬ್ರಿಜ್‌ಭೂಷಣ್ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಕಠಿಣ ಕ್ರಮಕೈಗೊಳ್ಳಬೇಕೆಂದು ಮಂಡಳಿಯ ಇ.ಡಿ.ಗೆ ಸೂಚಿಸಿದ್ದೇವೆ. ಮಾರುಕಟ್ಟೆಗಳಲ್ಲಿ ರೈತರಿಗೆ ಮೋಸವಾಗುತ್ತಿರುವ ಹಾಗೂ ಕೆಲ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂಬ ದೂರುಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಭೆಯ ನಿರ್ಣಯದಂತೆ ಹರಾಜು ಮಾರುಕಟ್ಟೆ ಹರಾಜು ಅಧೀಕ್ಷಕ ಬ್ರಿಜ್‌ಭೂಷಣ್ ಘಟನೆಗೆ ಕೈ ಮುಗಿದು ರೈತರ ಕ್ಷಮೆಯಾಚಿಸಿದರು.

    ಘಟನೆ ವಿವರ : ಕೊತ್ತೆಗಾಲದ ಮಂಚನಾಯಕರ ತಂಬಾಕು ಬ್ಯಾರನ್‌ನ ಲೈಸನ್ಸ್ ನವೀಕರಣಗೊಳಿಸುವ ವಿಚಾರದಲ್ಲಿ ತಮ್ಮ ಪುತ್ರ ಕೃಷ್ಣಕುಮಾರ್ ಅವರೊಂದಿಗೆ ವಿವಾದವಿತ್ತು. ನವೀಕರಣಗೊಳಿಸಬಾರದೆಂದು ಕೃಷ್ಣಕುಮಾರ್ ಹರಾಜು ಅಧೀಕ್ಷಕ ಬ್ರಿಜ್‌ಭೂಷಣ್‌ರ ಮೇಲೆ ಒತ್ತಡ ಹಾಕಿದ್ದರು. ಆದರೆ ದಾಖಲಾತಿಗಳು ಕ್ರಮಬದ್ಧವಾಗಿದ್ದರಿಂದ ಲೈಸನ್ಸ್ ನವೀಕರಿಸಿದ್ದರು.


    ಈ ಸಂಬಂದ ಕೃಷ್ಣಕುಮಾರ್ ಹಾಗೂ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್‌ರ ನಡುವೆ ಸಾಕಷ್ಟು ಬಾರಿ ಮಾತಿನ ಚಕಮಕಿ ನಡೆದಿತ್ತು. ಶನಿವಾರ ಕೊತ್ತೆಗಾಲಕ್ಕೆ ಅಧೀಕ್ಷಕ ಬ್ರಿಜ್‌ಭೂಷಣ್ ಕಾರ್ಯನಿಮಿತ್ತ ಭೇಟಿ ನೀಡಿದ್ದ ವೇಳೆ ಕೃಷ್ಣಕುಮಾರ್ ಲೈಸನ್ಸ್ ನವೀಕರಣ ವಿಚಾರ ಪ್ರಸ್ತಾಪಿಸಿ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಅಧೀಕ್ಷಕ ಬ್ರಿಜ್‌ಭೂಷಣ್ ಕಾಲಲಿದ್ದ ಶೂವನ್ನು ಬಿಚ್ಚಿ ಹೊಡೆಯಲು ಮುಂದಾದಾಗ ಅಲ್ಲೇ ಇದ್ದ ಗ್ರಾಮದ ಮುಖಂಡರು ತಡೆದಿದ್ದಾರೆ. ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಘಟನೆ ನಡೆದ ನಂತರ ಅಧೀಕ್ಷಕ ಬ್ರಿಜ್‌ಭೂಷಣ್ ಕೃಷ್ಣಕುಮಾರ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts