More

    ಕಂಟೈನ್ಮೆಂಟ್ ಝೋನ್ ಮೇಲೆ ಡ್ರೋಣ್ ಕಣ್ಗಾವಲು!

    ತುಮಕೂರು: ಕರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿರುವ ನಗರದ ಪೂರ್‌ಹೌಸ್ ಕಾಲನಿ (ಪಿಎಚ್ ಕಾಲನಿ) ಮೇಲೆ ತೀವ್ರ ನಿಗಾ ಇಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಧ್ವನಿವರ್ಧಕ ಡ್ರೋಣ್ ಬಳಕೆ ಮಾಡುತ್ತಿದೆ.

    ಬೆಂಗಳೂರು ಮೂಲದ ಜನರಲ್ ಏರೋನಾಟಿಕ್ಸ್ ಸಂಸ್ಥೆ ನಿರ್ಮಿಸಿರುವ ಧ್ವನಿವರ್ಧಕ ಡ್ರೋಣ್ ಗಲ್ಲಿಗಲ್ಲಿಯಲ್ಲಿನ ಚಟುವಟಿಕೆ ಸೆರೆಹಿಡಿಯುವುದಲ್ಲದೆ ಕರೊನಾ ಜಾಗೃತಿ ಮೂಡಿಸುತ್ತದೆ. ಕಿಷ್ಕಿಂಧೆಯಂತಿರುವ ಈ ಪ್ರದೇಶದ ಮೇಲೆ ನಿಗಾ ಇಡಲು ಧ್ವನಿವರ್ಧಕ ಡ್ರೋನ್ ಸಹಕಾರಿಯಾಗಲಿದೆ.

    5 ಕಿ.ಮೀ.30 ನಿಮಿಷ ಹಾರಾಟ: ಈ ಡ್ರೋಣ್ 5 ಕಿ.ಮೀ., ಪ್ರದೇಶದಲ್ಲಿ 30 ನಿಮಿಷ ಹಾರಾಟ ನಡೆಸಲಿದೆ. ಬಳಿಕ ಬ್ಯಾಟರಿ ರೀಚಾರ್ಜ್ ಮಾಡಿ ಮತ್ತೆ ಹಾರಾಟಕ್ಕೆ ಸಿದ್ಧಪಡಿಸಬಹುದು. ಜನರಲ್ ಏರೋನಾಟಿಕ್ಸ್‌ನ ಅಭಿಷೇಕ್ ಬರ್ಮನ್ ಈ ಡ್ರೋಣ್ ರೂಪಿಸಿದ್ದಾರೆ ಎನ್ನುತ್ತಾರೆ ಬೆಂಗಳೂರಿನ ವಿಶಾಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಡಾ.ಕಿರಣ್‌ಕುಮಾರ್. ಅಭಿಷೇಕ್ ಬರ್ಮನ್ ತಂಡ ಸೀಲ್‌ಡೌನ್ ಪ್ರದೇಶದಲ್ಲಿ ಉಚಿತವಾಗಿ ಡ್ರೋಣ್ ನೆರವು ನೀಡುತ್ತಿದೆ.

    ಸಹಾಯಕ ತಂಡ ರಚನೆ: ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ವೈರಸ್ ನಿಯಂತ್ರಣಕ್ಕೆ ತುಮಕೂರು ಪಾಲಿಕೆಯು ಏ.24ರಂದು ಸಹಾಯಕ ತಂಡ ರಚಿಸಿದೆ. ಇನ್ಸಿಡೆಂಟ್ ಕಮಾಂಡರ್ ಆಗಿ ಟೂಡಾ ಆಯುಕ್ತ ಸಿ.ಯೋಗಾನಂದ್ ಇರಲಿದ್ದು, ಪಾಲಿಕೆಯ ಪರಿಸರ ಇಂಜಿನಿಯರ್ ಕೆ.ಎಸ್.ಮೃತ್ಯುಂಜಯ ಅವರನ್ನು ಉಪ ಇನ್ಸಿಡೆಂಟ್ ಕಮಾಂಡರ್ ಆಗಿ ನಿಯೋಜಿಸಲಾಗಿದೆ. ಈ ತಂಡದಲ್ಲಿ ಪರಿಸರ ಇಂಜಿನಿಯರ್ ಪಿ.ಕೆ.ಮೋಹನ್ ಕುಮಾರ್, ಕಂದಾಯ ಅಧಿಕಾರಿಗಳಾದ ಸತ್ಯವೇಲು, ನೀಲಲೋಚನ ಪ್ರಭು, ಜೆಇಗಳಾದ ರಾಥೋಡ್ ನಾಯ್ಕ್, ಕೆ.ಮೋನಿಷಾ, ಹಿರಿಯ ಆರೋಗ್ಯ ನಿರೀಕ್ಷಕ ಎಚ್.ಎನ್.ಚಿಕ್ಕಸ್ವಾಮಿ ಸೇರಿ 12 ಮಂದಿ ಇರಲಿದ್ದಾರೆ. ಈ ತಂಡವು ಜಿಲ್ಲಾಧಿಕಾರಿಗಳು ಹಾಗೂ ಇನ್ಸಿಡೆಂಟ್ ಕಮಾಂಡರ್ ನೀಡುವ ಸೂಚನೆಗಳನ್ನು ಪಾಲಿಸಲಿದೆ.

    ಆಟೋ ಚಾಲಕರಿಗೆ ನೆರವು ನೀಡಿ: ದೆಹಲಿ ಹಾಗೂ ತೆಲಂಗಾಣ ಸರ್ಕಾರಗಳ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಆಟೋ ಚಾಲಕರಿಗೆ ನೆರವು ನೀಡುವಂತೆ ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.ರಾಜ್ಯದಲ್ಲಿ 6 ಲಕ್ಷ ಮಂದಿ ಆಟೋ ನಂಬಿಕೊಂಡಿದ್ದಾರೆ. ಕೇಂದ್ರ ನೀಡಿರುವ ಪಡಿತರದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಇದನ್ನು ಮನಗಂಡಿರುವ ದೆಹಲಿ, ತೆಲಂಗಾಣ ಸರ್ಕಾರ ಅವರ ಕುಟುಂಬಕ್ಕೆ 5 ಸಾವಿರ ರೂ. ಸಹಾಯಧನ ನೀಡಿವೆ. ರಾಜ್ಯ ಸರ್ಕಾರ ಸಹ ಇವರಿಗೆ ನೆರವಾಗಬೇಕು ಎಂದು ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ವಿ.ಪ್ರತಾಪ್, ಉಪಾಧ್ಯಕ್ಷ ಹರೀಶ್, ತಾಲೂಕು ಘಟಕದ ಅಧ್ಯಕ್ಷ ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಕುಪ್ಪೂರು ರಂಗಪ್ಪನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಟಿ.ರಾಮಸ್ವಾಮಿ ಒತ್ತಾಯಿಸಿದರು.

    ಖರ್ಜೂರ ಬಾಕ್ಸ್ ವಿತರಣೆ: ಪಿಎಚ್ ಕಾಲನಿಯ 400 ಕುಟುಂಬಗಳಿಗೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಆಹಾರದ ಕಿಟ್ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಖರ್ಜೂರದ ಬಾಕ್ಸ್‌ಗಳನ್ನು ಮನೆಮನೆಗೆ ತಲುಪಿಸಿದರು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ ಮಾಡಬೇಕು ಎಂದು ರಫೀಕ್ ಮನವಿ ಮಾಡಿದ್ದಾರೆ.

    ಕರೊನಾ ಯೋಧರ ಮೇಲೆ ಹಲ್ಲೆ ಮಾಡುವವರಿಗೆ ಗುಂಡಿಕ್ಕಿ: ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ಮಾಡುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು. ಜತೆಗೆ ಪಾದರಾಯನಪುರ ಘಟನೆ ಹಿಂದಿರುವ ಚಾಮರಾಜಪೇಟೆ ಶಾಸಕ ಬಿ.ಝಡ್.ಜಮೀರ್ ಖಾನ್ ಅವರನ್ನು ರಾಜ್ಯ ಸರ್ಕಾರ ಬಂಧಿಸಬೇಕು ಎಂದು ವಿಧಾನಪರಿಷತ್ ಸದಸ್ಯ, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಸಾರಯಾಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಸಂದರ್ಭದಲ್ಲಿ ಜಮೀರ್‌ಗೆ ಸರ್ಕಾರ ಪಾಠ ಕಲಿಸಬೇಕಿತ್ತು. ಆದರೆ, ಆ ಕ್ರಮಕೈಗೊಳ್ಳದಿರುವುದು ಈ ಅನಾಹುತಕ್ಕೆ ಕಾರಣವಾಯಿತು ಎಂದರು. ಜಮೀರ್ ಅಹ್ಮದ್ ಪ್ರಚೋದನಕಾರಿ, ಬೇಜಾವಾಬ್ದಾರಿಯುತ ಹೇಳಿಕೆಯಿಂದಾಗಿ ಪಾದರಾಯನಪುರದಲ್ಲಿ ದಾಂಧಲೆ ನಡೆದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts