More

    ಒಕ್ಕಲಿಗ ಮತಬ್ಯಾಂಕ್​ಗೆ ಬಿಜೆಪಿ ಕಣ್ಣು

    ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಜ್ಯಕ್ಕೆ ಅಚ್ಚರಿಯಾಗುವ ರೀತಿ ಅವಕಾಶಗಳು ಲಭ್ಯವಾಗಿವೆ. ಸಚಿವ ಸಿ.ಟಿ.ರವಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದು, ರಾಜ್ಯದಿಂದ ಈ ಹುದ್ದೆಗೆ ಆಯ್ಕೆಯಾಗಿರುವ ಎರಡನೇ ವ್ಯಕ್ತಿಯಾಗಿದ್ದಾರೆ. ಹಿಂದೆ ಅನಂತಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ (ತೇಜಸ್ವಿ ಸೂರ್ಯ) ಹಾಗೂ ರಾಷ್ಟ್ರೀಯ ವಕ್ತಾರ ಹುದ್ದೆಯೂ (ರಾಜೀವ ಚಂದ್ರಶೇಖರ್) ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಸಿಕ್ಕಿದೆ.

    ಇನ್ನು ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಇರುವುದರಿಂದ ಸಿ.ಟಿ.ರವಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ. ಪ್ರಧಾನ ಕಾರ್ಯದರ್ಶಿಗೆ 3-4 ರಾಜ್ಯಗಳ ಉಸ್ತುವಾರಿ ಇರುತ್ತದೆ. ಆದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

    ರವಿ ಆಯ್ಕೆಗೆ ಕಾರಣಗಳೇನು?

    ಸಿ.ಟಿ.ರವಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆ ಹುದ್ದೆ ನಳಿನ್​ಕುಮಾರ್ ಕಟೀಲ್ ಪಾಲಾಗಿತ್ತು. ಆದರೆ ಅವರನ್ನು ತಮಿಳುನಾಡು ಹಾಗೂ ಪಾಂಡಿಚೇರಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಅಲ್ಲಿನ ಅವರ ಕಾರ್ಯವೈಖರಿ ಪಕ್ಷದ ಮುಖಂಡರನ್ನು ಸೆಳೆದಿದೆ ಎಂದೇ ಹೇಳಲಾಗುತ್ತಿದೆ. ರವಿ ನೇಮಕದ ಮೂಲಕ ಒಕ್ಕಲಿಗ ಮತಬ್ಯಾಂಕ್ ಮೇಲೆ ಪಕ್ಷ ಕಣ್ಣಿಟ್ಟಿರುವುದು ಸ್ಪಷ್ಟವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿರುವ ಲಿಂಗಾಯತರು ಬಿಜೆಪಿ ಜತೆಗಿದ್ದಾರೆ. ಒಳ ಮೀಸಲಾತಿ ಹೆಸರಿನಲ್ಲಿ ದಲಿತರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಹಿಂದುಳಿದವರನ್ನು ಸೆಳೆಯುವ ಪ್ರಯತ್ನವೂ ಆರಂಭವಾಗಿದೆ. ಇದರ ಜತೆಗೆ ಒಕ್ಕಲಿಗ ಮತಬ್ಯಾಂಕ್ ಸೆಳೆಯಬೇಕಾಗಿದೆ. ಡಾ.ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಪ್ರಬಲವಾಗಿರುವ ಡಾ. ಸುಧಾಕರ್ ಅವರನ್ನು ಒಕ್ಕಲಿಗರ ಮತೆ ಸೆಳೆಯಲು ಬಳಸಲಾಗುತ್ತಿದ್ದು ರವಿಯಂತಹ ಮಾತುಗಾರ ಹಾಗೂ ಸಂಘಟನೆ ಸಾಮರ್ಥ್ಯ ಇರುವವರನ್ನು ಪ್ರಮುಖ ಹುದ್ದೆಗೆ ತಂದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ನೇಮಕ ಮಾಡಲಾಗಿದೆ.

    ಬಿಜೆಪಿಯ ಹೊಸ ಪದಾಧಿಕಾರಿಗಳಿಗೆ ಅಭಿನಂದನೆಗಳು. ಭಾರತದ ಜನರಿಗೆ ನಿಸ್ವಾರ್ಥವಾಗಿ, ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಪಕ್ಷದ ಸಂಪ್ರದಾಯವನ್ನು ನೀವು ಎತ್ತಿ ಹಿಡಿಯುತ್ತೀರಿ ಎಂದು ನನಗೆ ವಿಶ್ವಾಸವಿದೆ.

    | ನರೇಂದ್ರ ಮೋದಿ ಪ್ರಧಾನಮಂತ್ರಿ 

    ರಾಜ್ಯ ಉಸ್ತುವಾರಿ ರಾವ್​ಗೆ ಕೊಕ್

    ಕರ್ನಾಟಕ, ಕೇರಳ, ತಮಿಳುನಾಡು ಉಸ್ತುವಾರಿಯಾಗಿದ್ದ ಮುರಳೀಧರ ರಾವ್​ರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದಲ್ಲಿ ರಾವ್ ರಾಜಕೀಯ ನಿರ್ವಹಣೆ ಬಗ್ಗೆ ವರಿಷ್ಠರಿಗೆ ಮೊದಲಿನಿಂದಲೂ ಅಸಮಾಧಾನ ಇತ್ತು. ವಿಧಾನಸಭೆಯಲ್ಲಿ ಅಸ್ಪಷ್ಟ ಜನಾದೇಶ ಸಾಧ್ಯತೆ ಊಹಿಸಿರಲಿಲ್ಲ. ಅಗತ್ಯಬಿದ್ದಲ್ಲಿ ಜೆಡಿಎಸ್ ಬೆಂಬಲ ಪಡೆದುಕೊಳ್ಳಲು ಪೂರ್ವತಯಾರಿ ಕೂಡ ನಡೆಸಿರಲಿಲ್ಲ. ಕೇರಳ, ತಮಿಳುನಾಡಿನಲ್ಲೂ ನಿರೀಕ್ಷಿತ ನಿರ್ವಹಣೆ ತೋರಿಲ್ಲ ಎಂಬುದು ಅವರನ್ನು ಕೈಬಿಡಲು ಪ್ರಮುಖ ಕಾರಣವೆಂದು ಹೇಳಲಾಗಿದೆ. ಕರ್ನಾಟಕ ಬಿಜೆಪಿಗೆ ಹೊಸ ಉಸ್ತುವಾರಿ ನೇಮಕ ಗೊಳ್ಳುವುದು ಇದರಿಂದ ಖಚಿತವಾಗಿದೆ. ರಾಜ್ಯ ಬಿಜೆಪಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಕೈಲಾಶ್ ವಿಜಯವರ್ಗಿಯ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಒಕ್ಕಲಿಗ ಮತಬ್ಯಾಂಕ್​ಗೆ ಬಿಜೆಪಿ ಕಣ್ಣು

    ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ಸಿ.ಟಿ ರವಿ, ತೇಜಸ್ವಿ ಸೂರ್ಯ ಅವರಿಗೆ ಉನ್ನತ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts