More

    ಮುಂದುವರಿದ ಕಾರಂತ ಲೇಔಟ್ ರಚನೆಗೆ ಸರ್ವೇ: ಬಿಡಿಎ ಆಯುಕ್ತರ ಸೂಚನೆ

    ಆರ್​​.ತುಳಸಿಕುಮಾರ್​
    ಬೆಂಗಳೂರು: ಉದ್ದೇಶಿತ ಡಾ. ಕೆ.ಶಿವರಾಮ ಕಾರಂತ ಲೇಔಟ್‌ನಲ್ಲಿ ಸಿವಿಲ್ ಕಾಮಗಾರಿಗಳು ಆರಂಭಿಕ ಹಂತದಲ್ಲಿರುವಾಗಲೇ ಸಾರ್ವಜನಿಕರಿಗೆ ಸೈಟ್ ಹಂಚಿಕೆಗೆ ಮುಂದಾಗಿ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದ ಬಿಡಿಎ, ಇದೀಗ ಮುಂದುವರಿದ ಬಡಾವಣೆಯನ್ನು ರಚಿಸುವ ಸಂಬಂಧ ಸರ್ವೇ ಕಾರ್ಯಕ್ಕೆ ಅತ್ಯುತ್ಸಾಹ ತೋರಿದೆ.

    ಯಾವುದೇ ಒಂದು ಬಡಾವಣೆಯನ್ನು ನಿರ್ಮಿಸಲು ಸರ್ಕಾರದ ನಿಯಮಗಳನ್ನು ಆಧರಿಸಿ ಮುಂದಡಿ ಇಡಬೇಕು. ಆದರೆ, ಪ್ರಾಧಿಕಾರದ ಆಯುಕ್ತರು ತಮ್ಮ ಕಚೇರಿ ಆದೇಶ ಹೊರಡಿಸಿ ಹೊಸದಾಗಿ ರಚಿಸಲಿರುವ ಬಡಾವಣೆಗೆ ಭೂಸ್ವಾಧೀನಮಪಡಿಸಿಕೊಳ್ಳಲು ಅಗತ್ಯವಿರುವ ಜಮೀನನ್ನು ಗುರುತಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ವೇ ಕಾರ್ಯವನ್ನು ಬೇಗನೆ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ.

    ವಿಶೇಷವೆಂದರೆ ಮುಂದುವರಿದ ಕಾರಂತ ಬಡಾವಣೆಗೆ ಗುರುತಿಸಲು ಉದ್ದೇಶಿಸಿರುವ 11 ಹಳ್ಳಿಗಳಿಗೆ ಸೇರಿದ 2,095 ಎಕರೆ ಪ್ರದೇಶವು ಹಸಿರು ವಲಯದಲ್ಲಿ ಬರುತ್ತದೆ. ಜತೆಗೆ ಅರ್ಕಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟಿದೆ. ಇಂತಹ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಏಕಾಏಕಿಯಾಗಿ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ನಿಯಮವನ್ನು ತಿಳಿದಿದ್ದರೂ, ಬಿಡಿಎ ಸದ್ದಿಲ್ಲದೆ ಸರ್ವೆ ನಡೆಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಹಾಲಿ ಕಾರಂತ ಲೇಔಟ್ 17 ಗ್ರಾಮಗಳಿಗೆ ಸೇರಿದ ಒಟ್ಟು 3,546 ಎಕರೆ ಜಮೀನಿನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಜಮೀನಿನ ಒಡೆತನ ಹೊಂದಿರುವ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಲೇಔಟ್ ಪೂರ್ಣವಾಗಿ ಸಿದ್ಧಗೊಂಡ ನಂತರವೇ ಅಭಿವೃದ್ಧಿಪಡಿಸಿದ ಶೇ.40 ಜಮೀನು ರೈತರಿಗೆ ಹಸ್ತಾಂತರವಾಗುತ್ತದೆ. ಈ ಪ್ರಕ್ರಿಯೆ ಬಡಾವಣೆ ರಚನೆ ಕೆಲಸಗಳು ಪೂರ್ಣಗೊಂಡ ನಂತರವಷ್ಟೇ ರೈತರಿಗೆ ನೈಜ ರೂಪದಲ್ಲಿ ಪರಿಹಾರ ಕೈಸೇರುತ್ತದೆ. ಹೀಗಿದ್ದರೂ, ಪ್ರಾಧಿಕಾರವು ಹೊಸದಾಗಿ 12 ಗ್ರಾಮಗಳಲ್ಲಿ ಸರ್ವೇ ನಡೆಸಿ ಪ್ರಾಥಮಿಕ ಭೂಸ್ವಾಧೀನ ಪ್ರಕ್ರಿಯೆಗೆ ಉತ್ಸಾಹ ತೋರಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಸರ್ವೇ ಕಾರ್ಯಕ್ಕೆ ರೈತರ ವಿರೋಧ:

    ಮುಂದುವರಿದ ಬಡಾವಣೆ ರಚನೆ ಸಂಬಂಧ ಸರ್ವೇ ಕಾರ್ಯಕ್ಕೆ ಮುಂದಾಗಿರುವ ನಡೆಗೆ ರೈತರು ತೀವ್ರ ಆಕ್ಷೇಪವನ್ನು ಹೊರಹಾಕಿದ್ದಾರೆ. ಈಗಾಗಲೇ ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳ ರೈತರು ಜಮೀನು ಕಳೆದುಕೊಂಡು ಕೃಷಿಯಿಂದ ಹೊರಬರುವಂತಾಗಿದೆ. ಪರಿಹಾರ ಇನ್ನೂ ಕೈಸೇರದೆ, ಇತ್ತ ಅನ್ಯ ಉದ್ಯೋಗ ಕಂಡುಕೊಳ್ಳದೆ ಅಕ್ಷರಶ: ಬೀದಿಗೆ ಬಿದ್ದಿದ್ದಾರೆ. ಜತೆಗೆ ಈ ಭಾಗದಲ್ಲಿದ್ದ ಹೈನುಗಾರಿಕೆ, ಕುಕ್ಕುಟೋದ್ಯಮ ಬಂದ್ ಆಗಿದೆ. ಈಗ ಮತ್ತೆ ಉಳ್ಳವರಿಗಾಗಿ ಬಡಾವಣೆ ನಿರ್ಮಿಸಲು ನಮ್ಮ ಬದುಕನ್ನು ಕಳೆದುಕೊಳ್ಳಬೇಕೆ ಎಂಬ ಪ್ರಶ್ನೆಯನ್ನು ಇಲ್ಲಿನ ರೈತಾಪಿ ವರ್ಗ ಸರ್ಕಾರದ ಮುಂದಿಟ್ಟಿದೆ.

    ಸರ್ವೇಗೆ 3 ತಂಡಗಳ ರಚನೆ:

    ಮುಂದುವರಿದ ಕಾರಂತ ಲೇಔಟ್ ರಚನೆ ಸಂಬಂಧ ಸರ್ವೇ ನಡೆಸಲು ಪ್ರಾಧಿಕಾರವು ಭೂಸ್ವಾಧೀನಾಧಿಕಾರಿಗಳ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿದೆ. ಇವರಿಗೆ ಆಯಾ ಹಳ್ಳಿಗಳ ಪಟ್ಟಿ ನೀಡಿ ಭೂಮಾಪಕರನ್ನೂ ಕೊಡಲಾಗಿದೆ. ಜತೆಗೆ ಗ್ರಾಮಗಳ ಸಂಭಾವ್ಯ ಸ್ವಾಧೀನಪಡಿಸಿಕೊಳ್ಳಬಹುದಾದ ಜಮೀನುಗಳ ಸರ್ವೇ ಸಂಖ್ಯೆಗಳನ್ನು ನೀಡಿ ಶೀಘ್ರವೇ ವರದಿ ಸಲ್ಲಿಸುವಂತೆ ಬಿಡಿಎ ಆಯುಕ್ತರು ಹೊರಡಿಸಿರುವ ಕಚೇರಿ ಆದೇಶದಲ್ಲಿ ಸೂಚಿಸಿದ್ದಾರೆ.

    ಸರ್ವೇಗೆ ಒಳಪಟ್ಟಿರುವ ಹಳ್ಳಿಗಳು:

    ಚಿಕ್ಕಬಾಣಾವರ, ದೊಡ್ಡಬ್ಯಾಲಕೆರೆ, ಜಾರಕ್‌ಬಂಡೆಕಾವಲ್, ಕಸಘಟ್ಟಪುರ, ಕೆಂಪಾಪುರ, ಕೊಂಡಶೆಟ್ಟಿಹಳ್ಳಿ, ಕುಂಬಾರಹಳ್ಳಿ, ಲಿಂಗರಾಜಪುರ, ಲಿಂಗರಾಜಸಾಗರ, ಮಾವಳ್ಳಿಪುರ, ಮೈಯಪ್ಪನಹಳ್ಳಿ.

    ಕಾರಂತ ಲೇಔಟ್‌ಗಾಗಿ ಜಮೀನು ಕಳೆದುಕೊಂಡಾಗ ರೈತರು ಬೆಂಕಿಗೆ ಬಿದ್ದಿದ್ದರು. ಈಗ ಮುಂದುವರಿದ ಬಡಾವಣೆ ರಚಿಸಿದರೆ ನಾವುಗಳು ಬೆಂಕಿಯಿಂದ ಬಾಣಲಿಗೆ ಬೀಳಬೇಕಾಗುತ್ತದೆ. ಹಸಿರು ವಲಯದಲ್ಲಿ ಲೇಔಟ್ ರಚಿಸಬಾರದೆಂದು ಸರ್ಕಾರ ನಿಯಮ ರೂಪಿಸಿದೆ. ಆದರಿಗ ಬಿಡಿಎ ಕಾನೂನುಬಾಹಿರವಾಗಿ ಸರ್ವೇ ನಡೆಸುತ್ತಿರುವುದಕ್ಕೆ ಸರ್ಕಾರ ಸಮಜಾಯಿಷಿ ನೀಡಲಿ.
    – ಎಂ.ರಮೇಶ್, ಕಾರಂತ ಲೇಔಟ್ ಭಾಗದ ರೈತ (ರಾಮಗೊಂಡನಹಳ್ಳಿ)

    ಪಿಆರ್‌ಆರ್ ಹಾಗೂ ಕಾರಂತ ಲೇಔಟ್ ನಿರ್ಮಾಣಕ್ಕಾಗಿ ಜಮೀನು ವಶಕ್ಕೆ ಪಡೆದಿರುವ ಬಿಡಿಎಯಿಂದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದರೂ, ಸರ್ಕಾರ ಗಂಭೀರೆ ಹೊಂದಿದಂತಿಲ್ಲ. ಮುಂದುವರಿದ ಕಾರಂತ ಬಡಾವಣೆ ರಚನೆಗೆ ರೈತರ ವಿರೋಧ ಇದೆ.
    – ರಘು, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts